Advertisement

ಎಬಿಸಿ ಕೆಟಗೆರಿಯಲ್ಲಿ ವೈದ್ಯ ಶಿಕ್ಷಣದ ವೆಚ್ಚ ಇಳಿಕೆ: ಸಿಎಂ

10:00 PM Mar 21, 2022 | Team Udayavani |

ದಾವಣಗೆರೆ: ಕರ್ನಾಟಕದಲ್ಲಿ ವೈದ್ಯಕೀಯ ಶಿಕ್ಷಣದ ವೆಚ್ಚ ಕಡಿಮೆ ಮಾಡುವ ಕುರಿತಂತೆ ಸರ್ಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement

ಸೋಮವಾರ ದಾವಣಗೆರೆಯ ಜಿಎಂಐಟಿ ಹೆಲಿಪ್ಯಾಡ್‌ನ‌ಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈಗಿರುವ ವೈದ್ಯಕೀಯ ಶಿಕ್ಷಣದ ಶುಲ್ಕ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣದ ವೆಚ್ಚ ಕಡಿಮೆ ಮಾಡುವ ಬಗ್ಗೆ ಚರ್ಚೆ ನಡೆದಿದೆ. ಕರ್ನಾಟಕದಲ್ಲಿ ಎಬಿಸಿ ಕೆಟಗೆರಿ ಆಧಾರದಲ್ಲಿ ವೈದ್ಯಕೀಯ ಶಿಕ್ಷಣದ ವೆಚ್ಚದ ಕಡಿಮೆ ಮಾಡುವ ತೀರ್ಮಾನ ಮಾಡಲಾಗಿದೆ.

ಇಡೀ ದೇಶದಲ್ಲಿ ವೈದ್ಯಕೀಯ ಶಿಕ್ಷಣದ ನಿಯಂತ್ರಣ ಹೊಂದಿರುವ ರಾಷ್ಟ್ರೀಯ ವೈದ್ಯಕೀಯ ಮಂಡಳಿ ಸಹ ವೆಚ್ಚವನ್ನು ಕಡಿಮೆ ಮಾಡುವ ಚಿಂತನೆ ನಡೆಸಿದೆ. ಉಕ್ರೇನ್‌ ಯುದ್ಧ ಆದ ಮೇಲೆ ವೈದ್ಯಕೀಯ ವೆಚ್ಚ ಕಡಿಮೆ ಮಾಡುವ ಪುನರ್‌ ಚಿಂತನೆ ನಡೆದಿದೆ ಎಂದರು.

ಸರ್ಕಾರಿ ಕೋಟಾದ ಸೀಟುಗಳಲ್ಲಿ ಶುಲ್ಕ, ವೆಚ್ಚ ಕಡಿಮೆ ಇದೆ. ಖಾಸಗಿ ವಲಯದಲ್ಲಿ ಬಹಳಷ್ಟು ಹೆಚ್ಚಾಗುತ್ತಿದೆ. ದ್ವಿತೀಯ ಪಿಯುಸಿಯಲ್ಲಿ ಶೇ.90-95 ರಷ್ಟು ಅಂಕ ಪಡೆದ ವಿದ್ಯಾರ್ಥಿಗಳು ನೀಟ್‌ನಲ್ಲಿ ಕಡಿಮೆ ರ್‍ಯಾಂಕಿಂಗ್‌ ಪಡೆಯುವಂತಹವರು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಮ್ಯಾನೇಜ್‌ಮೆಂಟ್‌, ಅನಿವಾಸಿ ಭಾರತೀಯ ಸೀಟುಗಳಿಗೆ ಹೋಗುತ್ತಾರೆ.

ಅಲ್ಲಿಯೂ ಶುಲ್ಕ, ವೆಚ್ಚವೂ ಹೆಚ್ಚಾಗಿರುವುದರಿಂದ ಬೇರೆ ಮಾರ್ಗದಲ್ಲಿ ವಿದೇಶಗಳಿಗೆ ವೈದ್ಯಕೀಯ ಶಿಕ್ಷಣಕ್ಕೆ ಹೋಗುತ್ತಾರೆ ಎಂದರು.

Advertisement

ಯುದ್ಧದ ಕಾರಣಕ್ಕೆ ಉಕ್ರೇನ್‌ನಿಂದ ವಾಪಸ್‌ ಆಗಿರುವ ವೈದ್ಯ ವಿದ್ಯಾರ್ಥಿಗಳ ಮುಂದಿನ ಶಿಕ್ಷಣದ ಬಗ್ಗೆ ಕೇಂದ್ರ ಸರ್ಕಾರ ಗಂಭೀರ ಚಿಂತನೆ ಮಾಡುತ್ತಿದೆ. ಅಲ್ಲಿ ಕೋರ್ಸ್‌ ಮುಗಿದರೂ ಇಲ್ಲಿ ಮತ್ತೆ ಪರೀಕ್ಷೆ ತೆಗೆದು ಕೊಳ್ಳಬೇಕಾಗುತ್ತದೆ. ಕರ್ನಾಟಕದಂತೆ ದೇಶದ ಇತರೆ ರಾಜ್ಯಗಳಲ್ಲೂ ಉಕ್ರೇನ್‌ನಿಂದ ವಾಪಸ್ಸಾದ ಪ್ರಥಮ, ದ್ವಿತೀಯ, ತೃತೀಯ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳೂ ಇದ್ದಾರೆ. ಆ ಎಲ್ಲರ ಮುಂದಿನ ಶಿಕ್ಷಣದ ಬಗ್ಗೆ ಕೇಂದ್ರ ಗಂಭೀರ ಚಿಂತನೆ ನಡೆಸಿದೆ. ಸಚಿವ ಸಂಪುಟದಲ್ಲಿ ವಿಸ್ತರಣೆ, ಪುನಾರಚನೆ ಬಗ್ಗೆ ಮಾತನಾಡಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next