ಬೆಂಗಳೂರು: ರಾಜ್ಯದ ಡೀಮ್ಡ್, ಖಾಸಗಿ ಹಾಗೂ ಸ್ವಾಯತ್ತ ವಿಶ್ವವಿದ್ಯಾಲಯಗಳಲ್ಲಿ ಸಮರ್ಪಕವಾಗಿ ಕನ್ನಡ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್.ಜಿ.ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಶನಿವಾರ ಉನ್ನತ ಶಿಕ್ಷಣ ಪರಿಷತ್ ಅಧಿಕಾರಿಗಳ ಹಾಗೂ ಕುಲಪತಿಗಳ ಸಭೆಯ ನಡೆಯಿತು.
ಡೀಮ್ಡ್, ಖಾಸಗಿ, ಸ್ವಾಯತ್ತ ವಿವಿಗಳಲ್ಲಿ ಕನ್ನಡ ಭಾಷೆಯನ್ನು ಸಮರ್ಪಕವಾಗಿ ಕಲಿಸಬೇಕು ಮತ್ತು ಪದವಿ, ವೃತ್ತಿ ಶಿಕ್ಷಣಕ್ಕೆ ಸಂಬಂಧಿಸಿದ ಕೋರ್ಸ್‌ಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು. ಕನ್ನಡಿಗರಿಗೆ ಉದ್ಯೋಗ ನೀಡುವ ಜತೆಗೆ ಕನ್ನಡ ಸಂಸ್ಕೃತಿಯನ್ನು ಬಿಂಬಿಸುವ ಕೆಲಸ ಮಾಡಬೇಕು ಎಂದು ನಗರದ ಅರಮನೆ ರಸ್ತೆಯ ಉನ್ನತ ಶಿಕ್ಷಣ ಪರಿಷತ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕುಲಪತಿಗಳಿಗೆ ಪ್ರಾಧಿಕಾರದ ಅಧ್ಯಕ್ಷರು ಸಲಹೆ ನೀಡಿದರು.
ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ, ಕೃಷಿ ವಿವಿ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ತೋಟಗಾರಿಕಾ ವಿವಿ ಸೇರಿದಂತೆ ವೃತ್ತಿ ಶಿಕ್ಷಣ ನೀಡುವ ವಿವಿಗಳಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಕಡ್ಡಾಯವಾಗಿ ಕಲಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಅಂಕಗಳನ್ನು ನಿಗದಿ ಮಾಡಬೇಕು. ಕನ್ನಡ ಮತ್ತು ಕನ್ನಡೇತರ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪಠ್ಯಕ್ರಮ ರಚನೆ ಮಾಡಿ ಕಲಿಸುವ ಸಂಬಂಧ ಸಿಂಡಿಕೇಟ್‌ನಲ್ಲಿ ನಿರ್ಧಾರ ತೆಗೆದುಕೊಳ್ಳುವಂತೆ ಸೂಚಿಸಿದರು.
ಡೀಮ್ಡ್, ಖಾಸಗಿ ಹಾಗೂ ಸ್ವಾಯತ್ತ ವಿವಿಗಳಲ್ಲಿ ಬಿ.ಎ., ಬಿ.ಕಾಂ., ಬಿಬಿಎಂ ಮೊದಲಾದ ಕೋರ್ಸ್‌ಗಳಲ್ಲಿ ಎರಡು ಸೆಮಿಸ್ಟರ್‌ಗೆ ಕನ್ನಡ ಅಳವಡಿಸಿಕೊಳ್ಳಬೇಕು. ಪಠ್ಯಪುಸ್ತಕಕ್ಕೆ ಸಂಬಂಧಿಸಿದಂತೆ ಸಮಿತಿಯೊಂದನ್ನು ರಚನೆ ಮಾಡಿಕೊಳ್ಳಬೇಕು. ವ್ಯವಹಾರಿಕ ಕನ್ನಡ ಅದರಲ್ಲಿ ಹೆಚ್ಚಿರಬೇಕು ಎಂದರು.
ಭಾಷೆಯನ್ನು ಅಚ್ಚುಕಟ್ಟಾಗಿ ಕಲಿಸುವ ನಿಟ್ಟಿನಲ್ಲಿ ರಾಜ್ಯ ವಿಶ್ವವಿದ್ಯಾಲಯಗಳು ವಿಶ್ವವಿದ್ಯಾಲಯ ಅನುದಾನ ಆಯೋಗದ ಸೂಚನೆಯಂತೆ ಕ್ರೆಡಿಟ್ ಬೇಸ್ಡ್ ಛಾಯ್ಸ ಸಿಸ್ಟಮ್ ಅನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿಕೊಳ್ಳಬೇಕು. ಡೀಮ್ಡ್, ಖಾಸಗಿ ಮತ್ತು ಸ್ವಾಯತ್ತ ವಿವಿಗಳಲ್ಲಿ ಕನ್ನಡ ಅನುಷ್ಠಾನದ ಬಗ್ಗೆ ಪರಿಶೀಲಿಸಲು ಉನ್ನತ ಶಿಕ್ಷಣ ಪರಿಷತ್ ಪ್ರತಿನಿಧಿ, ವಿವಿ ಪ್ರತಿನಿಧಿ ಹಾಗೂ ಶಿಕ್ಷಣ ತಜ್ಞರನ್ನು ಒಳಗೊಂಡ ಹೈಪವರ್ ಸಮಿತಿಯೊಂದನ್ನು ರಚಿಸಲು ತೀರ್ಮಾನಿಸಲಾಯಿತು.
ಪರಿಷತ್ ಉಪಾಧ್ಯಕ್ಷ ಎಸ್.ವಿ.ರಂಗನಾಥ್, ಕಾರ್ಯನಿರ್ವಹಾಕ ನಿರ್ದೇಶಕ ಪ್ರೊ.ಎಸ್.ಎ.ಕೋರಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳೀಧರ್ ಹಾಗೂ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಅಜಯ್ ನಾಗಭೂಷಣ್ ಸೇರಿದಂತೆ ರಾಜ್ಯದ ಡೀಮ್ಡ್, ಖಾಸಗಿ ಹಾಗೂ ಸ್ವಾಯತ್ತ ವಿಶ್ವವಿದ್ಯಾಲಯದ ಸುಮಾರು 40ಕ್ಕೂ ಅಧಿಕ ಕುಲಪತಿಗಳು ಉಪಸ್ಥಿತರಿದ್ದರು.