ಬೀಳಗಿ: ಇಲ್ಲಿನ ರಾಜ್ಯ ಮುಖ್ಯ ರಸ್ತೆಯ ಜಮಖಂಡಿ ಮಾರ್ಗದ ಹತ್ತಿರದ ವೀರ ಸಿಂಧೂರ ಲಕ್ಷ್ಮಣ ಕಂಚಿನ ಪುತ್ಥಳಿ ಲೋಕಾರ್ಪಣೆ ಹಾಗೂ ಜನ ಜಾಗೃತಿ ಸಮಾವೇಶವನ್ನು ಡಿ.24ರಂದು ಬೆಳಗ್ಗೆ 11.30ಕ್ಕೆ ಸಿಂಧೂರ ಲಕ್ಷ್ಮಣ ಸ್ಮಾರಕ ಭವನದ ಹತ್ತಿರ ಹಮ್ಮಿಕೊಳ್ಳಲಾಗಿದೆ ಎಂದು ವೀರ ಸಿಂಧೂರ ಲಕ್ಷ್ಮಣ ಟ್ರಸ್ಟ್ ಅಧ್ಯಕ್ಷ ಕೃಷ್ಣಗೌಡ ಪಾಟೀಲ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವಾರು ತಿಂಗಳಿಂದ ವೀರ ಸಿಂಧೂರ ಲಕ್ಷ್ಮಣ ಕಂಚಿನ ಪುತ್ಥಳಿ ಅನಾವರಣ ಮಾಡಬೇಕೆಂದು ಸಮಾಜದ ಮುಖಂಡರೆಲ್ಲರು ಚರ್ಚಿಸುತ್ತ ಬಂದಿದ್ದೇವೆ. ಈ ತಿಂಗಳು ವೀರ ಸಿಂಧೂರ ಲಕ್ಷ್ಮಣ ಹುತಾತ್ಮ ಶತಮಾನೋತ್ಸವ ಆಚರಿಸುವ ಉದ್ದೇಶದಿಂದ ರಾಜನಹಳ್ಳಿ ಗುರುಪೀಠದ ಪ್ರಸನ್ನಾನಂದಪುರಿ ಮಹಾಸ್ವಾಮಿಗಳ ಆದೇಶದಂತೆ ಶತಮಾನೋತ್ಸವ ಜತೆಗೆ ಸಿಂಧೂರ ಲಕ್ಷ್ಮಣನ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ಅಂದು ಬೆಳಗ್ಗೆ 8.30ಕ್ಕೆ ನಾಗರಾಳದ ಗುಡ್ಡದ ಕಪ್ಪರ ಪಡಿಯಮ್ಮ ದೇವಿ ದೇವಸ್ಥಾನದಲ್ಲಿ ಶ್ರೀಗಳ ನೇತೃತ್ವದಲ್ಲಿ ದೇವಿಗೆ ಅಭಿಷೇಕ ಮಾಡಲಾಗುವುದು. ನಂತರ 10 ಗಂಟೆಗೆ ಬೀಳಗಿ ಕ್ರಾಸ್ ಬಳಿಯಲ್ಲಿನ ಕನಕ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಬೈಕ್ ರ್ಯಾಲಿ, ಟ್ರಾಕ್ಟರ್ ಮೂಲಕ ಶ್ರೀಗಳೊಂದಿಗೆ ಪಟ್ಟಣಕ್ಕೆ ಆಗಮಿಸಿ ಡಾ| ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ 11.30ಕ್ಕೆ ಸಿಂಧೂರ ಲಕ್ಷ್ಮಣನ ಕಂಚಿನ ಪುತ್ಥಳಿ ಲೋಕಾರ್ಪಣೆ ಮಾಡಲಾಗುವುದು ಎಂದು ಹೇಳಿದರು.
ಲಕ್ಷ್ಮಣನ ಸ್ಮಾರಕ ಭವನ ಪಕ್ಕದಲ್ಲಿಯೇ ಹಾಕಿರುವ ವೇದಿಕೆಯಲ್ಲಿ ಜನಜಾಗೃತಿ ಸಮಾರಂಭ ನಡೆಯಲಿದೆ. ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಜರುಗುವ ಸಮಾವೇಶದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಸಚಿವ ಎಸ್.ಆರ್. ಪಾಟೀಲ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದ ಅವರು ಸಮಾರಂಭದಲ್ಲಿ ಹಲವು ಸಚಿವರು, ಶಾಸಕರು ಸೇರದಂತೆ ಸುಮಾರು 5000 ಸಾವಿರ ಜನರು ಸೇರಲಿದ್ದು ಎಲ್ಲರಿಗೂ ಆಸನ, ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.
ಈ ವೇಳೆ ವಾಲ್ಮೀಕಿ ನಾಯಕ ಮಹಾಸಭಾ ತಾಲೂಕು ಅಧ್ಯಕ್ಷ ಸುರೇಂದ್ರ ನಾಯಕ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀಶೈಲ ಅಂಟೀನ್, ವೀರ ಸಿಂಧೂರ ಲಕ್ಷ್ಮಣ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಟಿ.ವೈ. ಜಾನಮಟ್ಟಿ, ವಿ.ಜಿ. ರೇವಡಿಗಾರ, ತಿಪ್ಪಣ್ಣ ಸಂಜೀವಪ್ಪಗೋಳ, ಹನಮಂತ ಹಲಗಲಿ, ಎಫ್.ಆರ್. ಬಿಸನಾಳ, ಶಿವಪ್ಪ ಹವೇಲಿ, ದುಂಡಪ್ಪ ವಾಲೀಕಾರ, ಡಿ. ಎಸ್. ಪಾಟೀಲ, ಸಿದ್ದಪ್ಪ ಕೂಗಟಿ ಇತರರಿದ್ದರು.