Advertisement

ಪದವಿ, ಸ್ನಾತಕೋತ್ತರ ಪದವಿ ಪಡೆದ ಶಿಕ್ಷಕರಿಗೂ ಡಿ.ಇಡಿ ಕಡ್ಡಾಯ

06:20 AM Aug 16, 2017 | |

ಬೆಂಗಳೂರು: ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲಾ ಶಿಕ್ಷಕರು ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದಿದ್ದರೂ ಕಡ್ಡಾಯವಾಗಿ ಡಿ.ಇಡಿ ಕೋರ್ಸ್‌ ಪೂರೈಸಲೇಬೇಕು.

Advertisement

ಶಾಲಾ ಶಿಕ್ಷಕರೆಲ್ಲರೂ 2019ರ ಮಾರ್ಚ್‌ 31ರೊಳಗೆ ಡಿ.ಇಡಿ ಕೋರ್ಸ್‌ ಹೊಂದಿರಬೇಕು. ಒಂದು ವೇಳೆ ನಿಗದಿತ ಅವಧಿಯೊಳಗೆ ಕೋರ್ಸ್‌ ಪೂರೈಸದೇ ಇದ್ದರೆ, ನಂತರ ಶಿಕ್ಷಕರಾಗಿ ಇರಲು ಸಾಧ್ಯವಿಲ್ಲ. ಡಿ.ಇಡಿ ಕೋರ್ಸ್‌ ಇಲ್ಲದೇ ಯಾವ ಅಭ್ಯರ್ಥಿಗೂ ಶಿಕ್ಷಕ ಮಾನ್ಯತೆ ಸಿಗುವುದಿಲ್ಲ. ಈ ಕುರಿತು ಕೇಂದ್ರ ಸರ್ಕಾರದ ಸಚಿವ ಸಂಪುಟ ನಿರ್ಧಾರ ಕೈಗೊಂಡಿದ್ದು, ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ಸೆಕ್ಷನ್‌ 23(2)ಕ್ಕೆ ತಿದ್ದುಪಡಿ ತಂದು ಸಂಸತ್‌ನಲ್ಲಿ ಅನುಮೋದನೆ ಪಡೆದಿದೆ. ಆದ್ದರಿಂದ ಇನ್ನು ಮುಂದೆ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಪರಿಷತ್‌ (ಎನ್‌ಸಿಟಿಇ) ನಿಯಮದ ಪ್ರಕಾರ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರು ವೃತ್ತಿ ಸಂಬಂಧಿತ ವಿದ್ಯಾರ್ಹತೆಯನ್ನು ಕಡ್ಡಾಯವಾಗಿ ಹೊಂದಬೇಕು. ಸರ್ಕಾರಿ ಶಾಲೆಯ ಶೇ.95ಕ್ಕೂ ಅಧಿಕ ಶಿಕ್ಷಕರು ಡಿ.ಇಡಿ ಕೋರ್ಸ್‌ ಪೂರ್ಣಗೊಳಿಸಿದ್ದಾರೆ.

ಇನ್ನೂ ಪೂರೈಸದ ಸರ್ಕಾರಿ ಶಾಲೆ ಶಿಕ್ಷಕರ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಎನ್‌ಸಿಇಟಿ ನಿಯಮದಂತೆ ಅವರನ್ನು ಡಿ.ಇಡಿ ಕೋರ್ಸ್‌ಗೆ ಕಳುಹಿಸುವ ವ್ಯವಸ್ಥೆಯೂ ನಡೆಯುತ್ತದೆ. ಆದರೆ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಶಿಕ್ಷಕರು ಆತಂಕಕ್ಕೆ ಸಿಲುಕಿದ್ದಾರೆ.

ಖಾಸಗಿ ಶಿಕ್ಷಕರಿಗೂ ಕಡ್ಡಾಯ: ಪ್ರಾಥಮಿಕ ಶಿಕ್ಷಣ ವ್ಯವಸ್ಥೆ ಸಂಪೂರ್ಣವಾಗಿ ಸುಧಾರಿಸಬೇಕು ಮತ್ತು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರವು ಶಾಲೆ ಶಿಕ್ಷಕರಿಗೆ ಡಿ.ಇಡಿ ಕಡ್ಡಾಯ ಮಾಡಿದೆ. ಬಹುತೇಕ ಖಾಸಗಿ, ಅನುದಾನಿತ ಶಾಲೆಗಳಲ್ಲಿ ಬಿ.ಇಡಿ, ಪದವಿ, ಸ್ನಾತಕೋತ್ತರ ಪದವಿ ಪೂರೈಸಿದವರನ್ನೇ ಶಿಕ್ಷಕರನ್ನಾಗಿ ನೇಮಿಸಿಕೊಂಡಿರುತ್ತಾರೆ. ಕೇಂದ್ರ ಸರ್ಕಾರದ ಈ ನಿಯಮದಿಂದ ಖಾಸಗಿ, ಅನುದಾನಿತ ಶಾಲೆ ಮತ್ತು ಅಲ್ಲಿ ಡಿ.ಇಡಿ ಕೋರ್ಸ್‌ ಪೂರೈಸದೇ ಬೋಧಿಸುತ್ತಿರುವ ಶಿಕ್ಷಕರಿಗೆ ಉಭಯ ಸಂಕಟ ಎದುರಾಗಿದೆ. ಸರ್ಕಾರಿ ಶಾಲೆ ಶಿಕ್ಷಕರಿಗೆ ಸರ್ಕಾರದಿಂದಲೇ ವೇತನ ನೀಡಿ, ಡಿ.ಇಡಿ ಕೋರ್ಸ್‌ಗೆ ಅವಕಾಶ ನೀಡಲಾಗುತ್ತದೆ. ಆದರೆ, ಖಾಸಗಿ ಹಾಗೂ ಅನುದಾನಿತ ಶಾಲೆಗಳು ತಮ್ಮ ಶಿಕ್ಷಕರಿಗೆ ಈ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ. ಸರ್ಕಾರೇತರ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ಶಾಲೆಯನ್ನು ಬಿಟ್ಟು ಮತ್ತೆ ಡಿ.ಇಡಿ ಕೋರ್ಸ್‌ಗೆ ಸೇರಿಕೊಳ್ಳಬೇಕು.

ವೃತ್ತಿ ಅರ್ಹತೆ: ಶಿಕ್ಷಕ ವೃತ್ತಿಗೆ ಕನಿಷ್ಠ ವಿದ್ಯಾರ್ಹತೆ ಹೊಂದಿರದ ಶಿಕ್ಷಕರು ರಾಷ್ಟ್ರೀಯ ಮುಕ್ತ ಶಾಲೆ (ಎನ್‌ಐಒಎಸ್‌) ವತಿಯಿಂದ ನಡೆಸಲಾಗುವ ಡಿ.ಇಐ.ಇಡಿ ವೃತ್ತಿ ತರಬೇತಿಗೆ ಪ್ರವೇಶ ಪಡೆಯಬಹುದು. ಆದರೆ, ಪಿಯುಸಿಯಲ್ಲಿ ಕನಿಷ್ಠ ಶೇ.50 ಅಂಕ ಪಡೆದಿರಬೇಕು. ಶೇ.50 ಅಂಕ ಪಡೆಯದ ಶಿಕ್ಷಕರು ಡಿ.ಇಐ.ಇಡಿ ಕೋರ್ಸ್‌ ಸೇರಿಕೊಂಡು, ಕೋರ್ಸ್‌ ಮುಗಿಯುವುದರೊಳಗೆ ಪಿಯುಸಿಯಲ್ಲಿ ಪುನರ್‌ ಪರೀಕ್ಷೆ ಬರೆದು ಶೇ.50 ಅಂಕ ಗಳಿಸಬೇಕು. ಪಿಯುಸಿಯಲ್ಲಿ ಶೇ.50ಕ್ಕಿಂತ ಅಧಿಕ ಅಂಕ ಪಡೆದ ಅಭ್ಯರ್ಥಿಗಳಿಗೆ ಮಾತ್ರ ಡಿ.ಇಐ.ಇಡಿ ಪ್ರಮಾಣ ಪತ್ರ ನೀಡಲಾಗುತ್ತದೆ.

Advertisement

ಇಂದಿನಿಂದ ನೋಂದಣಿ
ಕೇಂದ್ರ ಸರ್ಕಾರದ ಸೂಚನೆಯಂತೆ 2019ರ ಮಾರ್ಚ್‌ 31ರೊಳಗೆ ಡಿ.ಇಡಿ ಕೋರ್ಸ್‌ ಪೂರೈಸಿರಬೇಕು. ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಡಿ.ಇಡಿ ಕೋರ್ಸ್‌ಗೆ ಸೇರಿಕೊಂಡಿರುವವರು ಮುಕ್ತ ಶಾಲೆಯ ಮೂಲಕ ವಿದ್ಯಾರ್ಜನೆ ಮಾಡಬಹುದು. ಇನ್ನೂ ಸೇರಿಕೊಳ್ಳದ ಅಭ್ಯರ್ಥಿಗಳು ರಾಷ್ಟ್ರೀಯ ಮುಕ್ತ ಶಾಲೆಯ ಫೋರ್ಟಲ್‌ನಲ್ಲಿ ಆ.16ರಿಂದ ಸೆ.15ರೊಳಗೆ ನೋಂದಣಿ ಮಾಡಿಕೊಳ್ಳಬೇಕು. ಈಗಾಗಲೇ ನೋಂದಣಿ ಮಾಡಿಕೊಂಡಿರುವವರಿಗೆ ಇದು ಅನ್ವಯಿಸುವುದಿಲ್ಲ. ಆದರೆ, 2019ರ ಮಾರ್ಚ್‌ ಒಳಗೆ ಎಲ್ಲರೂ ಡಿ.ಇಡಿ ಪಡೆದಿರಲೇಬೇಕು. ಇಲ್ಲವಾದರೆ ಶಿಕ್ಷಕರಾಗಿ ಮುಂದುವರಿಯಲು ಮಾನ್ಯತೆಯೇ ಇರುವುದಿಲ್ಲ.

ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಗೆ ತಿದ್ದುಪಡಿ ತಂದಿರುವುದರಿಂದ ಇದು ಸರ್ಕಾರಿ ಶಾಲೆಗೆ ಮಾತ್ರವಲ್ಲದೇ ಅನುದಾನಿತ
ಹಾಗೂ ಖಾಸಗಿ ಶಾಲೆಗೂ ಅನ್ವಯಿಸುತ್ತದೆ. ಬಹುತೇಕ ಖಾಸಗಿ ಶಾಲೆಯಲ್ಲಿ ತರಬೇತಿ ಪಡೆದ ಶಿಕ್ಷಕರು ಇರುತ್ತಾರೆ. ಆದರೆ, ಎನ್‌ಸಿಇಟಿ ನಿಯಮಾನುಸಾರ ಎಲ್ಲ ಶಿಕ್ಷಕರು 2019ರ ಮಾರ್ಚ್‌ 31ರೊಳಗೆ ಡಿ.ಇಡಿ ಕೋರ್ಸ್‌ ಪೂರೈಸಿರಲೇಬೇಕು.

– ಬಿ.ಕೆ.ಬಸವರಾಜು,
ನಿರ್ದೇಶಕ ಪ್ರಾಥಮಿಕ ಶಿಕ್ಷಣ

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next