Advertisement

ತಗ್ಗಿದ ಕೋವಿಡ್‌ ಮರಣ ಪ್ರಮಾಣ: ಸವಾಲು ಇನ್ನೂ ಇದೆ

11:40 PM Dec 17, 2020 | mahesh |

ಕೋವಿಡ್‌ ಮನುಷ್ಯನಿಗೆ ಬಂದಪ್ಪಳಿಸಿ ಈಗಾಗಲೇ ಒಂದು ವರ್ಷ ಕಳೆದಿದೆ. ಚೀನದ ವುಹಾನ್‌ನಿಂದ ಆರಂಭವಾದ ಈ ಸಾಂಕ್ರಾಮಿಕದ ಆರ್ಭಟವು ಭಾರತ ಸೇರಿದಂತೆ ಜಗತ್ತಿನ ಬಹುತೇಕ ರಾಷ್ಟ್ರಗಳಿಗೆ ಬಹು ಆಯಾಮದಲ್ಲಿ ತಂದಿಟ್ಟಿರುವ ಸಂಕಷ್ಟ ಅಷ್ಟಿಷ್ಟಲ್ಲ. ಆದಾಗ್ಯೂ ಲಸಿಕೆ ಲಭ್ಯವಾಗುವವರೆಗೂ ಸಾಂಕ್ರಾಮಿಕದ ಹಾವಳಿ ತಗ್ಗುವ ಲಕ್ಷಣವಿಲ್ಲವಾದರೂ ಗಮನಾರ್ಹ ಸಂಗತಿಯೆಂದರೆ, ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಸರಕಾರಗಳು, ಆರೋಗ್ಯ ಇಲಾಖೆಗಳು, ವೈಜ್ಞಾನಿಕ ವಲಯದ ಅವಿರತ ಶ್ರಮದ ಫ‌ಲಗಳು ಕಾಣಿಸುತ್ತಿರುವುದು.

Advertisement

ಕರ್ನಾಟಕದ ವಿಚಾರಕ್ಕೇ ಬರುವುದಾದರೆ, ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಈ ತಿಂಗಳ ಮೊದಲೆರಡು ವಾರಗಳಲ್ಲಿ ಕೋವಿಡ್‌ ಕಾರಣದಿಂದಾಗಿ ಒಂದೇ ಒಂದು ಸಾವೂ ದಾಖಲಾಗಿಲ್ಲ. ಇನ್ನು ಹೊಸ ಪ್ರಕರಣಗಳ ಸಂಖ್ಯೆಯಲ್ಲೂ ಇಳಿಕೆ ದಾಖಲಾಗುತ್ತಿದೆ. ನಿತ್ಯ ಪರೀಕ್ಷೆಗಳ ಪ್ರಮಾಣ ಸರಾಸರಿ 1 ಲಕ್ಷ ದಾಟಿದ್ದರೂ ಪ್ರಕರಣಗಳ ಸಂಖ್ಯೆ ತಗ್ಗುತ್ತಿರುವುದು ತುಸು ನೆಮ್ಮದಿಯ ವಿಚಾರವೇ ಸರಿ. ಇವೆಲ್ಲದರ ನಡುವೆಯೇ, ನೆನಪಿಡಲೇಬೇಕಾದ ಅಂಶವೆಂದರೆ ಐರೋಪ್ಯ ರಾಷ್ಟ್ರಗಳು ಸೇರಿದಂತೆ, ಜಗತ್ತಿನ ಅನೇಕ ದೇಶಗಳಲ್ಲಿ ಕೋವಿಡ್‌ ಅಲೆ ಕೆಲವು ಕಾಲ ತಗ್ಗಿ, ಮತ್ತೆ ಏರಿಕೆಯಾದ ಉದಾಹರಣೆಗಳು ಸಿಗುತ್ತಿವೆ. ಈ ಕಾರಣಕ್ಕಾಗಿ ಅನೇಕ ರಾಷ್ಟ್ರಗಳಲ್ಲಿ ಲಾಕ್‌ಡೌನ್‌ ಸೇರಿದಂತೆ, ಕಟ್ಟುನಿಟ್ಟಾದ ಸುರಕ್ಷತ ಕ್ರಮಗಳನ್ನು ಜಾರಿ ಮಾಡಲಾಗುತ್ತಿದೆ. ಪ್ರಸಕ್ತ ಭಾರತದಲ್ಲಿ ಆರೋಗ್ಯ ಇಲಾಖೆಗಳು, ಸರಕಾರಗಳಿಂದ ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಸಂಘಟಿತ ಪ್ರಯತ್ನ ಕಾಣಿಸುತ್ತಿದೆಯಾದರೂ ಜನಸಾಮಾನ್ಯರ ವರ್ತನೆ ಮಾತ್ರ ಕಳವಳ ಹೆಚ್ಚಿಸುವಂತೆಯೇ ಇದೆ. ಮಾಸ್ಕ್ ಧರಿಸುವುದು ಕಡ್ಡಾಯವಾದರೂ ಅದನ್ನು ನೆಪಮಾತ್ರಕ್ಕೆಂಬಂತೆ ಧರಿಸಲಾಗುತ್ತಿದೆ. ಸಾಂಕ್ರಾಮಿಕದ ಅಪಾಯವೇ ದೂರವಾಗಿಬಿಟ್ಟಿದೆಯೇನೋ ಎನ್ನುವ ರೀತಿಯಲ್ಲಿ ಸಾಮಾಜಿಕ ಅಂತರ ಪಾಲನೆಯ ನಿಯಮವನ್ನು ಎಲ್ಲೆಡೆ ಉಲ್ಲಂ ಸಲಾಗುತ್ತಿದೆ. ನಿಯಮಿತವಾಗಿ ಸೋಪಿನಿಂದ ಕೈತೊಳೆಯುವ ಪರಿಪಾಠವೇ ಮಾಯವಾಗುತ್ತಿದೆ.

ಈಗ ಹೊಸ ವರ್ಷವೂ ಎದುರಾಗುತ್ತಿರುವುದರಿಂದಾಗಿ, ಆ ಸಮಯದಲ್ಲಿ ಕಟ್ಟುನಿಟ್ಟಾದ ನಿಯಮಗಳನ್ನು, ನಿರ್ಬಂಧಗಳನ್ನು ಜಾರಿಗೊಳಿಸದಿದ್ದರೆ, ಪ್ರಕರಣಗಳ ಸಂಖ್ಯೆ ಮಿತಿಮೀರುವ ಅಪಾಯವಿದೆ ಎಂದು ಆರೋಗ್ಯ ಪರಿಣತರು ಎಚ್ಚರಿಸುತ್ತಿದ್ದಾರೆ. ಈ ವಿಷಯವನ್ನು ಸರಕಾರಗಳು ಹಾಗೂ ಜನಸಾಮಾನ್ಯರು ಗಂಭೀರವಾಗಿ ಪರಿಗಣಿಸಲೇಬೇಕಿದೆ. ಹೊಸ ವರ್ಷವನ್ನು ಸ್ವಾಗತಿಸಲು ಸಾಮಾಜಿಕ ಅಂತರ ಪಾಲನೆ ಮರೆತು ಗುಂಪುಗೂಡಿ ಕುಣಿದಾಡಬೇಕು ಎಂದೇನೂ ಇಲ್ಲ. ಅದರಲ್ಲೂ ನಗರ ಪ್ರದೇಶಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಮೈಮರೆಯುವ ಯುವ ಜನಾಂಗವನ್ನು ನಿಯಂತ್ರಿಸುವುದೇ ಪೊಲೀಸರಿಗೆ ದೊಡ್ಡ ಸವಾಲಾಗಿರುತ್ತದೆ. ಈಗ ಇಂಥ ಆರೋಗ್ಯ ಆಪತ್ತಿನ ಸಮಯದಲ್ಲಿ ಯುವಕರು ಜಾಗ್ರತೆ ವಹಿಸಲೇಬೇಕು. ಈ ವಿಚಾರದಲ್ಲಿ ಸರಕಾರಗಳೂ ತ್ವರಿತವಾಗಿ ಕಟ್ಟುನಿಟ್ಟಾದ ಮಾರ್ಗಸೂಚಿಯನ್ನು ಬಿಡುಗಡೆ ಮಾಡುವುದು ಒಳಿತು.

ಈಗಾಗಲೇ ಬ್ರಿಟನ್‌ ಮತ್ತು ಅಮೆರಿಕದಲ್ಲಿ ಲಸಿಕೆ ವಿತರಣೆ ಕಾರ್ಯ ಭರದಿಂದ ಆರಂಭವಾಗಿದೆ. ಭಾರತದಲ್ಲೂ ಲಸಿಕೆಯ ವಿಚಾರವು ನಿರ್ಣಾಯಕ ಘಟ್ಟ ತಲುಪುವ ಹಂತದಲ್ಲಿದೆ. ಸೀರಂ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ, ಭಾರತ್‌ ಬಯೋಟೆಕ್‌ನಂಥ ಭಾರತೀಯ ಕಂಪೆನಿಗಳು ವೈಶ್ವಿ‌ಕ ವೈಜ್ಞಾನಿಕ ಸಂಸ್ಥೆಗಳ ಸಹಭಾಗಿತ್ವದಲ್ಲಿ ಪ್ರಯೋಗಿಸುತ್ತಿರುವ ಲಸಿಕೆಗಳ ಫ‌ಲಪ್ರದದ ವಿಚಾರದಲ್ಲಿ ಹಾಗೂ ವಿತರಣೆ ಜಾಲದ ರೂಪುರೇಷೆಯಲ್ಲಿ ಗಮನಾರ್ಹ ವೇಗ ಕಾಣಿಸುತ್ತಿದೆ. ಹಾಗೆಂದಾಕ್ಷಣ ಲಸಿಕಾಕರಣ ಪ್ರಕ್ರಿಯೆಯು ಒಂದು ದಿನದಲ್ಲಿ ಆಗುವಂಥದ್ದಲ್ಲ ಎನ್ನುವುದನ್ನು ನಾವು ನೆನಪಿಡಬೇಕು. ಹೀಗಾಗಿ ಫ‌ಲಪ್ರದ ಲಸಿಕೆ ಬರುವವರೆಗೂ ಮುಂಜಾಗ್ರತೆ ಕ್ರಮಗಳನ್ನು ಪಾಲಿಸುವುದೇ ನಮ್ಮೆದುರಿರುವ ಮಾರ್ಗ.

Advertisement

Udayavani is now on Telegram. Click here to join our channel and stay updated with the latest news.

Next