Advertisement
ಇಲ್ಲಿ ಕಳೆದ 1989ರಿಂದ ಕಾರಜೋಳ ಮತ್ತು ತಿಮ್ಮಾಪುರ ಮಧ್ಯೆಯೇ ಅತಿಹೆಚ್ಚು ಪೈಪೋಟಿ ನಡೆದಿದೆ. ಕಳೆದ 2018ರಲ್ಲಿ ಮಾತ್ರ, ಕಾಂಗ್ರೆಸ್ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದ ಸತೀಶ ಬಂಡಿವಡ್ಡರ ಎಂಬ ಯುವ ಮುಖಂಡ, ಸ್ವತಃ ಕಾರಜೋಳರೇ ಹುಬ್ಬೇರಿಸುವಂತೆ ಮತ ಗಳಿಕೆ ಮಾಡಿದ್ದರು. ಆದರೆ, ಈ ಬಾರಿ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿಲ್ಲ. ಅವರ ನಿರ್ಧಾರ, ಈ ಬಾರಿಯ ಚುನಾವಣೆ ಫಲಿತಾಂಶದ ಮೇಲೆ ಬೀಳುವ ಸಾಧ್ಯತೆ ಹೆಚ್ಚಿದೆ. ಆಣೆ-ಪ್ರಮಾಣ: ಕಳೆದ 2018ರ ಚುನಾವಣೆಯ ಬಳಿಕ, ಕಾಂಗ್ರೆಸ್ ನ ತಿಮ್ಮಾಪುರ ಮತ್ತು ಬಂಡಿವಡ್ಡರ ಇಬ್ಬರೂ ಸಕ್ರಿಯರಾಗಿದ್ದಾರೆ.
Related Articles
Advertisement
ಶಾಸಕರನ್ನೇ ವೇದಿಕೆ ಹತ್ತಲು ಬಿಟ್ಟಿರಲಿಲ್ಲ !ಮುಧೋಳ ಕ್ಷೇತ್ರ ಒಂದು ರೀತಿ, ವಿಶ್ವಾಸಿಕರನ್ನು ಹೊತ್ತು ಮೆರೆಸುವ ಕ್ಷೇತ್ರ. ಆ ವ್ಯಕ್ತಿ ಬೇಡ ಅಂದ್ರೆ ಸಾಕು, ಏನೇ ಕೊಟ್ಟರೂ ಮರಳಿಯೂ ನೋಡಲ್ಲ. ಅಂತಹ ಸ್ವಾಭಿಮಾನಿಗಳ ಊರು ಎಂದರೂ ತಪ್ಪಲ್ಲ. ಜನತಾ ದಳ ಸರ್ಕಾರ ಇದ್ದಾಗ, ರಮೇಶ ಜಿಗಜಿಣಗಿ ಸಚಿವರಾಗಿದ್ದರು. ಆಗ ಲೋಕೋಪಯೋಗಿ ಇಲಾಖೆಯ ಸ್ಟೋರ್ ಕೀಪರ್ ಆಗಿದ್ದ ಗೋವಿಂದ ಕಾರಜೋಳರನ್ನು ಮುಧೋಳಕ್ಕೆ ಪರಿಚಯಿಸಿದ್ದರು. ಮುಧೋಳದಲ್ಲಿ ಜಿಗಜಿಣಗಿ ಅವರ ನೇತೃತ್ವದಲ್ಲಿ ಒಂದು ದೊಡ್ಡ
ಕಾರ್ಯಕ್ರಮ ನಡೆದಿತ್ತು. 1985ರಲ್ಲಿ ಜನತಾ ದಳದಿಂದ ಆಯ್ಕೆಯಾಗಿದ್ದ ಇಲ್ಲಿನ ಬಿ.ಜಿ. ಜಮಖಂಡಿ (ಭೀಮಸಿ) ಅವರನ್ನು ವೇದಿಕೆಯನ್ನೇ ಹತ್ತಲು ಬಿಟ್ಟಿರಲಿಲ್ಲ. ಜಮಖಂಡಿ ಅವರ ವಿರುದ್ಧ ಅಷ್ಟೊತ್ತು ಆಕ್ರೋಶ ಹೊರ ಹಾಕಲಾಗಿತ್ತು. ಮುಂದೆ 1989ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್‌ನಿಂದ ಆರ್.ಬಿ. ತಿಮ್ಮಾಪುರ, ಜನತಾ ದಳದಿಂದ ಬಿ.ಜಿ. ಜಮಖಂಡಿ ಸ್ಪರ್ಧೆ ಮಾಡಿದ್ದರು. ಜಮಖಂಡಿಯವರು ಸೋತು, ತಿಮ್ಮಾಪುರ, ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಅಲ್ಲಿಂದ ಜಮಖಂಡಿಯವರು ಚುನಾವಣೆ ರಾಜಕೀಯಕ್ಕೆ ಬರಲೇ ಇಲ್ಲ. ಅದೇ ಜನತಾ ದಳದಿಂದ 1994ರಲ್ಲಿ ಗೋವಿಂದ ಕಾರಜೋಳ ಸ್ಪರ್ಧಿಸಿ, ತಿಮ್ಮಾಪುರರನ್ನು ಸೋಲಿಸಿದ್ದರು. ತಂದೆಗೋ-ಮಗನಿಗೋ
ಕಾಂಗ್ರೆಸ್ ಟಿಕೆಟ್ ಅಂತಿಮಗೊಂಡಿದ್ದು, ಬಿಜೆಪಿಯಿಂದ ಇನ್ನೂ ಘೋಷಣೆ ಬಾಕಿ ಇದೆ. ಬಹುತೇಕ ಹಾಲಿ ಸಚಿವ ಗೋವಿಂದ ಕಾರಜೋಳರೇ ಅಭ್ಯರ್ಥಿಯಾಗುವ ಸಾಧ್ಯತೆ ಇದ್ದು, ಅವರ ಪುತ್ರ ಅರುಣ ಕಾರಜೋಳರ ಹೆಸರೂ ಅತಿಹೆಚ್ಚು ಕೇಳಿ ಬಂದಿದೆ. ವಯಸ್ಸಿನ ಕಾರಣ, ಕಾರಜೋಳರಿಗೆ ಟಿಕೆಟ್ ಕೊಡದಿದ್ದರೆ, ಅದು ಅರುಣ ಕಾರಜೋಳರಿಗೆ ಸಿಗಲಿದೆ ಎಂಬ ವಿಶ್ವಾಸ ಪಕ್ಷದಲ್ಲಿದೆ. ಹೀಗಾಗಿ ತಂದೆ ಮತ್ತು ಮಗ, ಇಬ್ಬರಲ್ಲಿ ಟಿಕೆಟ್ ಯಾರಿಗೆ ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ. ಕಾದು ನೋಡುವ ಜೆಡಿಎಸ್
ಜಿಲ್ಲೆಯಲ್ಲಿ ಬಾದಾಮಿ ಹೊರತುಪಡಿಸಿದರೆ, ಉಳಿದ ಯಾವ ಕ್ಷೇತ್ರದಲ್ಲೂ ಜೆಡಿಎಸ್ ಪ್ರಬಲವಾಗಿಲ್ಲ. ಆದರೆ, ಬಿಜೆಪಿ ಮತ್ತು ಕಾಂಗ್ರೆಸ್‌ನ ಭಿನ್ನರು ನಮ್ಮೆಡೆಗೆ ಬರುವ ಸಾಧ್ಯತೆ ಇದೆ ಎಂದು ಕಾದು ಕುಳಿತಿದೆ. ಈ ಕಾಯುವಿಕೆಗೂ ಒಂದು ಮೂಲ ಕಾರಣವಿದೆ ಎನ್ನಲಾಗಿದೆ. ಕಾಂಗ್ರೆಸ್‌ನ ಹಿರಿಯ ನಾಯಕ ಎಸ್.ಆರ್. ಪಾಟೀಲರಿಗೆ ದೇವರಹಿಪ್ಪರಗಿ ಕ್ಷೇತ್ರದ ಕಾಂಗ್ರೆಟ್ ಟಿಕೆಟ್ ಫೈನಲ್ ಆಗುವ ವಿಷಯದ ಮೇಲೆ, ಜಿಲ್ಲೆಯ ಹಲವರ ನಿರ್ಧಾರ ನಿಂತಿವೆ ಎನ್ನಲಾಗಿದೆ. ಅದು ಮುಧೋಳ ಕ್ಷೇತ್ರದಲ್ಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಶಾಸಕರಿಗೇ ಉಪನ್ಯಾಸ ಕೊಟ್ಟಿದ್ದ ಶಾಸಕ !
ಈ ಕ್ಷೇತ್ರದಿಂದ ಒಮ್ಮೆ ಪಕ್ಷೇತರ ಹಾಗೂ ಇನ್ನೊಮ್ಮೆ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದ ಕೆ.ಪಿ. ನಾಡಗೌಡರು, ಕವಿ ಚಕ್ರವರ್ತಿ ರನ್ನನ ಸಾಹಿತ್ಯದ ಮೂಲಕ ರಾಜ್ಯದ ಗಮನ ಸೆಳೆದವರು. ಕಾರಣ, ಅವರು ಚುನಾವಣೆ ಪ್ರಚಾರದಲ್ಲೂ ರನ್ನನ ಕಾವ್ಯಗಳನ್ನು ಸೊಗಸಾಗಿ ಹೇಳುತ್ತಿದ್ದರು. 1967ರಲ್ಲಿ ಪಕ್ಷೇತರ ಮತ್ತು 1972ರಲ್ಲಿ ಕಾಂಗ್ರೆಸ್‌ನಿಂದ ಗೆದ್ದ ಅವರು ಪ್ರತಿ ಚುನಾವಣೆ ಭಾಷಣ, ಶಾಸಕರಾದ ಬಳಿಕ ಸಾರ್ವಜನಿಕ ಸಭೆಗಳಲ್ಲಿ ರನ್ನನ ಕಾವ್ಯ ಹೇಳುತ್ತಿದ್ದರು. ಹಳೆಗನ್ನಡದ
ರನ್ನನ ಕಾವ್ಯ ಕೇಳಲು ಜನರೂ ಅತಿ ಉತ್ಸಾಹ ತೋರುತ್ತಿದ್ದರು. ವಿಧಾನಸಭೆಯಲ್ಲೂ ಇದೇ ವಿಷಯಕ್ಕೆ ಅವರು ಗಮನ ಕೂಡ ಸೆಳೆದಿದ್ದರು. ನಾಡಗೌಡರು, ರನ್ನನ ಕಾವ್ಯಗಳನ್ನು ಸೊಗಸಾಗಿ ಹೇಳುವುದನ್ನು ಕೇಳುತ್ತಿದ್ದ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರು, ಶಾಸಕರಿಗಾಗಿ ನಾಡಗೌಡರಿಂದ ರನ್ನನ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಿದ್ದರು ಎಂದು ಮೆಲಕು ಹಾಕುತ್ತಾರೆ ಹಿರಿಯ ಸಾಹಿತಿ ಮಲ್ಲಿಕಾರ್ಜುನ ಹೆಗ್ಗಳಗಿ. ಕಾರಜೋಳಗೆ ಹೆಚ್ಚು ಅಧಿಕಾರ
ಇದು 1957ರಿಂದ ಇಲ್ಲಿಯವರೆಗೆ 14 ಸಾರ್ವತ್ರಿಕ ಚುನಾವಣೆ ಕಂಡಿದೆ. ಇಲ್ಲಿ ಒಮ್ಮೆಯೂ ಉಪ ಚುನಾವಣೆ ನಡೆದಿಲ್ಲ. ಅಷ್ಟೂ ಚುನಾವಣೆಯಲ್ಲಿ ಏಳು ಬಾರಿ ಕಾಂಗ್ರೆಸ್, ನಾಲ್ಕು ಬಾರಿ ಬಿಜೆಪಿ, ಎರಡು ಬಾರಿ ಜನತಾ ದಳ ಹಾಗೂ ಒಂದು ಬಾರಿ ಪಕ್ಷೇತರ (ಎಸ್‌ಡಬ್ಲ್ಯುಆರ್) ಪಕ್ಷ ಗೆದ್ದಿವೆ. ಎಚ್.ಬಿ. ಶಹಾ, ಇಲ್ಲಿನ ಮೊದಲ ಶಾಸಕರು. ಕೆ.ಪಿ. ನಾಡಗೌಡ ಮತ್ತು ಆರ್.ಬಿ. ತಿಮ್ಮಾಪುರ ತಲಾ ಎರಡು ಬಾರಿ ಗೆದ್ದಿದ್ದಾರೆ. ಎನ್.ಕೆ. ನಾಯಕ, ಬಿ.ಜಿ. ಜಮಖಂಡಿ, ಜಯವಂತ ಕಾಳೆ,
ಅಶೋಕ ಕಟ್ಟಿಮನಿ ಅವರು ತಲಾ ಒಂದು ಬಾರಿ ಈ ಕ್ಷೇತ್ರ ಪ್ರತಿನಿಧಿಸಿದ್ದಾರೆ. ಅನ್ಯರಿಗೆ ಹೆಚ್ಚು ಅಧಿಕಾರ !
ಮುಧೋಳ ಕ್ಷೇತ್ರಕ್ಕೆ ಸ್ಥಳೀಯರಿಗಿಂತ ಹೊರಗಿನವರು ಹೆಚ್ಚು ಆಯ್ಕೆಯಾಗಿರುವುದು ಮತ್ತೂಂದು ವಿಶೇಷ. ಈ ಕ್ಷೇತ್ರದ ಹಾಲಿ ಶಾಸಕರೂ, ಸಚಿವರೂ ಆಗಿರುವ ಗೋವಿಂದ ಕಾರಜೋಳ, ಮೂಲತಃ ವಿಜಯಪುರ ಜಿಲ್ಲೆಯವರು. ಇನ್ನು ಇಲ್ಲಿಂದ ಎರಡು ಬಾರಿ ಗೆದ್ದಿದ್ದ ಕೆ.ಪಿ. ನಾಡಗೌಡರು, ಗೋಕಾಕ ತಾಲೂಕಿನ ಯಾದವಾಡದವರು. ಬಾದಾಮಿಯ ಅಶೋಕ ಕಟ್ಟಿಮನಿ ಕೂಡ ಇಲ್ಲಿಂದ ಒಮ್ಮೆ ಗೆದ್ದಿದ್ದರು. ಜಯವಂತ ಕಾಳೆ, ಜಮಖಂಡಿಯಿಂದ ಬಂದು ಇಲ್ಲಿ ಗೆದ್ದಿದ್ದರು. ಕಾಂಗ್ರೆಸ್‌ನ ಆರ್.ಬಿ. ತಿಮ್ಮಾಪುರ ಇದೇ ತಾಲೂಕಿನವರು. ಜವಾನ-ಜನ ನಾಯಕರಾದ ಕ್ಷೇತ್ರ!
ಈ ಕ್ಷೇತ್ರದ ಇನ್ನೊಂದು ವಿಶೇಷವೆಂದರೆ, ಒಂದು ಕಾಲದಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಸ್ಟೋರ್ ಕೀಪರ್ ಆಗಿ ಸರ್ಕಾರಿ ನೌಕರಿ ಮಾಡುತ್ತಿದ್ದ ವ್ಯಕ್ತಿ, ಇಂದು ರಾಜ್ಯದ ಉಪ ಮುಖ್ಯಮಂತ್ರಿವರೆಗೆ ಈ ಕ್ಷೇತ್ರದ ಜನರು ಬೆಳೆಸಿದ್ದಾರೆ. ಅಂತಹ ಅವಕಾಶ ಗೋವಿಂದ ಕಾರಜೋಳರಿಗೆ ಒಲಿದಿದೆ. ಹೀಗಾಗಿ ಅವರನ್ನು ಜವಾನರಿಂದ ಜನ ನಾಯಕರಾದವರು ಎಂದು ಅವರು ಬೆಂಬಲಿಗರು ಪ್ರೀತಿಯಿಂದ ಕರೆಯುತ್ತಾರೆ. *ಶ್ರೀಶೈಲ ಕೆ. ಬಿರಾದಾರ