ಚಿಕ್ಕೋಡಿ: ಮಹಾರಾಷ್ಟ್ರ ಕೊಂಕಣ ಭಾಗದ ಅರಣ್ಯ ಪ್ರದೇಶದಲ್ಲಿ ಸುರಿಯುತ್ತಿರುವ ಅಬ್ಬರದ ಮಳೆ ಸಂಪೂರ್ಣ ತಗ್ಗಿದೆ. ಇದರಿಂದ ತಾಲೂಕಿನ ಕೃಷ್ಣಾ ನದಿ 2 ಅಡಿ ಮತ್ತು ದೂಧಗಂಗಾ ನದಿ ನೀರಿನ ಮಟ್ಟದಲ್ಲಿ ನಾಲ್ಕು ಅಡಿಯಷ್ಟು ಇಳಿಕೆ ಕಂಡಿದೆ.
ಕಳೆದ ಹದಿನೈದು ದಿನಗಳಿಂದ ಕೊಂಕಣ ಭಾಗವಾದ ಕೊಯ್ನಾ, ಮಹಾಬಳೇಶ್ವರ, ನವಜಾ, ರಾಧಾನಗರಿ, ಕಾಳಮ್ಮವಾಡಿ ಪ್ರದೇಶದಲ್ಲಿ ಸತತ ಮಳೆ ಸುರಿಯುತ್ತಿರುವ ಪರಿಣಾಮ ಚಿಕ್ಕೋಡಿ ತಾಲೂಕಿನ ಕೃಷ್ಣಾ, ದೂಧಗಂಗಾ ಮತ್ತು ವೇದಗಂಗಾ ನದಿಗಳ ನೀರಿನ ಮಟ್ಟದಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚಳಗೊಂಡು ಮೂರು ನದಿಗಳು ಅಪಾಯ ಮಟ್ಟ ಮೀರಿ ಹರಿಯತೊಡಗಿದ್ದವು. ಆದರೆ ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ ಮಳೆರಾಯನ ರೌದ್ರಾವತಾರ ಕಡಿಮೆಯಾಗಿದೆ. ಇದರಿಂದ ಕೃಷ್ಣಾ ನದಿ ನೀರಿನ ಮಟ್ಟದಲ್ಲಿ ಎರಡು ಅಡಿಯಷ್ಟು ಇಳಿಕೆಯಾದರೆ ದೂಧಗಂಗಾ ಮತ್ತು ವೇದಗಂಗಾ ನದಿ ನೀರಿನ ಮಟ್ಟದಲ್ಲಿ ನಾಲ್ಕು ಅಡಿಯಷ್ಟು ಇಳಿಕೆ ಕಂಡಿದೆ.
ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ದಿಂದ ರಾಜ್ಯಕ್ಕೆ 57911 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ದೂಧಗಂಗಾ ಮತ್ತು ವೇದಗಂಗಾ ನದಿಯಿಂದ 21,824 ಕ್ಯೂಸೆಕ್ ನೀರು ಹರಿದು ಕೃಷ್ಣಾ ನದಿಗೆ ಬರುತ್ತಿದ್ದು, ಇದರಿಂದ ಚಿಕ್ಕೋಡಿ ತಾಲೂಕಿನ ಕಲ್ಲೋಳ ಹತ್ತಿರ ಕೃಷ್ಣಾ ನದಿಗೆ ಒಟ್ಟು 79.735 ಕ್ಯೂಸೆಕ್ ನೀರು ಹರಿದು ಬರಲಾರಂಭಿಸಿದೆ.
ಜಮಖಂಡಿ ತಾಲೂಕಿನ ಹಿಪ್ಪರಗಿ ಜಲಾಶಯದಿಂದ 97 ಸಾವಿರ ಕ್ಯೂಸೆಕ್ ನೀರನ್ನು ಆಲಮಟ್ಟಿ ಜಲಾಶಯಕ್ಕೆ ಹರಿಬಿಡಲಾಗುತ್ತಿದೆ. ಮಹಾರಾಷ್ಟ್ರದಿಂದ ಬರುವ ನೀರಿನ ಪ್ರಮಾಣದಷ್ಟೇ ಹಿಪ್ಪರಗಿ ಬ್ಯಾರೇಜ್ ಮೂಲಕ ಆಲಮಟ್ಟಿ ಅಣೆಕಟ್ಟಿಗೆ ಹರಿಬಿಡುವುದರಿಂದ ಚಿಕ್ಕೋಡಿ ಉಪವಿಭಾಗದಲ್ಲಿ ಪ್ರವಾಹ ಎದುರಾಗಿಲ್ಲ. ಆಲಮಟ್ಟಿ ಅಣೆಕಟ್ಟಿನಿಂದ 28 ಸಾವಿರ ಕ್ಯೂಸೆಕ್ ನೀರನ್ನು ನಾರಾಯಣಪುರಕ್ಕೆ ಹರಿಬಿಡಲಾಗುತ್ತದೆಂದು ಕಂದಾಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಳೆ ಕ್ಷೀಣಿಸುತ್ತಾ ಬಂದರೂ ನದಿಗಳ ನೀರಿನ ಹರಿವಿನಲ್ಲಿ ಹೆಚ್ಚಳವಿದೆ. ಹೀಗಾಗಿ ಮುಳುಗಡೆಗೊಂಡಿರುವ ಚಿಕ್ಕೋಡಿ ತಾಲೂಕಿನ ಆರು ಸೇತುವೆಗಳ ಮೇಲೆ ನಾಲ್ಕೈದು ಅಡಿಯಷ್ಟು ನೀರು ಹರಿಯುತ್ತಿದೆ. ಹೀಗಾಗಿ ಕೃಷ್ಣಾ ನದಿಗೆ ಅಡ್ಡಲಾಗಿ ಕಲ್ಲೋಳ-ಯಡೂರ ಸೇತುವೆ, ದೂಧಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಮಲಿಕವಾಡ-ದತ್ತವಾಡ, ಕಾರದಗಾ-ಭೋಜ, ವೇದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬೋಜವಾಡಿ-ಕುನ್ನೂರ ಸೇತುವೆಗಳು ಮುಳುಗಡೆ ಸ್ಥಿತಿಯಲ್ಲಿವೆ. ಇದೇ ರೀತಿ ನದಿಗಳ ನೀರಿನ ಮಟ್ಟದಲ್ಲಿ ಒಳಹರಿವಿನಲ್ಲಿ ಕಡಿಮೆ ಆಗುತ್ತಾ ಹೋದರೆ ಬರುವ 24 ಗಂಟೆಯೊಳಗೆ ನದಿಗಳ ನೀರಿನ ಹರಿವು ಸಂಪೂರ್ಣ ಕಡಿಮೆಯಾಗುತ್ತದೆ.