ಶಿರಸಿ: ದಕ್ಷಿಣ ಭಾರತದ ಅತೀದೊಡ್ಡ ಜಾತ್ರೆ ಎಂದೇ ಕರೆಯಲ್ಪಡುವ ರಾಜ್ಯದ ಪ್ರಸಿದ್ಧ ಜಾತ್ರೆ ನಾಡಿನ ಶಕ್ತಿ ದೇವತೆ ಶ್ರೀ ಮಾರಿಕಾಂಬಾ ಜಾತ್ರೆ ಮಾ.15 ರಿಂದ 23 ರವರೆಗೆ ನಡೆಯಲಿದ್ದು ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.
ಜಾತ್ರೆ ಹಿನ್ನೆಲೆಯಲ್ಲಿ ನಾಡಿನ ಸಿರಿ ದೇವಿ ಶ್ರೀ ಮಾರಿಕಾಂಬೆ ಮಂಗಳವಾರ ನವ ವಧುವಿನಂತೆ ಸಿಂಗಾರಗೊಳ್ಳಲಿದ್ದಾಳೆ. ಮಕ್ಕಳೇ ಮುಂದೆ ನಿಂತು ಅಮ್ಮನ ಕಲ್ಯಾಣ ಪ್ರತಿಷ್ಠೆ ನಡೆಸಲಿದ್ದಾರೆ. ಕಲ್ಯಾಣ ಪ್ರತಿಷ್ಠೆ ನಡೆಯುವ ದೇವಸ್ಥಾನದ ಆವಾರ, ಸಭಾಂಗಣ ಬಣ್ಣ, ಪುಷ್ಪ, ವಿದ್ಯುತ್ ದೀಪಾಲಂಕಾರಗಳಿಂದ ಸಿಂಗಾರಗೊಂಡಿದೆ. “ಅಮ್ಮ’ನೂ ಹೊಸ ರೇಷ್ಮೆ ಸೀರೆ ಉಟ್ಟು ನವ ವಧುವಿನಂತೆ ಸಿಂಗಾರಗೊಂಡು ಭಕ್ತರಿಗೆ ದರ್ಶನ ನೀಡಲಿದ್ದಾಳೆ.
ಮಂಗಳವಾರ ವಿವಿಧ ಧಾರ್ಮಿಕ ಆಚರಣೆಗಳು ನಡೆಯಲಿದ್ದು, ಅಪರಾಹ್ನ 12.21ರ ಬಳಿಕ ದೇವಿ ಶೋಭಾಯಾತ್ರೆ ನಡೆಸುವ ರಥದ ಕಲಶ ಪ್ರತಿಷ್ಠೆ ಕೂಡ ನಡೆಯಲಿದೆ. ಬಳಿಕ ಹೋಳಿಗೆ ಊಟದ ನಂತರ ರಾತ್ರಿ 11:18ರ ಸುಮಾರಿಗೆ ದೇವಿಯ ತವರು ಮನೆತನದವರು ಎಂದೇ ಕರೆಯಲಾಗುವ ನಾಡಿಗರ ಮನೆತನದವರು ಮಾಂಗಲ್ಯ ಧಾರಣೆ ನಡೆಸಲಿದ್ದಾರೆ. ವಿವಿಧ ಸಾಂಪ್ರದಾಯಿಕ ಕಾರ್ಯಗಳೂ ನಡೆಯಲಿದ್ದು, ಪಂಚವಾದ್ಯಗಳು ಮೊಳಗಲಿವೆ.
ಬುಧವಾರ ಬೆಳಿಗ್ಗೆ 7.16ಕ್ಕೆ ಶ್ರೀದೇವಿ ರಥಾರೂಢಳಾಗಿ 8.36ಕ್ಕೆ ರಥೋತ್ಸವ ಆರಂಭಗೊಂಡು ಗದ್ದುಗೆ ವರೆಗೆ ಸಾಗಲಿದೆ. ಮಾ.17ರ ಬೆಳಿಗ್ಗೆ 5 ರಿಂದ ಗದ್ದುಗೆಯಲ್ಲಿ ದೇವಿ ದರ್ಶನ, ಉಡಿ, ಹಣ್ಣುಕಾಯಿ ಸೇವೆ ಆರಂಭಗೊಳ್ಳಲಿದೆ. ಮಾ.23 ರ ಬೆಳಿಗ್ಗೆ 9:33ರ ತನಕ ಸೇವೆ ಸಲ್ಲಿಸಲು ಅವಕಾಶ ಇದ್ದು, ನಂತರ ದೇವಿ ಗದ್ದುಗೆ ಬಿಟ್ಟು ಏಳಲಿದ್ದು ಜಾತ್ರೆಗೆ ತೆರೆಬೀಳಲಿದೆ. ಏ.2 ರ ಯುಗಾದಿಯಂದು ದೇವಾಲಯದಲ್ಲಿ ದೇವಿಯ ಪುನರ್ ಪ್ರತಿಷ್ಠೆ ನಡೆಯಲಿದೆ.
ಜಾತ್ರೆ ಹಿನ್ನೆಲೆಯಲ್ಲಿ ಈಗಾಗಲೇ ದೇಗುಲಕ್ಕೆ ಸುಣ್ಣ ಬಣ್ಣ ಬಳಿದು ಸಿಂಗರಿಸಲಾಗಿದೆ. ನವ ವಧುವನ್ನು ಸ್ವಾಗತಿಸಲು ದೇಗುಲದ ಸಭಾಂಗಣ ಸಿದ್ಧವಾಗಿದೆ. ಬಾಣಸಿಗರು ಪ್ರಸಾದ ತಯಾರಿಸುವಲ್ಲಿ ನಿರತರಾಗಿದ್ದಾರೆ.
ದೇವಿ ಕಲ್ಯಾಣ ಪ್ರತಿಷ್ಠೆ, ರಥೋತ್ಸವ ಹಾಗೂ ಗದ್ದುಗೆಯ ಸೇವೆಗಳಿಗೆ ಎಲ್ಲ ಸಿದ್ಧತೆ ಪೂರ್ಣಗೊಂಡಿದೆ. ಬಾಬುದಾರರು, ಅರ್ಚಕರು, ವಿವಿಧ ಸಮಿತಿ ಪ್ರಮುಖರು ಜಾತ್ರಾ ವಿಧಿವಿಧಾನಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಸಜ್ಜಾಗಿದ್ದಾರೆ.
-ರವೀಂದ್ರ ಜಿ.ನಾಯ್ಕ, ಅಧ್ಯಕ್ಷರು ಧರ್ಮದರ್ಶಿ ಮಂಡಳಿ