ಮಂಡ್ಯ: ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಾವು ಬೆಳೆ ನಿರೀಕ್ಷಿಸಲಾಗಿತ್ತು. ಗಾಳಿ-ಮಳೆ ಇಲ್ಲದ ಕಾರಣ ನಿರೀಕ್ಷೆಯಂತೆ ಫಸಲು ಕೈ ಸೇರಬಹುದೆಂಬ ಆಶಾಭಾವನೆಯಲ್ಲಿ ಬೆಳೆಗಾರರಿದ್ದರು. ಆದರೆ, ರಣಬಿಸಿಲಿನ ಹೊಡೆತಕ್ಕೆ ಹೂವು, ಕಾಯಿ ಉದುರಿದ ಪರಿಣಾಮ ಜಿಲ್ಲೆಯ ಮಾವಿನ ಇಳುವರಿಯಲ್ಲಿ ಶೇ.40ರಷ್ಟು ಫಸಲು ಕುಸಿತ ಕಂಡಿದೆ.
40 ಡಿಗ್ರಿ ಉಷ್ಣಾಂಶ: ಬೇಸಿಗೆಯಲ್ಲಿ ಫೆಬ್ರವರಿ ಅಂತ್ಯದಿಂದ ಮಾರ್ಚ್‌ವರೆಗೆ ಮಾವಿನ ಮರಗಳು ಹೂಗಳಿಂದ ತುಂಬಿಹೋಗಿದ್ದವು. ಗಾಳಿ-ಮಳೆ ಇಲ್ಲದಿದ್ದ ಕಾರಣ ಒಳ್ಳೆಯ ಫಸಲು ಸಿಗುವ ನಿರೀಕ್ಷೆಯೂ ಬೆಳೆಗಾರರಲ್ಲಿತ್ತು. ಈ ಬಾರಿ ಗಾಳಿ-ಮಳೆಗಿಂತಲೂ ಬಿಸಿಲಿನ ತಾಪ ಅಧಿಕವಾಗಿತ್ತು. ಕಳೆದ 23 ದಿನಗಳಿಂದ 40 ಡಿಗ್ರಿ ಉಷ್ಣಾಂಶ ದಾಖಲಾಗಿತ್ತು. ಇದು ಪ್ರಮುಖವಾಗಿ ಮಾವು ಬೆಳೆಗೆ ಹೊಡೆತ ಬೀಳಲು ಕಾರಣವಾಯಿತು.
ಕಳೆದ ವರ್ಷ ಚಳಿಗಾಲದಲ್ಲಿ ಇಬ್ಬನಿಯ ಪ್ರಮಾಣವೂ ಹೆಚ್ಚಿರಲಿಲ್ಲ. ಇದರಿಂದ ತಾಪಮಾನ ಅಧಿಕಗೊಳ್ಳಲು ಮುಖ್ಯ ಕಾರಣವಾಗಿದ್ದು, ಭೂಮಿಯೊಳಗೆ ತೇವಾಂಶದ ಕೊರತೆಯಿಂದ ಬಿಸಿಲಿನ ತಾಪ ಹೆಚ್ಚಿತ್ತು. ಇದರಿಂದ ಹೂವುಗಳು ಒಣಗಿಹೋದವು, ಕಾಯಿಗಳು ತಾಪಮಾನಕ್ಕೆ ಉದುರಿದವು. ಇದು ಬೆಳೆಗಾರರು ನಿರೀಕ್ಷಿತ ಇಳುವರಿಯನ್ನು ಕಾಣದಂತಾದರು.
ಹಲವರಿಂದ ಮುಂಜಾಗ್ರತೆ: ಮಾವು ಬೆಳೆಗಾರರಲ್ಲಿ ಕೆಲವರು ನೀರು ನಿರ್ವಹಣೆ ಮಾಡಿಕೊಂಡು ಫಸಲು ನಷ್ಟವಾಗದಂತೆ ಕಾಯ್ದುಕೊಂಡಿದ್ದಾರೆ. ಮತ್ತೆ ಕೆಲವರು ಮೋಹಕ ಬಲೆಗಳನ್ನು ಬಳಸುವ ಮೂಲಕ ಹಣ್ಣುಗಳಿಗೆ ಹರಡುವ ನೊಣಗಳ ಹಾವಳಿಯನ್ನು ತಡೆಯುವುದಕ್ಕೆ ಮುಂದಾಗಿದ್ದರು. ಇನ್ನೂ ಕೆಲವರು ಮ್ಯಾಂಗೋ ಸ್ಪೆಷಲ್ ಸ್ಪ್ರೇ ಬಳಸುವುದರೊಂದಿಗೆ ಹಣ್ಣನ್ನು ಸಂರಕ್ಷಣೆ ಮಾಡಿಕೊಂಡಿದ್ದಾರೆ. ಈ ರೀತಿಯಲ್ಲಿ ಮುಂಜಾಗ್ರತೆ ವಹಿಸಿದ ಬೆಳೆಗಾರರ ತೋಟಗಳಲ್ಲಿ ಮಾವಿನ ಫಸಲು ನಿರೀಕ್ಷೆಯಂತೆ ಬಂದಿದೆ.
Advertisement
ಜಿಲ್ಲೆಯ 2320 ಹೆಕ್ಟೇರ್ ಪ್ರದೇಶದಲ್ಲಿ ಮಾವನ್ನು ಬೆಳೆಯಲಾಗುತ್ತದೆ. ಈ ಪೈಕಿ ಮಳವಳ್ಳಿ ತಾಲೂಕು ಜಿಲ್ಲೆಯಲ್ಲೇ ಅತಿ ಹೆಚ್ಚು ಮಾವು ಬೆಳೆಯುವ ಪ್ರದೇಶವಾಗಿದೆ. ಮಂಡ್ಯ ತಾಲೂಕು ಮಾವು ಬೆಳೆಯುವ ಪ್ರದೇಶದಲ್ಲಿ ಕೊನೆಯ ಸ್ಥಾನದಲ್ಲಿದೆ. ಪ್ರಮುಖವಾಗಿ ಜಿಲ್ಲೆಯೊಳಗೆ ರಸಪೂರಿ, ಅಲ್ಫಾನ್ಸೋ, ತೋತಾಪುರಿ, ಬೇನಿಸಾನ್ ಹಾಗೂ ನೀಲಂ ತಳಿಯ ಮಾವು ಬೆಳೆಯನ್ನು ಬೆಳೆಯಲಾಗುತ್ತಿದೆ.
Related Articles
Advertisement
ಇಳುವರಿ ಕುಸಿತದಿಂದಾಗಿ ಮಾರುಕಟ್ಟೆಗೆ ಉತ್ಕೃಷ್ಟ ದರ್ಜೆಯ ಮಾವು ಬಂದಿಲ್ಲ. ಹಣ್ಣುಗಳ ರಾಜನಂತಿರುವ ಮಾವನ್ನು ತಿನ್ನಲು ಜನರು ನಿರೀಕ್ಷೆಯಿಂದ ಎದುರು ನೋಡುತ್ತಿದ್ದಾರೆ. ಆದರೆ, ಮರದಲ್ಲೇ ಮಾಗಿರುವ ಮಾವು ಸಿಗದಂತಾಗಿದೆ. ಬಿಸಿಲ ಝಳಕ್ಕೆ ಸಿಲುಕಿ ಹಣ್ಣುಗಳು ರಸತುಂಬಿಕೊಂಡಿಲ್ಲ. ಇದರಿಂದ ಮಾವು ಖರೀದಿಸುವವರೂ ಹಿಂದೇಟು ಹಾಕುತ್ತಿದ್ದಾರೆ.
ಬೆಲೆಯೂ ದುಬಾರಿ: ಹಾಲಿ ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಮಾವಿನ ಹಣ್ಣುಗಳು ಬಂದಿವೆ. ರಸಪೂರಿ, ಬಾದಾಮಿ ಹಣ್ಣುಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ಬೆಲೆ ದುಬಾರಿಯಾಗಿದೆ. ಪ್ರತಿ ಕೆಜಿ ಮಾವಿನ ಹಣ್ಣಿನ ಬೆಲೆ 100 ರೂ. ಆಗಿದೆ. ಹಣ್ಣುಗಳು ಸರಿಯಾಗಿ ಮಾಗದಿರುವುದರಿಂದ ಪರಿಮಳ ಸೂಸುತ್ತಿಲ್ಲ. ಮಾರುಕಟ್ಟೆಯಲ್ಲಿ ಮಾವಿನ ಘಮಲಿಲ್ಲದೆ ಜನರೂ ಹೆಚ್ಚಿನ ಪ್ರಮಾಣದಲ್ಲಿ ಕೊಳ್ಳಲು ಮುಂದಾಗುತ್ತಿಲ್ಲ.
ರಾಸಾಯನಿಕ ಮುಕ್ತ ಹಣ್ಣಿಗೆ ಪ್ರಾಮುಖ್ಯತೆ: ಮಾವಿನ ಹಣ್ಣುಗಳು ರಾಸಾಯನಿಕ ಮುಕ್ತವಾಗಿರಬೇಕು. ತಾಜಾ ಹಣ್ಣುಗಳು ಗ್ರಾಹಕರ ಸೇವನೆಗೆ ದೊರಕುವಂತಾಗಬೇಕು. ಮಾವನ್ನು ಹಣ್ಣು ಮಾಡುÊುದಕ್ಕೆ ರಾಸಾಯನಿಕವನ್ನು ಬಳಸದೆ ಮರದಲ್ಲಿ ಚೆನ್ನಾಗಿ ಬಲಿತ ಹಣ್ಣುಗಳನ್ನು ತಂದು ನ್ಯೂಸ್ ಪೇಪರ್‌ನಲ್ಲಿ ಸುತ್ತಿಡುವುದರಿಂದ ಹಾಗೂ ಎಥಿಲಿನ್ ಗ್ಯಾಸ್ ಉಪಯೋಗಿಸುವುದರಿಂದಲೂ ಹಣ್ಣು ಮಾಡಲು ಸಾಧ್ಯವಿದೆ ಎನ್ನುವುದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಾಜು ಅವರು ಹೇಳುವ ಮಾತು.
ರಾಸಾಯನಿಕ ಬಳಸುವುದರಿಂದ ಹಣ್ಣುಗಳ ತಾಜಾತನ ಹಾಳಾಗುತ್ತದೆ. ಅದರಿಂದ ಹಣ್ಣನ್ನು ಸೇವಿಸುವವರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಹಣ್ಣುಗಳಿಗೆ ರಾಸಾಯನಿಕ ಬೆರೆಸಿ ಮಾರಾಟ ಮಾಡುವುದು ಕಂಡುಬಂದಲ್ಲಿ ಅಂತಹವರಿಗೆ 5 ವರ್ಷ ಜೈಲು ಶಿಕ್ಷೆ, 2 ಲಕ್ಷ ರೂ.ವರೆಗೆ ದಂಡ ವಿಧಿಸುವ ಎಚ್ಚರಿಕೆ ನೀಡಿದೆ.
ಹಣ್ಣುಗಳನ್ನು ಸಮರ್ಪಕವಾಗಿ ಸಾಗಿಸಲು ಅನುಕೂಲವಾಗುವಂತೆ ಬೆಳೆಗಾರರಿಗೆ ಕಾರ್ಡ್‌ಬೋರ್ಡ್ ಬಾಕ್ಸ್‌ಗಳು, ಕ್ರೇಟ್‌ಗಳು, ನೊಣಗಳಿಂದ ಹಣ್ಣುಗಳನ್ನು ಕಾಪಾಡಲು ಮೋಹಕ ಬಲೆಗಳನ್ನು ಇಲಾಖೆ ವತಿಯಿಂದ ವಿತರಿಸಲಾಗುತ್ತಿದೆ. ಮಾವು ಬೆಳೆಗಾರರಿಗೆ ನೆರವಾಗುವಂತೆ ಕಾರ್ಡ್‌ಬೋರ್ಡ್ ಬಾಕ್ಸ್ ಬೆಳೆ 20 ರೂ. ಇದ್ದು 10 ರೂ. ರಿಯಾಯಿತಿ, 300 ರೂ.ನ ಕ್ರೇಟ್‌ಗೆ 150 ರೂ. ರಿಯಾಯಿತಿ, 40 ರೂ. ಬೆಲೆಯ ಮೋಹಕ ಬಲೆಗೆ 20 ರೂ. ರಿಯಾಯಿತಿ ನೀಡಲಾಗುತ್ತಿದೆ.
ಜಿಲ್ಲೆಯಲ್ಲಿ ಮಾವು ಬೆಳೆಯ ವಿವರ
ಕೆ.ಆರ್.ಪೇಟೆಯಲ್ಲಿ ಭರ್ಜರಿ ಮಾವು ಫಸಲು
ಕೆ.ಆರ್.ಪೇಟೆ: ತಾಲೂಕಿನಲ್ಲಿ ಈ ಹಂಗಾಮಿನಲ್ಲಿ ಮಾವಿನ ಹಣ್ಣಿನ ಫಸಲು ಭರ್ಜರಿಯಾಗಿ ಬಂದಿದ್ದು, ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬಾದಾಮಿ, ರಸಪುರಿ, ಮಲ್ಲಿಕಾ, ಕಸಿ ಮಾವು ಸೇರಿದಂತೆ ವಿವಿಧ ಬಗೆಯ ಮಾವಿನ ಹಣ್ಣಿಗೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಹಣ್ಣುಗಳ ರಾಜನೆಂಬ ಹಿರಿಮೆಗೆ ಭಾಜನವಾಗಿರುವ ಮಾವಿನ ಹಣ್ಣಿಗೆ ಈ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಮೈಸೂರು ಹಾಗೂ ಬೆಂಗಳೂರು ಮಾರುಕಟ್ಟೆಯಲ್ಲಿ ಬಾದಾಮಿ, ಮಲ್ಲಿಕ ಮತ್ತು ಕಸಿ ಮಾವಿನ ಹಣ್ಣುಗಳಿಗೆ ಭಾರೀ ಬೇಡಿಕೆಯಿದೆ. ತೋಟಗಾರಿಕಾ ಇಲಾಖೆಯು ರೈತನು ಮಾರುಕಟ್ಟೆಗೆ ಕೊಂಡೊಯ್ಯುವ ಮಾವಿನ ಹಣ್ಣಿಗೆ ಸೂಕ್ತ ಹಾಗೂ ವೈಜ್ಞಾನಿಕ ಬೆಲೆ ದೊರಕಿಸುವ ಮೂಲಕ ಆರ್ಥಿಕ ಸಂಕಷ್ಠದಲ್ಲಿರುವ ರೈತನು ಹಣಕಾಸಿನಲ್ಲಿ ಶಕ್ತಿವಂತನಾಗಿ ನೆಮ ್ಮದಿಯ ಜೀವನ ನಡೆಸಲು ಅನುವುಮಾಡಿಕೊಡಬೇಕು ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಮರುವನಹಳ್ಳಿ ಶಂಕರ್ ಒತ್ತಾಯಿಸಿದ್ದಾರೆ. ತಾಲೂಕಿನ ಶೀಳನೆರೆ, ಸಂತೇಬಾಚಹಳ್ಳಿ, ಅಕ್ಕಿಹೆಬ್ಟಾಳು, ಬೂಕನಕೆರೆ ಮತ್ತು ಕಿಕ್ಕೇರಿ ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ಮಾವಿನ ಫಸಲಿನ ಬಂಪರ್ ಇಳುವರಿ ಬಂದಿರುವುದರಿಂದ ರೈತನ ಮೊಗದಲ್ಲಿ ಹರ್ಷಮೂಡಿದೆ. ಕಬ್ಬು, ಭತ್ತ, ಅಡಕೆ ಸೇರಿದಂತೆ ಮಾರುಕಟ್ಟೆಯಲ್ಲಿ ಬೇಡಿಕೆಯಿರುವ ವಾಣಿಜ್ಯ ಬೆಳೆಗಳನ್ನು ಬೆಳೆದಿದ್ದರೂ ಕೂಡ ರೈತರಿಗೆ ವೈಜ್ಞಾನಿಕ ಬೆಲೆಯು ತಮ್ಮ ಬೆಳೆಗಳಿಗೆ ಸಿಕ್ಕಿಲ್ಲ, ತಮ್ಮ ದುಡಿಮೆಗೆ ತಕ್ಕ ಪ್ರತಿಫಲವೂ ದೊರೆತಿಲ್ಲ ಎಂಬ ಅಸಮಾಧಾನವಿತ್ತು. ಆದರೆ, ಮಾವಿನ ಫಸಲು ಕೂಡ ಚೆನ್ನಾಗಿ ಬಂದಿದ್ದು ರೈತನು ಆರ್ಥಿಕವಾಗಿ ಚೇತರಿಕೆ ಕಂಡುಕೊಂಡು ಸ್ವಾವಲಂಭಿ ಜೀವನ ನಡೆಸಲು ವರದಾನ ವಾಗಿದೆ ಎಂಬುದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾದ ಪ್ರಗತಿಪರ ರೈತ ಅಘಲಯ ಜಾನಕೀರಾಂ ಅವರ ಆಶಯವಾಗಿದೆ.
ಮಂಡ್ಯ ಮಂಜುನಾಥ್