Advertisement

ಇಳಿಕೆಯಾಗುತ್ತಿದೆ ಟ್ರಾಫಿಕ್‌ ದಂಡ ಸಂಗ್ರಹ ಪ್ರಮಾಣ

09:58 AM Aug 19, 2018 | Team Udayavani |

ಪುತ್ತೂರು: ನಗರ ವ್ಯಾಪ್ತಿಯ ಸಂಚಾರ ದಟ್ಟಣೆ ಹಿನ್ನೆಲೆಯಲ್ಲಿ ಸೂಕ್ತ ಕ್ರಮಗಳನ್ನು ಜಾರಿಗೊಳಿಸಿದ ಪರಿಣಾಮವೋ ಎಂಬಂತೆ, ಟ್ರಾಫಿಕ್‌ ಪ್ರಕರಣ ಹಾಗೂ ದಂಡದ ಪ್ರಮಾಣ ಇಳಿಕೆಯಾಗಿದೆ. ಎಪ್ರಿಲ್‌ನಲ್ಲಿ 2,851, ಮೇನಲ್ಲಿ 3,300, ಜೂನ್‌ನಲ್ಲಿ 3,440 ಹಾಗೂ ಜುಲೈನಲ್ಲಿ 2,795 ಪ್ರಕರಣಗಳು ದಾಖಲಾಗಿವೆ. ಹೆಲ್ಮೆಟ್‌, ಏಕಮುಖ ರಸ್ತೆ, ನೋ ಪಾರ್ಕಿಂಗ್‌ನಲ್ಲಿ ಪಾರ್ಕಿಂಗ್‌ ಮೊದಲಾದ ವಿಷಯಗಳಿಗೆ ವಿಧಿಸಿದ ಪ್ರಕರಣಗಳಿವು. ಈ ಹಿಂದಿನ ಒಟ್ಟು ಪ್ರಕರಣಗಳನ್ನು ಲೆಕ್ಕ ಹಾಕುತ್ತಾ ಸಾಗಿದರೆ, ಜುಲೈನಲ್ಲಿ ಕಡಿಮೆ ಪ್ರಕರಣ ದಾಖಲಾಗಿರುವುದನ್ನು ಗಮನಿಸಬಹುದು.

Advertisement

ಅಭಿಪ್ರಾಯ ಸಂಗ್ರಹ
ಜುಲೈ ತಿಂಗಳಲ್ಲಿ ಪೊಲೀಸರು ರಸ್ತೆ ಸುರಕ್ಷ ಕಾರ್ಯಕ್ರಮ ನಡೆಸಿದ್ದರು. ಜುಲೈ 23ರಿಂದ 29ರ ವರೆಗೆ ವಿವಿಧ ವರ್ಗದ ಜನರ ಸಭೆ ನಡೆಸಿ, ಅಭಿಪ್ರಾಯ ಸಂಗ್ರಹಿಸಿದ್ದರು. ಇದರಲ್ಲಿ ಕೇಳಿಬಂದ ಸಲಹೆಗಳನ್ನು ಪರಿಗಣಿಸಿ, ಜಾರಿಗೊಳಿಸುವಲ್ಲಿ ಪೊಲೀಸ್‌ ನಿರೀಕ್ಷಕ ಮಹೇಶ್‌ ಪ್ರಸಾದ್‌ ನೇತೃತ್ವದ ತಂಡ ಯಶಸ್ವಿಯಾಗಿದೆ. ಇದರ ಪರಿಣಾಮವೆಂಬಂತೆ ಜುಲೈ ತಿಂಗಳಿನಲ್ಲಿ ಸಂಗ್ರಹವಾದ ದಂಡ ಪ್ರಮಾಣ 4,23,300 ರೂ.ಗೆ ಇಳಿಕೆಯಾಗಿದೆ. ಇದರ ಮೊದಲಿನ ತಿಂಗಳಿನಲ್ಲಿ 6.29 ಲಕ್ಷ ರೂ.ನವರೆಗೆ ದಂಡ ಸಂಗ್ರಹವಾಗಿ ದಾಖಲೆ ಬರೆದಿತ್ತು.

ಪುತ್ತೂರು ಪೇಟೆಯ ಸಂಚಾರ ದಟ್ಟಣೆ ಮಿತಿಮೀರಿ ಹೋಗಿದೆ. ಇದನ್ನು ಹಿಡಿತಕ್ಕೆ ತರುವ ಹಿನ್ನೆಲೆಯಲ್ಲಿ ಪೊಲೀಸರು ದಂಡ ವಿಧಿಸುವ ಕೆಲಸಕ್ಕೆ ಮುಂದಾದರು. ತಿಂಗಳಿಗೆ 6.5 ಲಕ್ಷ ರೂ. ದಂಡ ಸಂಗ್ರಹಿಸಿದ್ದೂ ಇದೆ. ಒಂದು ಹಂತದಲ್ಲಿ ಇದು ಕೆಲ ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಯಿತು. ಪಾರ್ಕಿಂಗ್‌ ವ್ಯವಸ್ಥೆ ಇಲ್ಲದ ಕಾರಣಕ್ಕೆ, ಸಿಕ್ಕಲ್ಲಿ ವಾಹನ ಪಾರ್ಕಿಂಗ್‌ ಮಾಡಿದ್ದೇವೆ. ಇದಕ್ಕೆ ದಂಡ ವಿಧಿಸುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಈ ಹಿನ್ನೆಲೆಯಲ್ಲಿ ರಸ್ತೆ ಸುರಕ್ಷತಾ ಕಾರ್ಯಕ್ರಮವನ್ನು ಪೊಲೀಸರು ಕೈಗೊಂಡರು. ಮಾತ್ರವಲ್ಲ, ಇದರಲ್ಲಿ ಕೇಳಿಬಂದ ಅಭಿಪ್ರಾಯಗಳನ್ನು ಸಮರ್ಪಕವಾಗಿ ಜಾರಿಗೆ ತಂದರು ಕೂಡ.

ಜುಲೈ ಅಂತ್ಯಭಾಗದಲ್ಲಿ ರಸ್ತೆ ಸುರಕ್ಷಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಇದಕ್ಕೆ ಮೊದಲು ದಂಡ ವಿಧಿಸುತ್ತಿದ್ದು, ಆ ತಿಂಗಳಿನಲ್ಲಿ 2795 ಪ್ರಕರಣ ದಾಖಲಾಯಿತು. ತಿಂಗಳ ಕೊನೆ ವಾರದಲ್ಲಿ ಹಾಗೂ ಬಳಿಕ ದಂಡ ವಿಧಿಸುವುದರಿಂದ ಪೊಲೀಸರು ಹಿಂದೆ ಸರಿದರು. ಬದಲಿಗೆ ಸಂಚಾರ ಕಾನೂನನ್ನು ಜಾರಿಗೆ ತಂದರು. ಆದ್ದರಿಂದ ಸಂಗ್ರಹ ಕಡಿಮೆಗೊಂಡಿದೆ. ಸಾರ್ವಜನಿಕರಿಂದ ಲಿಖಿತ ರೂಪದಲ್ಲಿ ಪಡೆದುಕೊಂಡ ಸಲಹೆಗಳನ್ನು ಆಧರಿಸಿ, ಪೊಲೀಸರು ಒಂದು ವರದಿ ತಯಾರಿಸಿದ್ದಾರೆ ಎನ್ನಲಾಗಿದೆ.

ಉಲ್ಲಂಘನೆ ಕಡಿಮೆ
ಈಗಲೂ ಕಾನೂನು ಕ್ರಮ ಜಾರಿಗೊಳಿಸುವುದನ್ನು ಮುಂದುವರಿಸಿದ್ದೇವೆ. ಆದರೆ ಬೊಳುವಾರಿನಿಂದ ಕಲ್ಲಾರೆ ವರೆಗೆ ಸಂಚಾರ ಸುಗಮವಾಗಿ ಸಾಗುತ್ತಿದೆ. ಪ್ರಕರಣ ಹಾಗೂ ದಂಡದ ಪ್ರಮಾಣ ಕಡಿಮೆ ಆಗಿದೆ ಎಂದರೆ, ಕಾನೂನು ಉಲ್ಲಂಘಿಸುವ ಪ್ರಮಾಣ ಕಡಿಮೆ ಆಗಿದೆ ಎಂದೇ ಅರ್ಥ. ಕೆಲವು ಕಡೆಗಳಲ್ಲಿ ರಸ್ತೆಗೆ ಇಂಟರ್‌ಲಾಕ್‌ ಹಾಕಿದ್ದು, ಗೊಂದಲಕ್ಕೆ ಕಾರಣ ಆಗುತ್ತಿದೆ.
– ಮಹೇಶ್‌ ಪ್ರಸಾದ್‌,
ಪುತ್ತೂರು ಪೊಲೀಸ್‌ ನಿರೀಕ್ಷಕ

Advertisement

 ಗಣೇಶ್‌ ಎನ್‌. ಕಲ್ಲರ್ಪೆ 

Advertisement

Udayavani is now on Telegram. Click here to join our channel and stay updated with the latest news.

Next