ಒಮಿಕ್ರಾನ್ ಆತಂಕದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದಲ್ಲಿ ಡಿ. 28 ರಿಂದ ಹತ್ತು ದಿನಗಳ ವರೆಗೆ ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದೆ. ಇದರ ಪರಿಣಾಮ ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್‌ಗಳ ಮೇಲೂ ಆಗಿದ್ದು, ರಾತ್ರಿ 10 ರ ಒಳಗಾಗಿ ಬಹುತೇಕ ಎಲ್ಲ ಸಿನಿಮಾಗಳ ಪ್ರದರ್ಶನ ಮುಗಿಸಿ, ತೆರೆಗಳಿಗೆ ಪರದೆ ಎಳೆಯಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಮಂಗಳವಾರ (ಡಿ. 28) ದಿಂದಲೇ ರಾಜ್ಯಾದ್ಯಂತ ರಾತ್ರಿ 10ರ ನಂತರ ಪ್ರದರ್ಶನ ಮುಗಿಯುವ ಮತ್ತು ಆರಂಭವಾಗುವ ಎಲ್ಲ ಸಿನಿಮಾಗಳ ಪ್ರದರ್ಶನಗಳೂ ಬಹುತೇಕ ಸ್ಥಗಿತವಾಗಿವೆ.
ರಾತ್ರಿ ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ಮೈಸೂರು, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ,ಮಂಗಳೂರು, ಉಡುಪಿ, ಬೆಳಗಾವಿ ಸೇರಿದಂತೆ ರಾಜ್ಯದ ಬಹುತೇಕ ನಗರಗಳಲ್ಲಿ ರಾತ್ರಿ 7 ಗಂಟೆಯ ನಂತರದ ಬಹುತೇಕ ಶೋಗಳು ಪ್ರದರ್ಶನವಾಗಲು ಸಾಧ್ಯವಾಗಿಲ್ಲ.
ರಾಜ್ಯದ ಹಲವೆಡೆಯಲ್ಲಿ ಚಿತ್ರಮಂದಿರಗಳ ಮಾಲೀಕರೆ ಸರ್ಕಾರದ ಆದೇಶದಂತೆ, ಸ್ವಯಂ ಪ್ರೇರಿತವಾಗಿ ರಾತ್ರಿ 7 ಗಂಟೆಯ ನಂತರ ಸಿನಿಮಾಗಳ ಪ್ರದರ್ಶನವನ್ನು ಸ್ಥಗಿತಗೊಳಿಸಿದರೆ, ಇನ್ನು ಕೆಲವು ಕಡೆಗಳಲ್ಲಿ ಪೊಲೀಸರು ಎಚ್ಚರಿಕೆ ನೀಡಿದ ನಂತರ ರಾತ್ರಿ 7 ಗಂಟೆಯ ನಂತರ ಶೋಗಳು ಸ್ಥಗಿತಗೊಂಡಿರುವ ಬಗ್ಗೆಯೂ ವರದಿಯಾಗಿದೆ.
ವಾಡಿಕೆಯಂತೆ ಸಾಮಾನ್ಯವಾಗಿ, ರಾತ್ರಿ 7 ಗಂಟೆಯ ಬಳಿಕ ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳಲ್ಲಿ ಕನಿಷ್ಟ ಎರಡು ಶೋಗಳು ಪ್ರದರ್ಶನವಾದರೆ, ಮಲ್ಟಿಪ್ಲೆಕ್ಸ್‌ಗಳಲ್ಲಿ 3-4 ಶೋಗಳು ಪ್ರದರ್ಶನ ವಾಗುತ್ತಿದ್ದವು. ಇನ್ನು ರಾತ್ರಿ ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ, ಮುಂದಿನ ಹತ್ತು ದಿನಗಳವರೆಗೆ ರಾತ್ರಿ 7ರ ಬಳಿಕ ಶೋಗಳು ನಡೆಯುವುದಿಲ್ಲ. ಹೀಗಾಗಿ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳು ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ದಿನಪ್ರತಿ ಸುಮಾರು 1200ಕ್ಕೂ ಅಧಿಕ ಶೋಗಳು ಸ್ಥಗಿತವಾಗಲಿವೆ.
ಚಿತ್ರರಂಗದ ಮೂಲಗಳ ಪ್ರಕಾರ, ಸ್ಥಗಿತವಾಗಿರುವ ಈ ಶೋಗಳ ಮೂಲಕವೇ ಸಿನಿಮಾದ ಗಳಿಕೆಯ ಶೇ 30 ರಿಂದ 40ರಷ್ಟು ಪಾಲು ಬರುತ್ತದೆ. ವಾರಾಂತ್ಯದಲ್ಲಿ ಈ ಶೋಗಳಿಂದ ಶೇ 50 ರಿಂದ 70ರಷ್ಟು ಕಲೆಕ್ಷನ್ಸ್ ಬರುತ್ತಿತ್ತು ಎನ್ನಲಾಗುತ್ತಿದೆ. ಹೀಗಾಗಿ ರಾತ್ರಿ ಕರ್ಫ್ಯೂ ಜಾರಿ ಸದ್ಯ ಬಿಡುಗಡೆಯಾಗಿರುವ ಮತ್ತು ಮುಂದೆ ಬಿಡುಗಡೆಯಾಗಲಿರುವ ಸಿನಿಮಾಗಳ ಗಳಿಕೆಯ ಮೇಲೂ ಪ್ರತಿಕೂಲ ಪರಿಣಾಮ ಬೀರಬಹುದು ಎನ್ನುತ್ತಾರೆ ವಿತರಕರು ಮತ್ತು ಪ್ರದರ್ಶಕರು.
ಈಗಷ್ಟೇ ಸಿನಿಮಾದ ಶೋಗಳು ಆರಂಭವಾಗಿ ಜನ ಥಿಯೇಟರ್ ಕಡೆಗೆ ಸ್ವಲ್ಪ ಭಯದಿಂದ ಹೊರಬಂದು ಸಿನಿಮಾ ನೋಡುತ್ತಿದ್ದರು. ನಿಧಾನವಾಗಿ ಶೋಗಳು ತುಂಬುತ್ತಿದ್ದವು. ಈಗ ಮತ್ತೆ ನೈಟ್ ಕರ್ಫ್ಯೂ ಜಾರಿಯಾಗಿದ್ದರಿಂದ, ರಾತ್ರಿ ಶೋಗಳು ಕ್ಯಾನ್ಸಲ್ ಆಗಿವೆ. ವೀಕೆಂಡ್‌ನಲ್ಲಿ ಸಿನಿಮಾಗಳ ಹೆಚ್ಚು ಕಲೆಕ್ಷನ್ಸ್ ಬರುತ್ತಿದ್ದದ್ದು, ನೈಟ್ ಶೋಗಳಿಂದ. ಈಗ ನೈಟ್ ಶೋ ಇಲ್ಲದಿರುವುದು ಕಲೆಕ್ಷನ್ಸ್ ಮೇಲೂ ಪರಿಣಾಮ ಬೀರುತ್ತದೆ’.
● ಎಂ. ನರಸಿಂಹಲು, ಪ್ರದರ್ಶಕರು