Advertisement

ಡೀಮ್ಡ್ ಅರಣ್ಯ ಅಭಿವೃದ್ಧಿ ಯೋಜನೆಗೆ ಆಗ್ರಹ

05:42 PM Jul 24, 2022 | Team Udayavani |

ಶಿರಸಿ: ವೃಕ್ಷಲಕ್ಷ ಆಂದೋಲನ ತಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಡೀಮ್ಡ್ ಅರಣ್ಯ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಲು ಮನವಿ ಮಾಡಿತು.

Advertisement

ಅರಣ್ಯ ಸಚಿವ ಉಮೇಶ ಕತ್ತಿ, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಅರಣ್ಯ ಪರಿಸರ ಇಲಾಖೆ ಅಪರ ಪ್ರಧಾನ ಕಾರ್ಯದರ್ಶಿ ಜಾವೇದ್‌ ಅಖ್ತರ್‌, ಕೇಂದ್ರ ಅರಣ್ಯ ಮಂತ್ರಾಲಯದ ದಕ್ಷಿಣ ಭಾರತ ಕಚೇರಿ ಮುಖ್ಯಸ್ಥ ಡಾ| ಕೆ.ಪಿ. ಸಿಂಗ್‌ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ ಎಂದು ಜೀವ ವೈವಿಧ್ಯ ಮಂಡಳಿ ನಿಕಟಪೂರ್ವ ಅಧ್ಯಕ್ಷ ಅನಂತ ಅಶೀಸರ ತಿಳಿಸಿದ್ದಾರೆ.

ಈಗ ರಾಜ್ಯ ಸರ್ಕಾರ ಘೋಷಣೆ ಮಾಡಿರುವ 330186 ಹೆಕ್ಟೇರ್‌ ಡೀಮ್ಡ್ ಅರಣ್ಯ ಸಂರಕ್ಷಣೆ ಮಾಡಲು ತಳಮಟ್ಟದಲ್ಲಿ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಬೇಕು. ಕಂದಾಯ ಇಲಾಖೆ ಸಹಕಾರ ಪಡೆದು ಡೀಮ್ಡ್ ಅರಣ್ಯ ಗುರುತಿಸಬೇಕು. ಬೇಲಿ, ಕಂದಕ ನಿರ್ಮಿಸಬೇಕು. ಮಲೆನಾಡು, ದಟ್ಟ ಕಾನುಗಳನ್ನು ರಕ್ಷಿಸಲು ವನೀಕರಣ ಕೈಗೊಳ್ಳಲು ಯೋಜನೆ ರೂಪಿಸ ಬೇಕು ಎಂದು ಡಾ| ಟಿ.ವಿ. ರಾಮಚಂದ್ರ, ಡಾ| ಕೇಶವ ಕೊರ್ಸೆ, ಡಾ| ರಾಮಕೃಷ್ಣ, ಪ್ರೊ| ಬಿ.ಎಂ. ಕುಮಾರ ಸ್ವಾಮಿ, ಡಾ| ಪ್ರಕಾಶ ಮೇಸ್ತ, ಡಾ| ಬಾಲಚಂದ್ರ ಸಾಯಿ ಮನೆ, ಕೆ. ವೆಂಕಟೇಶ, ಶ್ರೀಪಾದ ಬಿಚ್ಚುಗುತ್ತಿ ಮುಂತಾದ ಪರಿಸರ, ಅರಣ್ಯ ತಜ್ಞರು ಒತ್ತಾಯಿಸಿದ್ದಾರೆ.

ಈ ಹಿಂದಿನ ತಜ್ಞರ ಸಮಿತಿ ವರದಿಯಲ್ಲಿ 994881 ಹೆಕ್ಟೇರ್‌ ಡೀಮ್ಡ್ ಅರಣ್ಯ ಪ್ರದೇಶ ಎಂದು ಗುರುತಿಸಿತ್ತು. ರಾಜ್ಯ ಸರ್ಕಾರದ ಪುನರ್ರಚಿತ ತಜ್ಞರ ಸಮಿತಿ ಡೀಮ್ಡ್ ಮಾನದಂಡ ಅನ್ವಯಿಸದ 773326 ಹೆಕ್ಟೇರ್‌ಗಳನ್ನು ಕೈ ಬಿಟ್ಟಿತು. ಕೇವಲ 330186 ಹೆಕ್ಟೇರ್‌ ಡೀಮ್ಡ್ ಅರಣ್ಯ ಎಂದು ಈಗ ಘೋಷಿಸಲಾಗಿದೆ.

ಕಳೆದ 20 ವರ್ಷಗಳಲ್ಲಿ ಹಲವು ಬಾರಿ ಪರಿಶೀಲನೆಗೆ ಒಳಗಾಗಿ ಉಳಿದುಕೊಂಡ ಕೇವಲ ಶೇ.33 ಡೀಮ್ಡ್ ಅರಣ್ಯ ಪ್ರದೇಶವನ್ನು ಉಳಿಸಿಕೊಳ್ಳಲೇಬೇಕಾದ ಗುರುತರ ಜವಾಬ್ದಾರಿ ಸರ್ಕಾರದ್ದಿದೆ ಎಂದು ಗಮನ ಸೆಳೆಯಲಾಯಿತು.

Advertisement

ಗ್ರಾಮ ಅರಣ್ಯ ಸಮಿತಿ ರಚನೆಗಳ ಮೂಲಕ ಈ ಅರಣ್ಯ ಅಭಿವೃದ್ಧಿಯಲ್ಲಿ ಗ್ರಾಮ ಜನರ ಸಹಭಾಗಿತ್ವ ಪಡೆಯಬೇಕು. ಸ್ಥಳಿಯ ಪಂಚಾಯತ ಜೀವ ವೈವಿಧ್ಯ ಸಮಿತಿಗಳ ಸಹಕಾರ ಪಡೆಯಬೇಕು. ಡೀಮ್ಡ್ ಅರಣ್ಯ ಪ್ರದೇಶಗಳ ಜೀವ ವೈವಿಧ್ಯ ದಾಖಲಾತಿ, ಡೀಮ್ಡ್ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಕೆರೆ -ಹಳ್ಳಗಳು, ಜಲ ಮೂಲಗಳ ರಕ್ಷಣೆ ಹೀಗೆ ಹಲವು ಮುಖಗಳಲ್ಲಿ ಡೀಮ್ಡ್ ಅರಣ್ಯ ಅಭಿವೃದ್ಧಿಗಾಗಿ ಬಹುದೊಡ್ಡ ಯೋಜನೆ ರೂಪಿಸಬೇಕು ಎಂದು ಜನತೆ ಪರವಾಗಿ ಕೂಡ ಮನವಿ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next