ಜೂ.16ರಿಂದ ಜು.15ರ ವರೆಗಿನ ಪರಿಸ್ಥಿತಿ ಬಗ್ಗೆ ಮಾಹಿತಿ ಬಿಡುಗಡೆ
ಒಂದು ತಿಂಗಳ ಅವಧಿಯಲ್ಲಿ ನಡೆದದ್ದು 47 ಪ್ರಕರಣ
ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಜೂ.19ರಂದು ಪಿಡಿಪಿ-ಬಿಜೆಪಿ ಮೈತ್ರಿ ಸರಕಾರ ಪತನವಾಗಿ ರಾಜ್ಯಪಾಲರ ಆಳ್ವಿಕೆ ಬಂದ ಬಳಿಕ ಉಗ್ರರ ಹಿಂಸಾಕೃತ್ಯಗಳು ಕಡಿಮೆಯಾಗಿವೆ. ಹೀಗೆಂದು ಕೇಂದ್ರ ಗೃಹ ಸಚಿವಾಲಯದ ದಾಖಲೆಗಳು ಪುಷ್ಟೀಕರಿಸುತ್ತಿವೆ. ಜೂ.16ರಿಂದ ಜು.15ರ ವರೆಗಿನ ಮಾಹಿತಿ ಪ್ರಕಾರ ರಮ್ಜಾನ್ ಅವಧಿಯಲ್ಲಿ ಉಗ್ರರ ದಾಳಿ ತಗ್ಗಿದ್ದವು. ಈ ಅವಧಿಯಲ್ಲಿ ಕೇಂದ್ರ ಸರಕಾರ ಕೂಡ ಸೀಮಿತ ಕದನ ವಿರಾಮ ಘೋಷಣೆ ಮಾಡಿತ್ತು.
ಜೂ.20ರಂದು ಕಣಿವೆ ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆ ಜಾರಿಯಾಗಿತ್ತು. ಒಂದು ತಿಂಗಳ ಅವಧಿಯಲ್ಲಿ 47 ಉಗ್ರ ದಾಳಿ ಪ್ರಕರಣಗಳು ನಡೆದಿವೆ. ಆದರೆ ಸೀಮಿತ ಕದನ ವಿರಾಮ ಮತ್ತು ರಾಜ್ಯಪಾಲರ ಆಳ್ವಿಕೆಗಿಂತ ಮೊದಲಿನ ಒಂದು ತಿಂಗಳ ಅವಧಿಯಲ್ಲಿ ಗ್ರೆನೇಡ್ ದಾಳಿ, ಮನಬಂದಂತೆ ಉಗ್ರರಿಂದ ಗುಂಡು ಹಾರಾಟ ಸೇರಿದಂತೆ ಒಟ್ಟು 80 ಪ್ರಕರಣಗಳು ವರದಿಯಾಗಿದ್ದವು.
14 ಭಯೋತ್ಪಾದಕರು ಮತ್ತು ಐವರು ಭದ್ರತಾ ಸಿಬಂದಿ ಒಂದು ತಿಂಗಳ ಅವಧಿಯಲ್ಲಿ ಅಸುನೀಗಿದ್ದಾರೆ. ಅದರ ಹಿಂದಿನ ಅವಧಿಯಲ್ಲಿ 24 ಉಗ್ರರು ಮತ್ತು 10 ಭದ್ರತಾ ಸಿಬಂದಿ ಅಸುನೀಗಿದ್ದರು. ರಾಜ್ಯಪಾಲರ ಆಳ್ವಿಕೆ ಅವಧಿಯಲ್ಲಿ 95 ಕಲ್ಲೆಸೆತ, 90 ಕದನವಿರಾಮ ಉಲ್ಲಂಘನೆಯ ಪ್ರಕರಣಗಳು ನಡೆದಿವೆ. ಜತೆಗೆ ಏಳು ಮಂದಿ ನಾಗರಿಕರೂ ಕೊಲ್ಲಲ್ಪಟ್ಟಿದ್ದಾರೆ.