Advertisement

“ಪೊಲೀಸ್‌ ಇಲಾಖೆಯಲ್ಲಿ ಕರಾವಳಿಗರ ಸಂಖ್ಯೆ ಇಳಿಮುಖ’

09:59 PM Jun 27, 2019 | sudhir |

ಮಲ್ಪೆ: ಕಳೆದ ನಾಲ್ಕೈದು ವರ್ಷಗಳಲ್ಲಿ ಕರಾವಳಿಯಲ್ಲಿ ಪೊಲೀಸ್‌ ಇಲಾಖೆಗೆ ಸೇರ ಬಯಸುವ ಜನರ ಸಂಖ್ಯೆ ತೀರಾ ಇಳಿಮುಖಗೊಂಡಿದೆ. ಕರಾವಳಿ ಮೀನುಗಾರರು ಧೈರ್ಯಶಾಲಿಗಳು, ಬುದ್ಧಿವಂತರು, ಸಾಹಸಮಯಿಗಳು.

Advertisement

ಇಂತಹ ಪ್ರದೇಶದ ಯುವಕ-ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್‌ ಇಲಾಖೆಗೆ ಸೇರ್ಪಡೆಯಾದರೆ, ಇಲಾಖೆ ಇನ್ನಷ್ಟು ಉತ್ತಮ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಕೆಎಸ್‌ಆರ್‌ಪಿ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಭಾಸ್ಕರ ರಾವ್‌ ಹೇಳಿದರು.

ಅವರು ಮಲ್ಪೆ ಏಳೂರು ಮೊಗವೀರ ಭವನದ ಮತ್ಸéನಿಧಿ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ 7ನೇ ಪಡೆ, ಕರಾವಳಿ ಕಾವಲು ಪಡೆ ಮತ್ತು ಜಿಲ್ಲಾ ಪೊಲೀಸ್‌ ಇಲಾಖೆಯ ವತಿಯಿಂದ ಆಯೋಜಿಸಿದ ಪೊಲೀಸ್‌ ನೇಮಕಾತಿಗಾಗಿ ವಿಶೇಷ ಕಾರ್ಯಾಗಾರದಲ್ಲಿ ಮಾತನಾಡಿದರು.

ಪೊಲೀಸ್‌ ನೇಮಕಾತಿಯಲ್ಲಿ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳು ನಿರಾಸಕ್ತಿ ತೋರುತ್ತಿದ್ದು, ಇದರಿಂದ ಬೇರೆ ಜಿಲ್ಲೆಯ ಅಭ್ಯರ್ಥಿಗಳು ನೇಮಕಗೊಳ್ಳುತ್ತಿದ್ದು, ಕಾನೂನು ಸುವ್ಯವಸ್ಥೆಯು ಸ್ಥಳೀಯ ವಿಷಯವಾಗಿದ್ದು ಇದನ್ನು ನಿಭಾಯಿಸಲು ಸ್ಥಳೀಯರ ಆವಶ್ಯಕತೆ ಹೆಚ್ಚಾಗಿರುತ್ತದೆ, ಬೇರೆ ಜಿಲ್ಲೆಗಳಿಂದ ನೇಮಕಗೊಂಡ ಸಿಬಂದಿ ಸ್ಥಳೀಯ ಭಾಷೆ, ಸ್ಥಳಗಳ ಪರಿಚಯ, ಸಂಸ್ಕೃತಿ, ಅರಿಯಲು ಕೆಲವು ವರ್ಷಗಳು ಬೇಕಾಗಿದ್ದು, ಅಷ್ಟರಲ್ಲಿ ತಮ್ಮ ತವರು ಜಿಲ್ಲೆಗೆ ವರ್ಗಾವಣೆಯಾಗಿ ಹೋಗುವುದರಿಂದ ಇಲ್ಲಿ ಹುದ್ದೆಗಳು ಖಾಲಿ ಉಳಿಯಲಿದ್ದು, ಕಾನೂನು ಸುವ್ಯವಸ್ಥೆಗೆ ತೊಡಕಾಗಲಿದೆ ಎಂದರು.

ದೇಶ ಸೇವೆಗೆ ಅವಕಾಶ
ಇಲಾಖೆಯಲ್ಲಿ ಈ ಹಿಂದಿನಂತೆ ಅತ್ಯಧಿಕ ಕೆಲಸದ ಒತ್ತಡ ಇಲ್ಲ, ಈಗ ವೈಟ್‌ ಕಾಲರ್‌ ಕ್ರೈಮ್‌ ಜಾಸ್ತಿಯಾಗಿದ್ದು, ಬುದ್ಧಿವಂತಿಕೆಯಿಂದ ಕೆಲಸ ಮಾಡ ಬೇಕಿದೆ, ಇಲಾಖೆಯಲ್ಲಿ ಉತ್ತಮ ವೇತನವಿದ್ದು, ಔರಾದಕರ್‌ ಸಮಿತಿಯ ಶಿಫಾರಸುಗಳು ಜಾರಿಗೆ ಬಂದ ಅನಂತರ ಇನ್ನೂ ವೇತನ ಸೌಲಭ್ಯ ಉತ್ತಮವಾಗಲಿದೆ. ಸಿಬಂದಿ ಮತ್ತು ಕುಟುಂಬ ವರ್ಗಕ್ಕೆ ಉಚಿತ ಆರೋಗ್ಯ ಯೋಜನೆ, ಕ್ಯಾಂಟೀನ್‌ ಸೌಲಭ್ಯ, ಕ್ವಾಟ್ರಸ್‌ ಸೌಲಭ್ಯ ಸಹ ದೊರೆಯಲಿದೆ. ಅಲ್ಲದೇ ಜನಸೇವೆ ಮತ್ತು ದೇಶಸೇವೆ ಮಾಡುವ ಅಮೂಲ್ಯ ಅವಕಾಶ, ನೊಂದವರಿಗೆ ನ್ಯಾಯ ಒದಗಿಸುವ ಅವಕಾಶ ಉದ್ಯೋಗ ಮಾತ್ರವಲ್ಲದೇ ಸಾಹಸ ಜೀವನ ನಡೆಸಲು ಇಲಾಖೆಯಲ್ಲಿ ಸಾಧ್ಯವಿದೆ ಎಂದು ಎಡಿಜಿಪಿ ಹೇಳಿದರು.

Advertisement

ಮಲ್ಪೆಯಲ್ಲಿ ತರಬೇತಿ ಶಿಬಿರ
ರಾಜ್ಯದಲ್ಲಿ 27,000, ಕರಾವಳಿ ಭಾಗದಲ್ಲಿ 1,624 ಪೊಲೀಸ್‌ ಕಾನ್‌ ಸ್ಟೆಬಲ್‌, 110 ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗಳು ಖಾಲಿ ಇವೆ. ಕರಾವಳಿ ಭಾಗದ ಯುವಜನತೆ ಪೊಲೀಸ್‌ ಇಲಾಖೆಗೆ ಸೇರ್ಪಡೆಯಾಗಲು ಅಗತ್ಯವಿರುವ ದೈಹಿಕ ಮತ್ತು ಲಿಖೀತ ಪರೀಕ್ಷೆಗೆ ಅಗತ್ಯವಿರುವ ತರಬೇತಿ ನೀಡುವ ಕುರಿತಂತೆ, ಉಡುಪಿ ಜಿಲ್ಲಾ ಪೊಲೀಸ್‌ ಇಲಾಖೆ, ಕರಾವಳಿ ಪೊಲೀಸ್‌ ಪಡೆ, ಕೆ.ಎಸ್‌.ಆರ್‌.ಪಿ ವತಿಯಿಂದ 5-6 ದಿನಗಳ ಉಚಿತ ತರಬೇತಿ ಶಿಬಿರವನ್ನು ಮಲ್ಪೆಯಲ್ಲಿಯೇ ಆಯೋಜಿಸಲಾಗುವುದು ಎಂದು ಭಾಸ್ಕರ ರಾವ್‌ ತಿಳಿಸಿದರು.

ಶಾಲಾ ಕಾಲೇಜಿನಲ್ಲಿ ಮಾಹಿತಿ
ಕರ್ನಾಟಕ ಪೊಲೀಸ್‌ ನೇಮ ಕಾತಿ ಪ್ರಕ್ರಿಯೆ ಇಡೀ ದೇಶಕ್ಕೆ ಮಾದರಿ ಯಾಗಿದ್ದು, ಈ ಆಯ್ಕೆ ಪಟ್ಟಿಯ ಕುರಿತು ನ್ಯಾಯಾಲಯದಲ್ಲಿ ಸಹ ಯಾವುದೇ ತಡೆ ಇದುವರೆಗೆ ಬಂದಿಲ್ಲ, ನೇಮಕಾತಿ ಕುರಿತಂತೆ ಗ್ರಾಮ ಮಟ್ಟದಲ್ಲಿ ಮತ್ತು ಕಾಲೇಜುಗಳಲ್ಲಿ ಸಹ ಮಾಹಿತಿ ನೀಡುವ ಕಾರ್ಯಕ್ರಮ ಏರ್ಪಡಿಸುವುದಾಗಿ ಹೇಳಿದರು.

ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಶಾ ಜೇಮ್ಸ್‌ ಅÊರು ಕಳೆದ ತಿಂಗಳು ಉಡುಪಿಯಲ್ಲಿ ಪೊಲೀಸ್‌ ನೇಮಕಾತಿ ಪ್ರಕ್ರಿಯೆ ನಡೆದಿದ್ದು ಅದರಲ್ಲಿ ಸಹ ಸ್ಥಳೀಯ ಅಭ್ಯರ್ಥಿಗಳು ಬೆರಳಣಿಕೆಯಷ್ಟಿದ್ದು, ಜಿಲ್ಲೆಯಲ್ಲಿ ಈ ಕುರಿತಂತೆ ಹೆಚ್ಚಿನ ಮಾಹಿತಿ ನೀಡುವ ವಿಶೇಷ ಕಾರ್ಯಕ್ರಮ ಮತ್ತು ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಕಾರ್ಯಾಗಾರವನ್ನು ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷ ಸತೀಶ್‌ ಕುಂದರ್‌ ಉದ್ಘಾಟಿಸಿದರು. ಮೀನು ಮಾರಾಟ ಫೆಡರೇಶನ್‌ನ ಅಧ್ಯಕ್ಷ ಯಶ್‌ಪಾಲ್‌ಸುವರ್ಣ,ಹಾಸನ ಕೆಎಸ್‌ಆರ್‌ಪಿ ಕಮಾಂಡೆಂಟ್‌ ಕೃಷ್ಣಪ್ಪ, ಉಡುಪಿ ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಕುಮಾರಚಂದ್ರ, ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಪಾರ್ಶ್ವನಾಥ್‌ ಉಪಸ್ಥಿತರಿದ್ದರು. ಮಂಗಳೂರು ಕೆಎಸ್‌ಆರ್‌ಪಿ ಕಮಾಂಡೆಂಟ್‌ ಜನಾರ್ದನ್‌ ಪ್ರಸ್ತಾವನೆಗೈದರು. ಇಂಟೆಲಿಜೆಂಟ್‌ ವಿಭಾಗದ ಪೊಲೀಸ್‌ ನಿರೀಕ್ಷಕ ಪ್ರಮೋದ್‌ ಕುಮಾರ್‌ ಸ್ವಾಗತಿಸಿದರು. ಉಡುಪಿ ಡಿವೈಎಸ್ಪಿ ಜೈ ಶಂಕರ್‌ ವಂದಿಸಿದರು. ಕರಾವಳಿ ಕಾವಲು ಪಡೆಯ ಎಎಸೆ„ ಮನಮೋಹನ್‌ ನಿರೂಪಿಸಿದರು.

ದುಡ್ಡು ಕೊಟ್ಟರೆ ಮಾತ್ರ ಕೆಲಸವಾ ?
ನೇಮಕಾತಿ ಮಾಡುವಾಗ ಲಂಚ ಕೊಟ್ಟವರಿಗೆ ಕೆಲಸ ಸಿಗುತ್ತದಂತೆ, ಲಿಖೀತ ಪರೀಕ್ಷೆಯಲ್ಲಿ ಪಾಸಾಗಲು ಅಧಿಕಾರಿಗಳ ಕಿಸೆಗೆ ದುಡ್ಡು ಹಾಕಬೇಕಂತೆ ಇದು ಹೌದೆ ?. ನಾನು ಈ ಹಿಂದೆ ಎರಡು ಮೂರು ಸಲ ದೈಹಿಕ ಮತ್ತು ಲಿಖೀತ ಪರೀಕ್ಷೆ ಬರೆದಿದ್ದೆ, ನನ್ನಲ್ಲಿ ದೈಹಿಕ ಅರ್ಹತೆ ಇತ್ತು. ಉತ್ತಮವಾಗಿ ಪರೀಕ್ಷೆಯನ್ನು ಬರೆದಿದ್ದೆ. ಆದರೂ ನೇಮಕಾತಿ ಮಾಡಲಿಲ್ಲ ಯಾಕೆ ? ಹೀಗೆಂದು ಕಾರ್ಯಾಗಾರದಲ್ಲಿ ಭಾಗವಹಿಸಿದ ಕಟಪಾಡಿಯ ಯುವತಿ ಚೈತ್ರಾ ಅವರು ಪ್ರಶ್ನಿಸಿದರು.

ಅದರಂತೆ ಉದಯ್‌ ತೆಕ್ಕಟ್ಟೆ, ಗೋಪಾಲ ಖಾರ್ವಿ, ಜಯರಾಜ್‌ ಬೈಂದೂರು ಅವರುಗಳು ನೇಮಕಾತಿ ಕುರಿತ ಇರುವ ಗೊಂದಲಗಳ ಬಗ್ಗೆ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಡಿಜಿಪಿ ಭಾಸ್ಕರ ರಾವ್‌ ಪೊಲೀಸ್‌ ನೇಮಕಾತಿ ಸಂಪೂರ್ಣ ಪಾರದರ್ಶಕವಾಗಿ ನಡೆಯುತ್ತದೆ. ಪ್ರತಿಯೊಂದು ಆಯ್ಕೆ ಪ್ರಕ್ರಿಯೆಯನ್ನೂ ವೀಡಿಯೋ ದಾಖಲೀಕರಣ ಮಾಡಲಾಗುತ್ತದೆ, ಅಭ್ಯರ್ಥಿಗಳ ಎತ್ತರ, ತೂಕವನ್ನು ಎಲೆಕ್ಟ್ರಾನಿಕ್‌ ಯಂತ್ರದ ಮೂಲಕ ಮಾಡಲಾಗುತ್ತಿದ್ದು, ಲಿಖೀತ ಪರೀಕ್ಷೆಯ ಫಲಿತಾಂಶವನ್ನೂ ಕಂಪ್ಯೂಟರೀಕರಣಗೊಳಿಸಲಾಗಿದೆ. ಸಿಸಿ ಕೆಮರಾ, ಧ್ವನಿ ಮುದ್ರಿಕೆಯನ್ನು ಅಳವಡಿಸಲಾಗುತ್ತದೆ. ರಾಜಕೀಯ ಒತ್ತಡ, ಶಿಫಾರಾಸು, ಲಂಚ, ಮಧ್ಯವರ್ತಿಗಳಿಗೆ ಅವಕಾಶ ಇಲ್ಲ.

ಮಧ್ಯವರ್ತಿಗಳು, ಲಂಚದ ಆಮಿಷ ಕಂಡು ಬಂದಲ್ಲಿ ಜಿಲ್ಲಾ ಎಸ್ಪಿ ಅಥವಾ ಸಮೀಪದ ಪೊಲೀಸ್‌ ಠಾಣೆಗೂ ದೂರು ನೀಡಬಹುದಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next