ಬೆಳ್ತಂಗಡಿ : ಪುತ್ತೂರು ತಾಲೂಕಿನ ಪಟ್ನೂರು ಗ್ರಾಮದ ರೆಂಜಾಳ-ದೇಂತಡ್ಕ ಸಮೀಪ ವನಪ್ರದೇಶದಲ್ಲಿ ಸುಮಾರು 15ನೇ ಶತಮಾನದ ತುಳು ಶಾಸನ ಪತ್ತೆಯಾಗಿದೆ. ಶಾಸನ ಮೂರು ಅಡಿ ಎತ್ತರ ಹಾಗೂ ಒಂದೂವರೆ ಅಡಿ ಅಗಲ ಇರುವ ಶಿಲೆಯ ಎರಡೂ ಬದಿ ಎಂಟು ಸಾಲುಗಳ ಒಟ್ಟು 16 ಸಾಲು ತುಳು ಲಿಪಿಯಲ್ಲಿ ಬರೆಯಲಾಗಿದೆ ಎಂದು ಉಜಿರೆಯ ಎಸ್.ಡಿ.ಎಂ. ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಹಾಗೂ ಶಾಸನ ತಜ್ಞ ಡಾ| ವೈ. ಉಮಾನಾಥ ಶೆಣೈ ತಿಳಿಸಿದ್ದಾರೆ.
ಶಾಸನ ಸಿಕ್ಕಿದ ಸ್ಥಳವನ್ನು ತೋಟದ ಮಾಲಕ ಶಿವರಾಮ ನಾಯ್ಕರ ಮನೆಯವರು ಸ್ವಚ್ಛಗೊಳಿಸುವಾಗ ಶಾಸನದ ಕಲ್ಲು ಪತ್ತೆಯಾಗಿದೆ. ಅರಣ್ಯ ಪ್ರದೇಶವಾಗಿರುವುದರಿಂದ ಅರ್ಧ ಎಕರೆ ಪ್ರದೇಶದಲ್ಲಿ ದೇವಸ್ಥಾನ ಇದ್ದು, ಕಂಟಕ ಪರಿಹಾರಾರ್ಥವಾಗಿ ಮೇಷ ಮಾಸದಲ್ಲಿ ಉಮಾಧರ ಎಂಬಾತನ ಮಗನಾದ ವೀರಭದ್ರನನ್ನು ಪ್ರತಿಷ್ಠಾಪಿಸಿ ದೇವಸ್ಥಾನ ನಿರ್ಮಿಸಿರುವ ಕುರಿತು ಉಲ್ಲೇಖೀಸಲಾಗಿದೆ ಎಂದು ತಿಳಿದು ಬರುತ್ತದೆ. ಇಲ್ಲಿ ಉಮಾ-ಶಿವ-ವೀರಭದ್ರ ಎಂಬ ಮೂರು ಶಿವಲಿಂಗ ಇರುವ ಸಾಧ್ಯತೆ ಇರುವ ಕುರುಹು ಲಭಿಸಿದೆ.
ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನ ಪ್ರತಿಷ್ಠಾನದ ನಿರ್ದೇಶಕ ಡಾ| ಎಸ್.ಆರ್. ವಿಘ್ನರಾಜ, ನಿವೃತ್ತ ಲೆ| ಕ| ರಮಾಕಾಂತನ್ ಶಾಸನ ಓದುವಲ್ಲಿ ಸಹಕರಿಸಿದರು.