Advertisement

ಡೀಮ್ಡ್ ಫಾರೆಸ್ಟ್‌ ಅವೈಜ್ಞಾನಿಕ : ಆರ್‌. ಅಶೋಕ್‌

11:06 PM Dec 22, 2021 | Team Udayavani |

ಬೆಳಗಾವಿ: ರಾಜ್ಯದಲ್ಲಿ 10.11 ಲಕ್ಷ ಹೆಕ್ಟೇರ್‌ ಡೀಮ್ಡ್ ಫಾರೆಸ್ಟ್‌ ಜಮೀನು ಪೈಕಿ 6.64 ಲಕ್ಷ ಹೆಕ್ಟೇರ್‌ ಅನ್ನು ಕಂದಾಯ ಇಲಾಖೆಗೆ ಪಡೆದುಕೊಳ್ಳಲು ಕ್ರಮ ಕೈಗೊಳ್ಳಲಾಗಿದ್ದು, ಅರಣ್ಯ ಇಲಾಖೆಯಿಂದಲೂ ಒಪ್ಪಿಗೆ ದೊರೆತಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿದರು.

Advertisement

ಕಾಂಗ್ರೆಸ್‌ ಸದಸ್ಯ ಕೆ.ಪ್ರತಾಪಚಂದ್ರ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅರಣ್ಯ ಭೂಮಿ ವಿಚಾರದಲ್ಲಿ ಸುಪ್ರೀಂಕೋರ್ಟ್‌ ಹಾಗೂ ಹಸಿರು ಪೀಠದ ನಿಯಮಗಳು ಕಠಿನವಾಗಿವೆ. ಈ ಹಿಂದೆ ಜಿಲ್ಲಾಧಿಕಾರಿಗಳು ಅನೇಕ ಕಡೆ ಸರಕಾರಿ ಭೂಮಿಯನ್ನು ಅರಣ್ಯ ಭೂಮಿ ಎಂದು ಅರಣ್ಯ ಇಲಾಖೆ ಕೇಳದಿದ್ದರೂ, ಬರೆದುಕೊಟ್ಟಿದ್ದರಿಂದ ಡೀಮ್ಡ್ ಫಾರೆಸ್ಟ್‌ ಎಂದಾಯಿತು. ಡೀಮ್ಡ್ ಫಾರೆಸ್ಟ್‌ ಜಮೀನು ಮರಳಿ ಪಡೆಯುವ ನಿಟ್ಟಿನಲ್ಲಿ 6-7 ತಿಂಗಳುಗಳಿಂದ ಅರಣ್ಯ ಇಲಾಖೆ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಹಲವು ಸಭೆ ನಡೆಸಿದ್ದೇನೆ. ಕೆಲವು ಪ್ರಕರಣಗಳು ಸುಪ್ರೀಂಕೋರ್ಟ್‌ ಇದ್ದು, ಅಫಿದವಿಟ್‌ ಸಲ್ಲಿಸಲು ಕಾನೂನು ಇಲಾಖೆಯೊಂದಿಗೂ ಚರ್ಚಿಸಲಾಗಿದೆ ಎಂದು ವಿವರಿಸಿದರು.
ಈಗಾಗಲೇ ಡೀಮ್ಡ್ ಫಾರೆಸ್ಟ್‌ ಪ್ರದೇಶದಲ್ಲಿ ಉಳುಮೆ ಮಾಡುತ್ತಿದ್ದರೆ ಅಥವಾ ಮನೆ ಕಟ್ಟಿದ್ದರೆ ಅಂತಹವರಿಗೆ ಅರಣ್ಯ ಇಲಾಖೆಯಿಂದ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ಈ ವೇಳೆ ಮಧ್ಯಪ್ರವೇಶಿಸಿದ ಸಚಿವ ಸುನಿಲ್‌ಕುಮಾರ್‌ ಅವರು, ಇದು 1993-94ರಲ್ಲಿನ ಸಮಸ್ಯೆ. ಇದರ ಪರಿಹಾರಕ್ಕೆ ಸರಕಾರ ಬದ್ಧವಾಗಿದೆ ಎಂದರು.

ಧರಣಿಗೆ ಮುಂದಾದ ಪ್ರತಾಪಚಂದ್ರ ಶೆಟ್ಟಿ
ಉಡುಪಿ ಜಿಲ್ಲೆಯ ಕುಂದಾಪುರ, ಉಡುಪಿ, ಕಾರ್ಕಳ, ಬೈಂದೂರು, ಬ್ರಹ್ಮಾವರ, ಕಾಪು, ಹೆಬ್ರಿಗಳಲ್ಲಿನ ಡೀಮ್ಡ್ ಫಾರೆಸ್ಟ್‌ ಸಮಸ್ಯೆ ಹಲವಾರು ವರ್ಷಗಳಿಂದ ಇದೆ. 94(ಸಿ)ಕಲಂ ಅಡಿ ಮಂಜೂರಾದ ಮೇಲೆ ಡೀಮ್ಡ್ ಫಾರೆಸ್ಟ್‌ ನಿಯಮ ಅನ್ವಯಿಸಿ ತೊಂದರೆ ನೀಡುತ್ತಿದ್ದಾರೆ. ನಮ್ಮ ಸಮಸ್ಯೆಗೆ ಪರಿಹಾರ ದೊರೆಯಲೇ ಬೇಕು, ಸರಕಾರದಿಂದ ಸ್ಪಷ್ಟ ಉತ್ತರ ಬಾರದಿದ್ದರೆ ಸದನದಲ್ಲೇ ಮಲಗಲು ಶಾಲು ಸಹಿತ ಬಂದಿದ್ದೇನೆ ಎಂದರಲ್ಲದೆ, ಸಚಿವರ ಉತ್ತರದಿಂದ ಸಮಾಧಾನಗೊಳ್ಳದೆ ಬಾವಿಗಳಿದು ಧರಣಿಗೆ ಮುಂದಾದರು. ಈ ಸಂದರ್ಭದಲ್ಲಿ ಪ್ರತಾಪಚಂದ್ರ ಶೆಟ್ಟಿ ಹಾಗೂ ಸಚಿವ ಸುನಿಲ್‌ಕುಮಾರ್‌ ನಡುವೆ ಮಾತಿನ ಚಕಮಕಿ ನಡೆಯಿತು.

ಅನಂತರ ಸಚಿವ ಅಶೋಕ್‌ ಅವರು, ನಿಮ್ಮ ಭಾವನೆಗಳಿಗೆ ಪೂರಕವಾಗಿ ಕ್ರಮ ಕೈಗೊಳ್ಳಲು ಸರಕಾರ ಸಿದ್ಧವಿದೆ. ನಾನು ಭರವಸೆ ನೀಡುವೆ ಎಂದರು. ಆಗ ಮಧ್ಯಪ್ರವೇಶಿಸಿದ ಸಭಾಪತಿಯವರು, ಸಚಿವರು ಸ್ಪಷ್ಟ ಭರವಸೆ ನೀಡಿದ್ದು, ಧರಣಿಯಿಂದ ಹಿಂದೆ ಸರಿಯಿರಿ ಎಂದು ಸಲಹೆ ನೀಡಿದರು. ಬಳಿಕ ಪ್ರತಾಪಚಂದ್ರ ಶೆಟ್ಟಿ ಅವರು ತಮ್ಮ ಆಸನಕ್ಕೆ ಮರಳಿದರು.

Advertisement

ಇದನ್ನೂ ಓದಿ:ಕುಂದಾಪುರ: ಕ್ರಿಸ್ಮಸ್‌ ಪ್ರಾರ್ಥನೆಗೆ ಶರತ್ತುಬದ್ಧ ಅನುಮತಿ

ಸರಕಾರಿ ಜಮೀನು ಕಬಳಿಕೆ ವಿರುದ್ಧ ಕ್ರಮ
ನಕಲಿ ದಾಖಲೆ ಸೃಷ್ಟಿಸಿ ಸರಕಾರಿ ಜಮೀನುಗಳನ್ನು ಕಬಳಿಸಿದವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ. ಒತ್ತುವರಿ ತೆರವು ಮಾಡುತ್ತೇವೆ. ಈ ನಿಟ್ಟಿನಲ್ಲಿ ಈಗಾಗಲೇ ಸದನ ಸಮಿತಿ ಹಾಗೂ ವಿಶೇಷ ನ್ಯಾಯಾಲಯ ರಚಿಸಲಾಗಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿದರು.

ಕಾಂಗ್ರೆಸ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ಪ್ರಶ್ನೆಗೆ ಉತ್ತರಿಸಿದ ಅವರು, ಸರಕಾರದ ಅಸಲಿ ದಾಖಲೆಗಳಿಗಿಂತಲೂ ನೀಟಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರಕಾರಿ ಭೂಮಿ ಕಬಳಿಸಲಾಗುತ್ತಿದೆ. 38,885 ಎಕರೆ ಭೂಮಿಯಲ್ಲಿ 12,179 ಎಕರೆ ವಾಪಸ್‌ ಪಡೆಯಲಾಗಿದ್ದು, 2,139 ಎಕರೆ ವಿಷಯ ಕೋರ್ಟ್‌ನಲ್ಲಿದೆ. 7,128 ಎಕರೆ ಭೂಮಿಯನ್ನು ಸಾರ್ವಜನಿಕ ಬಳಕೆ ಉದ್ದೇಶಕ್ಕೆ ನೀಡಲಾಗಿದೆ. ಸುಮಾರು 530 ಎಕರೆಯನ್ನು ಸ್ಲಂ ಬೋರ್ಡ್‌ಗೆ ನೀಡಲಾಗಿದೆ ಎಂದರು.
ರಾಜ್ಯದಲ್ಲಿ ಉಳಿದಿರುವ ಸುಮಾರು 16,995 ಎಕರೆ ಅತಿಕ್ರಮ ಭೂಮಿ ತೆರವಿಗೆ ಪ್ರತಿ ಶನಿವಾರ ಕಾರ್ಯಾಚರಣೆ ನಡೆಸುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ವಾರಾಹಿ ನೀರು, ಕಾವ್ರಾಡಿ ತಡೆಗೋಡೆ ಕುರಿತು ಪರಿಷತ್ತಿನಲ್ಲಿ ಪ್ರಶ್ನೆ
ಕುಂದಾಪುರ: ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನ ಮಂಡಲಗಳ ಅಧಿವೇಶನದಲ್ಲಿ ಮಾಜಿ ಸಭಾಪತಿ, ಸದಸ್ಯ ಕೆ. ಪ್ರತಾಪಚಂದ್ರ ಶೆಟ್ಟಿ ಅವರು “ಉದಯವಾಣಿ’ಯಲ್ಲಿ ಪ್ರಕಟವಾದ ಎರಡು ವರದಿಗಳನ್ನು ಪ್ರಶ್ನಿಸಿ ಉತ್ತರ ಪಡೆದರು.

ವಾರಾಹಿ ಎಡದಂಡೆ ಕಾಲುವೆ ಸಮಸ್ಯೆ ಬಗ್ಗೆ ಇವರು ಎತ್ತಿದ ಪ್ರಶ್ನೆಗೆ ಉತ್ತರಿಸಿದ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು, ವಾರಾಹಿ ನೀರು ಹರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಸೇತುವೆಯ ಮೇಲ್ಭಾಗದ ಕಾವ್ರಾಡಿ ಗ್ರಾಮದಲ್ಲಿ ವಾರಾಹಿ ನದಿಯ ಬಲದಂಡೆಯು ತಗ್ಗಾಗಿದೆ. ಮಳೆಗಾಲದಲ್ಲಿ ನದಿಯು ಉಕ್ಕಿ ಹರಿದು ನದಿದಂಡೆ ಕುಸಿತಕ್ಕೊಳಗಾಗಿ ನದಿಯ ನೀರು ಜನವಸತಿ ಪ್ರದೇಶ ಹಾಗೂ ಕೃಷಿ ಭೂಮಿಗಳಿಗೆ ನುಗ್ಗಿ ಹಾನಿಯಾಗುತ್ತಿದೆ ಎಂಬ ಬಗೆಗಿನ ಪ್ರಶ್ನೆಗೆ, ಈ ಬಗ್ಗೆ ಜಲಸಂಪನ್ಮೂಲ ಸಚಿವರ ಜತೆ ಚರ್ಚಿಸಿ ಉತ್ತರಿಸುವುದಾಗಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.

“ಸುದಿನ’ ವರದಿ
ವಾರಾಹಿ ಹಾಗೂ ಕಾವ್ರಾಡಿ ಸಮಸ್ಯೆ ಬಗ್ಗೆ ಡಿ.17 ಹಾಗೂ 18ರಂದು ಉದಯವಾಣಿಯಲ್ಲಿ ವರದಿ ಪ್ರಕಟವಾಗಿದ್ದವು.

 

Advertisement

Udayavani is now on Telegram. Click here to join our channel and stay updated with the latest news.