ರಾಮನಗರ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಕ್ರಮೇಣ ಇಳಿಮುಖವಾಗುತ್ತಿದೆ. ಆದರೆ, ಇನ್ನೊಂದೆಡೆ ಇಳಿಮುಖವಾಗುತ್ತಿರುವ ಸೋಂಕಿನ ಬಗ್ಗೆ ನಿರ್ಲಕ್ಷ ಸಲ್ಲದು ಎಂದು ವೈದ್ಯರು ಎಚ್ಚರಿಕೆ ನೀಡುತ್ತಿದ್ದಾರೆ.
ಚಳಿಗಾಲ ಮತ್ತು ಹಬ್ಬಗಳು ಕಾರಣ ಜನತೆ ಮೈ ಮರೆಯಬಾರದು, ದೈಹಿಕ ಅಂತರ ಮತ್ತು ಮಾಸ್ಕ್ ಧರಿಸುವುದನ್ನು ತಪ್ಪಿಸಬೇಡಿ ಎಂದು ವೈದ್ಯರು ಸಾರ್ವಜನಿಕರಿಗೆ ತಿಳಿ ಹೇಳಿದ್ದಾರೆ. ಕಳೆದ ಎರಡು ವಾರಗಳಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಜುಲೈ 30, 2020ರಂದು ಒಟ್ಟು ಸೋಂಕಿತರು 1086 ಮಂದಿ ಇದ್ದರು.
ಆಗಸ್ಟ್ ಅಂತ್ಯದ ವೇಳೆಗೆ ಸೋಂಕಿತರ ಸಂಖ್ಯೆ 2,361ಕ್ಕೆ ಹೆಚ್ಚಳವಾಗಿತ್ತು. ಅಂದರೆ ದಿನನಿತ್ಯ ಸುಮಾರು 80 ಮಂದಿ ಸೋಂಕಿತರು ಪತ್ತೆಯಾಗಿದ್ದರು. ಆಗಸ್ಟ್ ಮಾಸಾಂತ್ಯ ಮತ್ತು ಸೆಪ್ಟಂಬರ್ ಅಂತ್ಯದ ವೇಳೆಗೆ ಸೋಂಕಿತರ ಸಂಖ್ಯೆ 3,211ಕ್ಕೆ ಹೆಚ್ಚಳವಾಗಿತ್ತು. ಅಂದರೆ ಸೆಪ್ಟಂಬರ್ ತಿಂಗಳಲ್ಲಿ ಪ್ರತಿದಿನ ಸುಮಾರು 108 ಮಂದಿ ಸೋಂಕಿತರು ಪತ್ತೆಯಾಗುತ್ತಿದ್ದರು. ಅಕ್ಟೋಬರ್ ಆರಂಭದಲ್ಲಿ ಪ್ರತಿ ದಿನ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಲೇ ಇದೆ. ಗುಣಮುಖರ ಸಂಖ್ಯೆಹೆಚ್ಚಳ: ಅಕ್ಟೋಬರ್ ಮೊದಲ ಹತ್ತು (1ರಿಂದ 10ನೇ ದಿನಾಂಕದ ವರೆಗೆ ) ದಿನಗಳಲ್ಲಿ ಸರಾಸರಿ ಪ್ರತಿದಿನ 50 ಸೋಂಕಿತರು ಪತ್ತೆಯಾಗುತ್ತಿದ್ದರು. ನಂತರದ ಹತ್ತು ದಿನಗಳು (11 ರಿಂದ 20ನೇ ದಿನಾಂಕದ ವರೆಗೆ), ಅಕ್ಟೋಬರ್ ಕೊನೆಯ 10 ದಿನಗಳಲ್ಲಿ (21ರಿಂದ 30ನೆ ದಿನಾಂಕದ ವರೆಗೆ ) ಸರಾಸರಿ ಪ್ರತಿದಿನ 10 ಮಂದಿ ಸೋಂಕಿತರು ಪತ್ತೆಯಗುತ್ತಿದ್ದಾರೆ.
ಜಿಲ್ಲೆಯಲ್ಲಿ 70 ನಾಗರಿಕರು ಸೋಂಕಿಗೆ ಪ್ರಾಣತೆತ್ತಿದ್ದಾರೆ. ಆದರೂ, ಸಾವಿನ ಪ್ರಮಾಣವೂ ಶೇ 0.09ಕ್ಕಿಂತ ಕಡಿಮೆಯೇ ಇದೆ. ಸೋಂಕಿತರ ಗುಣಮುಖ ಜಿಲ್ಲೆಯಲ್ಲಿ ಹೆಚ್ಚಾಗಿರುವುದು ಸಮಾಧಾನದ ಸಂಗತಿಯಾಗಿದ್ದು, ಜಿಲ್ಲೆಯಲ್ಲಿ ಗುಣಮುಖರಾಗುತ್ತಿರುವವರ ಸಂಖ್ಯೆ ಶೇ.90ಕ್ಕೂ ಹೆಚ್ಚಾಗಿದೆ. ಸೋಂಕು ನಿಯಂತ್ರಣ: ಸುಮಾರು 10 ಲಕ್ಷ ಜನಸಂಖ್ಯೆ ಇರುವ ಜಿಲ್ಲೆಯಲ್ಲಿ ಈವರೆಗೆ 73,401 ಕೋವಿಡ್ ಸೋಂಕಿನ ಪರೀಕ್ಷೆಗಳು ನಡೆದಿವೆ. ಜನಸಂಖ್ಯೆ ಪರಿಗಣಿಸಿದರೆ ಇದು ಕಡಿಮೆ, ಜುಲೈ, ಆಗಸ್ಟ್ ತಿಂಗಳಿಗೆ ಹೋಲಿಸಿದರೆ, ಸೆಪ್ಟಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ದಿನನಿತ್ಯ ಪರೀಕ್ಷೆಗಳ ಸಂಖ್ಯೆ ಗಣ ನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. 73,401 ಪರೀಕ್ಷೆಗಳ ಪೈಕಿ 65,173 ನೆಗೆಟಿವ್ ಪ್ರಕರಣಗಳು ಪತ್ತೆಯಾಗಿರುವುದು ಜಿಲ್ಲೆಯಲ್ಲಿ ಸೋಂಕು ನಿಯಂತ್ರಣದಲ್ಲಿದೆ ಎಂದು ಅಂಕಿ ಸಂಖ್ಯೆಗಳು ಹೇಳುತ್ತಿವೆ.
ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖ, ಗುಣಮುಖರ ಪ್ರಮಾಣವನ್ನು ಜಿಲ್ಲೆಯಲ್ಲಿ ನಿರಂತರವಾಗಿ ಶೇ. 90ಕ್ಕಿಂತ ಹೆಚ್ಚು ಕಾಯ್ದುಕೊಳ್ಳುತ್ತಿರುವುದು ಕೋವಿಡ್ ವಾರಿಯರ್ನ ಕಾರ್ಯನಿಷ್ಠೆಗೆ ಸಾಕ್ಷಿ. ಜೊತೆಗೆ ಜನತೆ ಸಹ ಎಚ್ಚರದಿಂದ ಇರುವುದರ ಸಂಕೇತ. ಆದರೆ ಎಚ್ಚರಿಕೆ ಮರೆತರೆ, ಅಪಾಯ ಖಂಡಿತ ಎಂದು ಅಧಿಕಾರಿಗಳು ಮತ್ತು ವೈದ್ಯರು ಎಚ್ಚರಿಸಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್ ಅಲೆ ಕಡಿಮೆಯಾಗುತ್ತಿದೆ. ಸಾಲು ಸಾಲು ಹಬ್ಬಗಳಿವೆ, ಮೈಮರೆತರೆ ಸೋಂಕು ಹೆಚ್ಚಾಗುವ ಅಪಾಯವಿದೆ. ಜನತೆ ದೈಹಿಕ ಅಂತರ ಕಾಯ್ದುಕೊಳ್ಳಬೇಕು. ಹೆಚ್ಚಿನ ಜನಸಂದಣಿಗೆ ಅವಕಾಶವಾಗಬಾರದು. ಕಡ್ಡಾಯವಾಗಿ ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು.
–ಡಾ. ನಿರಂಜನ್, ಡಿಎಚ್‌ಒ, ರಾಮನಗರ