Advertisement

ಕಂದಾಯ ಸಚಿವರ ಗ್ರಾಮ ವಾಸ್ತವ್ಯದತ್ತ ಹಲವು ನಿರೀಕ್ಷೆ

02:46 AM Feb 19, 2022 | Team Udayavani |

ಕೋಟ: ರಾಜ್ಯಾದ್ಯಂತ ಸಾವಿರಾರು ಕುಟುಂಬ ಗಳಿಗೆ ಜಮೀನಿನ ಹಕ್ಕುಪತ್ರ ಪಡೆಯಲು ಡೀಮ್ಡ್ ಫಾರೆಸ್ಟ್‌ ಅಡ್ಡಿಯಾಗಿದೆ. ಗ್ರಾಮ ವಾಸ್ತವ್ಯಕ್ಕಾಗಿ ಫೆ. 19ರಂದು ಉಡುಪಿ ಜಿಲ್ಲೆಗೆ ಭೇಟಿ ನೀಡಲಿರುವ ಕಂದಾಯ ಸಚಿವ ಆರ್‌. ಅಶೋಕ್‌ ಡೀಮ್ಡ್  ಫಾರೆಸ್ಟ್‌ ಸಮಸ್ಯೆ ಬಗ್ಗೆ ವಿಶೇಷ ಚರ್ಚೆ ನಡೆಸಲಿದ್ದಾರೆ. ಇದು ಹಕ್ಕುಪತ್ರ ವಂಚಿತ ಕುಟುಂಬ
ಗಳಲ್ಲಿ ಹೊಸ ನಿರೀಕ್ಷೆ ಮೂಡಿದೆ.

Advertisement

ರಾಜ್ಯದಲ್ಲಿ ನಿಗದಿತ ಪ್ರಮಾಣದ ಅರಣ್ಯವಿರಬೇಕು ಎನ್ನುವ ಕಾನೂನಿನ ಮೇರೆಗೆ 1982ರಲ್ಲಿ ಕಂದಾಯ ಇಲಾಖೆಯ ಅಧೀನದಲ್ಲಿದ್ದ ಸಿ ಮತ್ತು ಡಿ ದರ್ಜೆಯ ಭೂಮಿ ಯನ್ನು ಅರಣ್ಯ ಇಲಾಖೆಗೆ ವರ್ಗಾಯಿಸಲು ನಿರ್ಧರಿಸಲಾಯಿತು. ಈ ರೀತಿ ವರ್ಗಾವಣೆಯಾದ ಭೂಮಿಯಲ್ಲಿ ಕೃಷಿ ಮತ್ತು ಜನವಸತಿ ಪ್ರದೇಶ ಒಳ
ಗೊಂಡು ಸಮಸ್ಯೆ ಆರಂಭವಾಯಿತು. ಪ್ರಸ್ತುತ ರಾಜ್ಯದಲ್ಲಿ 10.11 ಲಕ್ಷ ಹೆಕ್ಟೇರ್‌ ಡೀಮ್ಡ್ ಫಾರೆಸ್ಟ್‌ ಇದೆ. ಉಡುಪಿ ಜಿಲ್ಲೆಯಲ್ಲೇ ಸುಮಾರು 65 ಸಾವಿರ ಹೆಕ್ಟೇರ್‌ ಹಾಗೂ ದ.ಕ.ದಲ್ಲಿ ಸುಮಾರು 66ಸಾವಿರ ಹೆಕ್ಟೇರ್‌ಗೂ ಅಧಿಕ ಡೀಮ್ಡ್ ಫಾರೆಸ್ಟ್‌ ಇದೆ.

ಜನವಸತಿ ಪ್ರದೇಶ ಮತ್ತು ಕೃಷಿ ಚಟುವಟಿಕೆ ಇರುವ ಭೂಮಿ, ಮನೆ ನಿರ್ಮಿಸಿದ ಪ್ರದೇಶಗಳ ಕುಟುಂಬಗಳಿಗೆ ಡೀಮ್ಡ್ ಫಾರೆಸ್ಟ್‌ ವಿರಹಿತಗೊಳಿಸಿ ಹಕ್ಕುಪತ್ರ ನೀಡಬೇಕು ಎನ್ನುವ ಬೇಡಿಕೆ ಇದ್ದು, ಹಲವಾರು ಮಂದಿ 94ಸಿ, 94 ಸಿಸಿ; ನಮೂನೆ 50, 53 ಅಡಿ ಅರ್ಜಿ ಸಲ್ಲಿಸಿ ಹಕ್ಕುಪತ್ರಕ್ಕಾಗಿ ಹೋರಾಡುತ್ತಿದ್ದಾರೆ.

ಕೈಗೂಡದ ಭರವಸೆ
ಅರಣ್ಯ- ಕಂದಾಯ ಇಲಾಖೆಯ ನಡುವೆ ಸುಮಾರು 10.11 ಲಕ್ಷ ಹೆಕ್ಟೇರ್‌ ಪ್ರದೇಶ ಗೊಂದಲದಲ್ಲಿದ್ದು, ಅದರಲ್ಲಿ 3.3 ಲಕ್ಷ ಹೆಕ್ಟೇರ್‌ಗಳನ್ನು ಅರಣ್ಯ ಇಲಾಖೆಗೆ, 6.64 ಲಕ್ಷ ಹೆಕ್ಟೇರ್‌ಗಳ‌ನ್ನು ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಗೆ ಬಿಟ್ಟುಕೊಡುವ ಕೊನೆಯ ಹಂತದಲ್ಲಿದೆ. ಈ ಭೂಮಿ ಕಂದಾಯ ಇಲಾಖೆ ವ್ಯಾಪ್ತಿಗೆ ಬಂದ ಅನಂತರ ಅಲ್ಲಿ ಅನ ಧಿಕೃತವಾಗಿ ವಾಸವಾಗಿರುವ ಮತ್ತು ಉಳುಮೆ ಮಾಡುತ್ತಿರುವ ರೈತರಿಗೆ ಸರಕಾರದ ಮಾರ್ಗಸೂಚಿ ದರದಂತೆ ಜಮೀನು ನೀಡಲಾಗುವುದು. ಮನೆಗಳನ್ನು ಅವರ ಹೆಸರಿಗೆ ಮಾಡಿಕೊಡಲಾಗುವುದು ಎಂದು ಸರಕಾರ ಭರವಸೆ ನೀಡುತ್ತ ಬಂದಿದೆ. ಕಂದಾಯ ಸಚಿವರ ಭೇಟಿ ವೇಳೆ ಡೀಮ್ಡ್ ಫಾರೆಸ್ಟ್‌ ಬಗ್ಗೆ ವಿಶೇಷ ಚರ್ಚೆ ನಡೆಯುವುದರಿಂದ ಪ್ರಮುಖ ನಿರ್ಣಯಗಳು ಹೊರಬೀಳುವ ನಿರೀಕ್ಷೆ ಸಂತ್ರಸ್ತರಲ್ಲಿದೆ.

ಗಮನಸೆಳೆಯಬೇಕಾದ
ಇತರ ಸಮಸ್ಯೆಗಳು
ಕಂದಾಯ ಇಲಾಖೆಯಲ್ಲಿ ಸಿಬಂದಿ ಕೊರತೆಯಿಂದ ಜನಸಾಮಾನ್ಯರು ತಮ್ಮ ಕೆಲಸ ಕಾರ್ಯಗಳಿಗಾಗಿ ಅಲೆದಾಡುತ್ತಿರುವುದು, ಸರ್ವರ್‌ ಸಮಸ್ಯೆಯಿಂದ ಇಲಾಖಾ ಸೇವೆಗಳಿಗೆ ಹಿನ್ನಡೆ, ಸರ್ವೆಯರ್‌ಗಳ ಕೊರತೆಯಿಂದ ಭೂ ಕಡತಗಳ ವಿಲೇವಾರಿಗೆ ಸಮಸ್ಯೆಗಳು, ಅಟಲ್‌ ಜೀ ಕೇಂದ್ರದ ಸಮಸ್ಯೆ, ಸಬ್‌ ರಿಜಿಸ್ಟರ್‌ ಕಚೇರಿಯಲ್ಲಿನ ಸಿಬಂದಿ ಕೊರತೆ, ಸರಕಾರಿ ಕಚೇರಿಗಳಿಗೆ ನಿವೇಶನ ಕಾದಿರಿಸಲು ಕ್ರಮ ಸಹಿತ ವಿವಿಧ ವಿಚಾರಗಳು ಕಂದಾಯ ಸಚಿವರ ಸಭೆಯಲ್ಲಿ ಪ್ರಸ್ತಾವವಾಗಬೇಕಿದೆ.

Advertisement

ಕಂದಾಯ ಸಚಿವರ ಸಭೆಯಲ್ಲಿ ಡೀಮ್ಡ್ ಫಾರೆಸ್ಟ್‌ ವ್ಯಾಪ್ತಿಯಲ್ಲಿ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿದವರ ಅರ್ಜಿಗಳನ್ನು ಪರಿಶೀಲಿಸಲಾಗುವುದು ಹಾಗೂ ಸರಕಾರ ಈಗಾಗಲೇ ಗುರುತಿಸಿದಂತೆ ವಿರಹಿತ ಪಟ್ಟಿಯಲ್ಲಿರುವವರಿಗೆ ಶೀಘ್ರ ಹಕ್ಕುಪತ್ರ ಒದಗಿಸುವ ಕುರಿತು ಚಿಂತನೆ ನಡೆಯಲಿದೆ.
-ರಘುಪತಿ ಭಟ್‌,
ಶಾಸಕರು ಉಡುಪಿ ವಿಧಾನಸಭಾ ಕ್ಷೇತ್ರ

-ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next