ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಈಗಾಗಲೇ ಸರ್ಕಾರಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳು ಖಾಸಗಿ ಶಾಲೆಗಳ ಅರ್ಭಟದಿಂದ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಕುಸಿತದು ಮುಚ್ಚುವ ಸ್ಥಿತಿಗೆ ಬಂದಿದ್ದು, ಹಲವು ಶಾಲೆಗಳಲ್ಲಿ ಅಂತೂ ಮಕ್ಕಳ ಸಂಖ್ಯೆ ಈಗಲೂ ಎರಂಡಕಿ ದಾಟಿಲ್ಲ. ಈಗ ಅತಂಹದೇ ಸ್ಥಿತಿ ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ನಿರ್ಮಾಣವಾಗಿದೆ.
ಜಿಲ್ಲೆಯಲ್ಲಿ 2018-19 ಸಾಲಿಗೆ ಹೋಲಿಸಿದರೆ 2019-20ನೇ ಸಾಲಿನಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕಲೆ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ಪ್ರಥಮ ವರ್ಷದ ಪಿಯುಸಿಗೆ ದಾಖಲಾಗಿರುವ ವಿದ್ಯಾರ್ಥಿಗಳ ಸಂಖ್ಯೆ ಬರೋಬ್ಬರಿ 3,300ಕ್ಕೂ ಅಧಿಕ ವಿದ್ಯಾರ್ಥಿಗಳು ನೋಂದಣಿ ಕುಸಿತವಾಗಿರುವುದು ಕಂಡು ಬಂದಿದೆ. ಈ ಬೆಳವಣಿಗೆ ಭವಿಷ್ಯದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಅಸ್ತಿತ್ವವನ್ನು ಪ್ರಶ್ನಿಸುವಂತಿದೆ.
ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಕುಸಿತ: ಜಿಲ್ಲೆಯಲ್ಲಿ ಮೊದಲೇ ಸರ್ಕಾರಿ ಹಿರಿಯ, ಕಿರಿಯ ಪ್ರಾಥಮಿಕ ಶಾಲೆಗಳು ಮಕ್ಕಳ ದಾಖಲಾತಿ ಕುಸಿತದಿಂದ ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿವೆ. ಕಳೆದ 10 ವರ್ಷದಲ್ಲಿ ನೂರಕ್ಕು ಹೆಚ್ಚು ಸರ್ಕಾರಿ ಕನ್ನಡ ಶಾಲೆಗಳನ್ನು ಬಂದ್ ಮಾಡಿ, ಬೇರೆ ಬೇರೆ ಶಾಲೆಗಳಲ್ಲಿ ಮಕ್ಕಳನ್ನು ವಿಲೀನಗೊಳಿಸುವ ಕಾರ್ಯ ಶಿಕ್ಷಣ ಇಲಾಖೆಯಿಂದ ನಡೆದಿದೆ. ಆದರೆ ಇದೀಗ ಜಿಲ್ಲೆಯಲ್ಲಿ ನಾಯಿ ಕೊಡೆಗಳಂತೆ ತಲೆ ಎತ್ತುತ್ತಿರುವ ಖಾಸಗಿ ಪದವಿ ಪೂರ್ವ ಕಾಲೇಜುಗಳ ಅರ್ಭಟ ದಿಂದ ಈ ವರ್ಷ ಜಿಲ್ಲೆಯಲ್ಲಿ ದಾಖಲೆ ಪ್ರಮಾಣದಲ್ಲಿ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ ಕುಸಿದಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
2018-19ನೇ ಸಾಲಿನಲ್ಲಿ ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಬರೋಬ್ಬರಿ 9,200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ಆದರೆ ಒಂದೇ ವರ್ಷದಲ್ಲಿ ಜಿಲ್ಲೆಯಲ್ಲಿ ಪ್ರಥಮ ಪಿಯಸಿ ದಾಖಲಾತಿಯಲ್ಲಿ 3000 ಕ್ಕೂ ಹೆಚ್ಚುವಿದ್ಯಾರ್ಥಿಗಳ ಪ್ರವೇಶ ಕುಸಿದಿರುವುದು ಜಿಲ್ಲೆಯಸಾರ್ವಜನಿಕ ವಲಯದಲ್ಲಿ ಅದರಲ್ಲೂ ಶಿಕ್ಷಣ ಪ್ರೇಮಿಗಳಲ್ಲಿ ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ.
ಖಾಸಗಿ ಕಾಲೇಜುಗಳ ಹಾವಳಿ: ಜಿಲ್ಲೆಯಲ್ಲಿ ಇತ್ತೀಚೆಗೆಖಾಸಗಿ ಕಾಲೇಜುಗಳ ಹಾವಳಿ ಅಧಿಕವಾಗಿದ್ದು, ಸಿಇಟಿ ಕೋಚಿಂಗ್ ಹೆಸರಿನಲ್ಲಿ ಹಲವು ಅಕಾಡೆಮಿಗಳು ಖಾಸಗಿ ಕಾಲೇಜುಗಳನ್ನು ನಡೆಸುತ್ತಿರುವುದು ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಅಸ್ವಿತ್ವಕ್ಕೆ ದಕ್ಕೆ ಉಂಟು ಮಾಡುತ್ತಿವೆ. ಜೊತೆಗೆ ಖಾಸಗಿ ಕಾಲೇಜುಗಳನ್ನು ಸ್ಥಾಪಿಸಲು ಇಲಾಖೆ ಮುಕ್ತ ಅವಕಾಶ ಕಲ್ಪಿಸಿರುವುದ ರಿಂದ ಜಿಲ್ಲೆಯಲ್ಲಿ ಯಾವುದೇ ಮೂಲ ಸೌಕರ್ಯಗಳು ಇಲ್ಲದಿದ್ದರೂ ಸಣ್ಣಪುಟ್ಟ ಕೊಠಡಿಗಳಲ್ಲಿ ಖಾಸಗಿ ಕಾಲೇಜು ಗಳನ್ನು ತೆರೆದು ಸರ್ಕಾರಿ ಕಾಲೇಜುಗಳಿಗೆ ತೆರಳುವ ಮಕ್ಕಳನ್ನು ತಮ್ಮತ್ತ ಸೆಳೆಯುತ್ತಿರುವುದರಿಂದ ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರಥಮ ವರ್ಷದ ದಾಖಲಾತಿ ಕುಸಿಯಲು ಕಾರಣವಾಗಿದೆ.
ಅಧಿಕಾರಿಗಳು ಮೌನ: ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ದಾಖಲೆ ಪ್ರಮಾಣದಲ್ಲಿ ಪ್ರವೇಶ ಕುಸಿದರೂ ಇಲಾಖೆ ಅಧಿಕಾರಿಗಳು ಮೌನ ವಹಿಸಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಜಿಲ್ಲೆಯಲ್ಲಿ ಖಾಸಗಿ ಕಾಲೇಜುಗಳಲ್ಲಿ ಯಾವುದೇ ಮೂಲ ಸೌಕರ್ಯಗಳು ಇಲ್ಲದೇ ತರಗತಿಗಳನ್ನು ನಡೆಸುತ್ತಿದ್ದರೂ ಪದವಿ ಪೂರ್ವ ಇಲಾಖೆ ಅಧಿಕಾರಿಗಳು ಯಾವುದೇ ಕಾಲೇಜಿಗೆ ಬೇಟಿ ಕೊಟ್ಟು ಪರಿಶೀಲನೆ ಮಾಡುತ್ತಿಲ್ಲ. ಇಲಾಖೆ ವರ್ತನೆ ಇದೇ ರೀತಿ ಮುಂದುವರೆದರೆ ಭವಿಷ್ಯದ ದಿನಗಳಲ್ಲಿ ಜಿಲ್ಲೆಯ ಸರ್ಕಾರಿ ಕನ್ನಡ ಹಿರಿಯ ಹಾಗೂ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಬಂದಿರುವ ಗತಿ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗ ಬರಲಿದೆ ಎಂದು ಜಿಲ್ಲೆಯ ಶಿಕ್ಷಣ ಪ್ರೇಮಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
-ಕಾಗತಿ ನಾಗರಾಜಪ್ಪ