Advertisement

ಅಂತರ್ಜಲ ಕುಸಿತ; ನಾವು ಎಡವಿದ್ದೆಲ್ಲಿ… 

07:07 AM Mar 22, 2019 | |

ಮಳೆಗಾಲದಲ್ಲಿ ಓಡುವ ನೀರನ್ನು ತಡೆ ಹಿಡಿಯದೆ  ಹಾರೆ ಹಿಡಿದುಕೊಂಡು ನೀರಿನ ಓಡುವಿಕೆಗೆ ಮಾರ್ಗ ಮಾಡಿಕೊಟ್ಟಿರುವುದು ಇಂದಿನ ನೀರಿನ ಅಭಾವಕ್ಕೆ ಒಂದು ಕಾರಣ. ಇಂದು ಹನಿ ನೀರು ಸಂಗ್ರಹಿಸಲೂ ನಾವು ಮನಸ್ಸು ಮಾಡುತ್ತಿಲ್ಲ. ಸರಕಾದಿಂದ ಡ್ಯಾಂಗಳು ಮಂಜೂರಾದರೂ ಅಧಿಕಾರಿಗಳಿಗಿಂತ ಹೆಚ್ಚಿನ ನಿರಾಸಕ್ತಿ ಆಸುಪಾಸಿನ ಜನರಿಗಿರುವ ಕಾರಣಕ್ಕೆ ಇಂದು ಸರಕಾರ ಮಟ್ಟದ ಜಲ ಸಂಗ್ರಹ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ. ನೀರಿನ ಸದ್ಬಳಕೆ ಮತ್ತು ಸಂಗ್ರಹಕ್ಕೆ ಸರಕಾರಗಳಿಗಿಂತ ಒಂದು ಹೆಜ್ಜೆ ಮುಂದೆ ನಿಂತು ಯೋಚಿಸಬೇಕಾದ ಅನಿವಾರ್ಯ ಬಂದೊದಗಿದೆ.

Advertisement

ನಮ್ಮ ಪುರಾತನ ಕೃಷಿ ಪದ್ಧತಿಗಳು ನೀರಿನ ಸಮೃದ್ಧಿಯ ಉಳಿವಿಗೆ ಕಾರಣವಾಗಿತ್ತು. ಅಂದರೆ ಇಂದಿನ ನೀರಿನ ಕೊರತೆಗೆ ನಾವಿಂದು ಆಚರಿಸಿಕೊಂಡು ಬರುತ್ತಿರುವ ಕೃಷಿ ಪದ್ಧತಿಯೂ ಒಂದು ಕಾರಣ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಜನರಿಗೆ ನೀರಿನ ಅಭಾವ ಎದುರಾಗುವ ಸೂಚನೆ ದೊರೆತ ಬಳಿಕ ಹನಿ ನೀರಾವರಿ ಪದ್ಧತಿಯ ಮೊರೆಹೋಗಲು ಆರಂಭಿಸಿದರು. ಆದರೆ ಬತ್ತಿ ಹೋದ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಕಾರ್ಯೋನ್ಮುಖವಾಗಲಿಲ್ಲ.

ದೂರವಾದ ಬತ್ತದ ಕೃಷಿ
ಇಂದು ಬತ್ತದ ಕೃಷಿ ಅಪರೂಪವಾಗಿದೆ. ವರ್ಷದಲ್ಲಿ 3 ಬೆಳೆ ಪಡೆಯುತ್ತಿದ್ದ ಪಾರಂಪರಿಕ ಕೃಷಿಕರು ಇಂದು ಏಕ ಬೆಳೆಗೆ ಸಂತೃಪ್ತರಾಗಿದ್ದಾರೆ. ಭತ್ತದ ಕೃಷಿ ಗದ್ದೆಯಲ್ಲಿ ಸದಾ ನೀರು ಸಂಗ್ರಹಿಸಲಾಗುತ್ತಿತ್ತು. ಇದರಿಂದ ಗದ್ದೆ ಭೂಮಿಗೆ ನೀರುಣಿಸುತ್ತಿತ್ತು. ಆದರೆ ಇಂದು ವಿಶೇಷವಾಗಿ ಕರಾವಳಿಯಲ್ಲಿ ಶೇ. 20ರಷ್ಟು ಮಾತ್ರ ಭತ್ತದ ಕೃಷಿ ಕಾಣಬಹುದಾಗಿದೆ. ಈ ಶೇ. 80 ಭತ್ತ ನಾಟಿ ಇಂದು ವಾಣಿಜ್ಯ ಬೆಳೆಗಳ ಪಾಲಾಗಿವೆ.

ದಶಕಗಳ ಹಿಂದೆ ಕಾಲುವೆಗಳ ಮೂಲಕ ಬಯಲಿನಲ್ಲಿ ನೀರನ್ನು ಹರಿಸಲಾಗುತ್ತಿತ್ತು. ಬತ್ತ ಬೆಳೆಯುತ್ತಿದ್ದ ಗದ್ದೆಗಳು ವಾಣಿಜ್ಯ ಬೆಳೆಗಳಿಗೆ ಮಾರಿ ಹೋದ ಕಾರಣಕ್ಕೆ ಸಮತಟ್ಟಾದ ಬಯಲಿನಲ್ಲಿ ನೀರು ಸುಲಭವಾಗಿ ಹರಿಯುತ್ತಿತ್ತು. ಈ ಸಂದರ್ಭವೂ ನೀರು ಭೂಮಿಗೆ ಇಂಗುತ್ತಿತ್ತು. ಜತೆಗೆ ಆಸುಪಾಸಿನ ಕೊಳವೆಗಳು, ಬಾವಿಗಳು, ಹಳ್ಳಗಳು ಸಮೃದ್ಧವಾಗಿದ್ದವು. ಪರಿಣಾಮ ನೀರಿನ ಅಭಾವ ಕಾಡಿರಲಿಲ್ಲ.

ಬದಲಾದ ಸನ್ನಿವೇಶದಲ್ಲಿ ಕಾಲುವೆ ಮೂಲಕ ಹರಿಯುತ್ತಿದ್ದ ನೀರು ಪೈಪ್‌ ಮೂಲಕ ಹರಿಯಲು ಆರಂಭವಾಯಿತು. ಇದರಿಂದಾಗಿ ಅಂತರ್ಜಲಕ್ಕೆ ನೀರಿನ ಮರುಪೂರಣವಾಗಲೇ ಇಲ್ಲ. ನೀರು ಮತ್ತಷ್ಟು ಆಳಕ್ಕೆ ತಲುಪಿತು. ಇದರಿಂದ ಎಚ್ಚೆತ್ತ ನಾವು ‘ಡ್ರಿಪ್‌ ಇರಿಗೇಶನ್‌’ ಅಥವಾ ಹನಿ ನೀರಾವರಿ ಪದ್ಧತಿಯ ಮೊರೆ ಹೋದವು. ಇಡೀ ತೋಟಗಳಿಗೆ ಹರಿಯುತ್ತಿದ್ದ ನೀರು ಬಳಿಕ ಕೃಷಿ ಬುಡಗಳಿಗೆ ಮಾತ್ರ ಸಿಂಪಡನೆಗೊಳ್ಳಲು ಸೀಮಿತವಾಯಿತು.

Advertisement

ಅಂತರ್ಜಲ ಬತ್ತಿದ ಬಳಿಕ ಬೋರ್‌ವೆಲ್‌ಗ‌ಳು ಕೊರೆಯಲು ಆರಂಭವಾದವು. ಸಣ್ಣ ಪುಟ್ಟ ನೀರಿನ ನರಗಳು ಸೇರಿ ಬಾವಿಗಳಿಗೆ ಸೇರುತ್ತಿದ್ದ ಆಕರ ನಿಂತು ಬಿಟ್ಟವು. ಬಾವಿಗಳು ಬತ್ತಿದವು. ಅತ್ತ ಕೊಳವೆ ಬಾವಿಗೆ ಯೋಗ್ಯ ನೀರು ಲಭಿಸದ ಕಾರಣ ಅದನ್ನು ಮುಚ್ಚಲಾಯಿತು. ಹೀಗೆ ಕೊಳವೆ ಬಾವಿಯ ಮೇಲೆ ಕೊಳವೆ ಬಾವಿಗಳು ಕೊರಸಲ್ಪಟ್ಟು ನೀರಿಗೆ ಆಹಾಕಾರ ಎದುರಾದವು.

ಹೀಗೆ ಮಾಡೋಣ
ನಮ್ಮ ಖಾಲಿ ಗುಡ್ಡಗಳು, ರಬ್ಬರು ತೋಪುಗಳು, ಗೇರು ತೋಟಗಳು, ಕಾಡುಗಳಲ್ಲಿ ನೀರಿನ ಸಂಗ್ರಹಕ್ಕೆ ಮನಸ್ಸು ಮಾಡೋಣ. ಇದಕ್ಕಾಗಿ ಇಂಗು ಗುಂಡಿಗಳನ್ನು ತೋಡಬೇಕಾಗಿದೆ. ಓಡುವ ನೀರನ್ನು ನಮ್ಮ ಭೂಮಿಯಲ್ಲಿ ಹರಿಯುವಂತೆ ಮಾಡಬೇಕು. ಹರಿಯುವ ನೀರನ್ನು ತೆವಳುವ ಹಾಗೇ ಮಾಡಿ, ಬಳಿಕ ಇಂಗುವ ಹಾಗೆ ಮಾಡಬೇಕು. ನಮ್ಮದಲ್ಲದ ಖಾಲಿ ಜಾಗ ಮನೆಯ ಸಮೀಪ ಇದೇ ಎಂದಾದರೆ ವಾರಸುದಾರನ ಗಮನಕ್ಕೆ ತಂದು ನೀರಿನ ಸಂಗ್ರಹಕ್ಕೆ ಕಾರ್ಯ ಪ್ರವೃತ್ತರಾಗೋಣ. ಏಕೆಂದರೆ ಜಾಗ ಇನ್ನೊಬ್ಬರದ್ದಾದರೂ ಇಂಗುವ ನೀರು ನಮ್ಮ ಭೂಮಿಗೂ ಹರಿಯುತ್ತದೆ ಎಂಬುದನ್ನು ಮರೆಯದಿರೋಣ. ಸರಕಾರದ ಅನುದಾನಕ್ಕೋಸ್ಕರ ಕಾಟಾಚಾರಕ್ಕೆ ಇಂಗುಗುಂಡಿ ತೋಡುವುದನ್ನು ತಡೆ ಹಿಡಿಯಬೇಕಾಗಿದೆ. ನಮ್ಮ ಭೂಮಿಯಲ್ಲಿ ನೀರು ಇಂಗಿಸುವುದಕ್ಕೆ ಸರಕಾರ ನಮಗೆ ಅನುದಾನ ನೀಡುತ್ತಿದೆ. ಪ್ರತಿ ವರ್ಷ ನಿರ್ಮಿಸಿದ ಇಂಗು ಗುಂಡಿಗಳನ್ನು ಮಳೆಗಾಲ ಆರಂಭವಾಗುವುದಕ್ಕೆ ಮೊದಲು ಶುದ್ಧಗೊಳಿಸಿ ಕಸ ಕಡ್ಡಿಗಳನ್ನು ತೆಗೆಯಬೇಕು. ಇದರಿಂದ ನೀರಿಗೆ ದೊಡ್ಡ ಆಕರ ಲಭಿಸಿದಂತಾಗುತ್ತದೆ. ಕೊರೆಸಿದ ಕೊಳವೆ ಬಾವಿಯಲ್ಲಿ ನೀರು ಲಭ್ಯವಾಗದೇ ಇದ್ದರೆ ಅದನ್ನು ಮುಚ್ಚುವತ್ತ ಬಹುತೇಕರು ಯೋಚಿಸುವುದಿದೆ. ಆದರೆ ವೈಜ್ಞಾನಿಕ ವಿಧಾನ ಅನುಸರಿಸಿ ಕೊಳವೆಬಾವಿಗಳಿಗೆ ಮರುಪೂರಣಗೊಳಿಸುವತ್ತ ಚಿಂತಿಸಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next