ಬೆಂಗಳೂರು: ಜಾಗೃತಿ ಹಾಗೂ ಮುಂಜಾಗ್ರತಾ ಕ್ರಮಗಳಿಂದಾಗಿ ರಾಜ್ಯದಲ್ಲಿ ಕಳೆದ 7 ತಿಂಗಳಲ್ಲಿ ಎಚ್‌ಐವಿ ಸೋಂಕು ಹರಡುವಿಕೆ ಪ್ರಮಾಣ ಶೇ 0.10 ಇಳಿಕೆಯಾಗಿದೆ.
2018-19 ನೇ ಸಾಲಿನಲ್ಲಿ ಒಟ್ಟಾರೆ 24,73, 845 ಮಂದಿಗೆ ಪರೀಕ್ಷೆ ಮಾಡಿಸಿದ್ದು, 18,143 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈ ಮೂಲಕ ಇದರ ಪ್ರಮಾಣ ಶೇ0.73ರಷ್ಟಿತ್ತು. ಆದರೆ, 2019-20ರ ಮೊದಲ 7 ತಿಂಗಳಲ್ಲಿ ಒಟ್ಟಾರೆ 14,97,590 ಮಂದಿಗೆ ಪರೀಕ್ಷೆ ಮಾಡಿಸಿದ್ದು, 9,504 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಇದರ ಪ್ರಮಾಣ ಶೇ.0.63 ರಷ್ಟಿದೆ. ಈ ಮೂಲಕ ಇದರ ಪ್ರಮಾಣಹರಡುವ ಪ್ರಮಾಣ ಶೇ.0.10 ಇಳಿಕೆಯಾದಂತಾಗಿದೆ.ರಾಜ್ಯದಲ್ಲಿ ಒಟ್ಟು 54 ಲೈಂಗಿಕ ರೋಗ ಪತ್ತೆ ಕೇಂದ್ರಗಳಿದ್ದು (ಸುರಕ್ಷಾ ಕ್ಲಿನಿಕ್) ಇವುಗಳಲ್ಲಿ 2019ರಲ್ಲಿ 4,20,808 ಲಕ್ಷ ಮಂದಿಗೆ ಪರೀಕ್ಷೆ ಮಾಡುವ ಗುರಿ ಹೊಂದಿದೆ.
ಈಗಾಗಲೇ 2019 ಏಪ್ರಿಲ್‌ನಿಂದ ಅಕ್ಟೋಬರ್ ವರೆಗೆ 1,36,135 ಮಂದಿ ಪರೀಕ್ಷೆ ಮಾಡಿಸಿದ್ದಾರೆ. ಈಮೂಲಕ ಶೇ.33 ಪ್ರಗತಿ ಸಾಧಿಸಿದಂತಾಗಿದೆ. ಸೋಂಕಿತ ತಾಯಿಯಿಂದ ಮಗುವಿಗೆ ಎಚ್‌ಐವಿ ಹರಡುವ ಸಾಧ್ಯತೆ ಇರಲಿದೆ. ಹೀಗಾಗಿ ಐಸಿಟಿಸಿ ಕೇಂದ್ರಗಳಲ್ಲಿ ಗರ್ಭಿಣಿಯರನ್ನು ಪರೀಕ್ಷೆ ಮಾಡಲಾಗುತ್ತದೆ. 2018-19ನೇ ಸಾಲಿನಲ್ಲಿ ಪರೀಕ್ಷೆಗೊಳಪಟ್ಟ 14.23ಲಕ್ಷ ಗರ್ಭಿಣಿಯರಲ್ಲಿ ಶೇ 0.05 ಮಂದಿಯಲ್ಲಿ ಎಚ್‌ಐವಿ ಸೋಂಕು ಪತ್ತೆಯಾಗಿದೆ. ಕಳೆದ ವರ್ಷ ಶೇ.0.06 ಇತ್ತು. ಈ ಪ್ರಮಾಣ 2013-14ನೇ ಸಾಲಿನಲ್ಲಿ ಶೇ 0.12ರಷ್ಟಿತ್ತು.
ನಿಯಂತ್ರಣಕ್ಕೆ ಕ್ರಮ: ಏಡ್ಸ್ ಸೋಂಕಿರುವ ರಾಜ್ಯಗಳಲ್ಲಿ ಕರ್ನಾಟಕ 9ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಶೇ.90ಕ್ಕಿಂತಅಧಿಕ ಪ್ರಕರಣಗಳಲ್ಲಿ ಹರಡುವಿಕೆಗೆ ಕಾರಣಏಡ್ಸ್ ಸೋಂಕಿತ ವ್ಯಕ್ತಿ ಜತೆಗಿನ ಅಸುರಕ್ಷಿತ ಲೈಂಗಿಕ ಸಂಬಂಧವೇ ಆಗಿದೆ. ಹೀಗಾಗಿ, ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ ರಾಜ್ಯದ ವಿವಿಧೆಡೆ ಕಾಂಡೋಮ್ ವಿತರಿಸುತ್ತಿದೆ. ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಸೇರಿ ವಿವಿಧೆಡೆ ಕಾಂಡೋಮ್‌ಗಳು ಉಚಿತವಾಗಿ ದೊರೆಯುತ್ತಿದೆ.
ಸರ್ಕಾರೇತರ ಸಂಸ್ಥೆಗಳೂ ಈ ಬಗ್ಗೆ ಜಾಗೃತಿ ಮೂಡಿಸಿ, ಕಾಂಡೋಮ್ ವಿತರಿಸುತ್ತಿದೆ. ರಾಜ್ಯದಲ್ಲಿ ಪ್ರತಿ ವರ್ಷ 3 ಕೋಟಿಗೂ ಅಧಿಕ ಕಾಂಡೋಮ್‌ಗಳನ್ನು ಉಚಿತವಾಗಿ ನೀಡಲಾಗುತ್ತಿದ್ದು, ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚಳವಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ ತಿಳಿಸಿದೆ. ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ ಸಮಗ್ರ ಆಪ್ತ ಸಮಾಲೋಚನೆ ಮತ್ತು ಪರೀಕ್ಷಾ ಕೇಂದ್ರಗಳಲ್ಲಿ (ಐಸಿಟಿಸಿ) ಎಚ್‌ಐವಿ ಸೋಂಕಿತರನ್ನು ಪತ್ತೆ ಮಾಡಿ, ಚಿಕಿತ್ಸೆ ನೀಡಲಾಗುತ್ತದೆ.