Advertisement

ಗೋಡೆಗೆ ಅಲಂಕಾರ ಮಾಡಿ ಕೋಣೆಯ ಅಂದ ಹೆಚ್ಚಿಸಿ !

09:52 AM Nov 30, 2019 | mahesh |

ತಮ್ಮ ಮನೆ ಸುಂದರವಾಗಿ ಕಾಣಬೇಕು ಎಂಬುದು ಎಲ್ಲರ ಬಯಕೆಯಾಗಿರುತ್ತದೆ. ಮನೆಯ ಒಳಾಂಗಣವನ್ನು ಪೀಠೊಪಕರಣ, ಕಿಟಕಿ ಪರದೆಗಳು, ಟೀವಿ, ಸ್ಟಾಂಡ್‌, ಆಲಂಕಾರಿಕ ವಸ್ತುಗಳಿಂದ ಮನೆಯನ್ನು ಸಿಂಗರಿಸುತ್ತಾರೆ. ಹೀಗೆಲ್ಲ ಸಿಂಗರಿಸಿ ಗೋಡೆ ಮಾತ್ರ ಖಾಲಿ ಬಿಟ್ಟರೆ ಹೇಗೆ? ಈ ಎಲ್ಲ ಆಲಂಕಾರಿಕ ವಸ್ತುಗಳ ಜೊತೆಗೇ ಗೋಡೆಗಳು ಕೊಂಚ ಕಲಾತ್ಮಕವಾಗಿರುವುದೂ ಮುಖ್ಯ. ಹಿಂದಿನ ಕಾಲದ ಮನೆಗಳಲ್ಲಿ ಗೋಡೆಗಳ ಅಗಲಕ್ಕೂ ದೇವರ ಫೋಟೊಗಳು ಮತ್ತು ಕ್ಯಾಲೆಂಡರ್‌ಗಳನ್ನು ತೂಗು ಹಾಕುತ್ತಿದ್ದರು. ಈಗಿನ ಮನೆಗಳಲ್ಲಿ ದೇವರಕೋಣೆ ಪ್ರತ್ಯೇಕವಾಗಿರುತ್ತದೆ. ಹೀಗಾಗಿ, ಮನೆಯ ಎಲ್ಲ ಗೋಡೆಗಳ ಮೇಲೆ ದೇವರ ಫೋಟೊಗಳನ್ನು ಹಾಕುವ ಅಗತ್ಯವಿಲ್ಲ.

Advertisement

ಈಗಿನ ಕಾಲದ ಮನೆಯ ಗೋಡೆಗಳಿಗೆ ಕೊಂಚ ಕ್ರಿಯಾತ್ಮಕವಾಗಿ ಆಲೋಚಿಸಿ ಸರಳವಾದ ವಸ್ತು ಅಥವಾ ಕಲೆಯನ್ನು ಸೇರಿಸಿದರೆ ಆ ಕೋಣೆಯ ಅಂದ ಇನ್ನಷ್ಟು ಹೆಚ್ಚುತ್ತದೆ. ಅಲಂಕರಿಸಿದ ಸೃಜನಾತ್ಮಕ ಗೋಡೆಗಳು ಮನಸ್ಸನ್ನು ಇನ್ನಷ್ಟು ಮುದಗೊಳಿಸುತ್ತವೆ.

ನಿಮ್ಮ ಸವಿ ನೆನಪುಗಳನ್ನು ದಾಖಲಿಸಿ
ನಿಮ್ಮ ಜೀವನದ ಸುಂದರ ನೆನಪುಗಳನ್ನು, ಚಿತ್ರಪಟಗಳನ್ನು ಪ್ರಖರ ಬಣ್ಣದ ಅಂಚಿನ ಚೌಕಟ್ಟಿನಲ್ಲಿರಿಸಿ ಕಲಾತ್ಮಕವಾಗಿ ಗೋಡೆಗಳನ್ನು ಅಲಂಕರಿಸಿ. ಒಂದರ ಪಕ್ಕ ಇನ್ನೊಂದು ಸಾಲಾಗಿ ಫೋಟೊ ಪ್ರೇಮ್‌ಗಳನ್ನು ಜೋಡಿಸುವ ಕಾಲ ಸರಿದು ಹೋಗಿದೆ. ಈಗ ಪಕ್ಕದ ಚೌಕಟ್ಟು ಕೊಂಚವೇ ಕೆಳಗೆ ಬರುವಂತೆ, ಅದರ ನಂತರದ್ದು ಇನ್ನೂ ಕೊಂಚ ಕೆಳಗೆ ಬರುವಂತೆ ಜೋಡಿಸಿ. ಚಿಕ್ಕ ಚಿತ್ರದಿಂದ ದೊಡ್ಡ ಗಾತ್ರದವರೆಗೆ ಮೆಟ್ಟಲಿನಾಕಾರದಲ್ಲಿ ಜೋಡಿಸುವುದು ಕಲಾತ್ಮಕತೆಯ ಸಂಕೇತವಾಗಿದೆ.

ಪೆಯಿಂಟಿಂಗ್‌ ಮಾಡಿ
ಬಿಳಿ ಬಣ್ಣದ ಮೇಲೆ ನಿಮಗೆ ಇಷ್ಟವಾದ ಬಣ್ಣವನ್ನು ಸುಂದರವಾಗಿ ಬಿಡಿಸಿ.ವಿವಿಧ ಬಣ್ಣಗಳನ್ನು ಬಳಸಿ ಕಲೆಗೊಂದು ರೂಪ ನೀಡಿ. ಒಂದು ವೇಳೆ ನಿಮ್ಮಲ್ಲಿ ಆ ಕಲಾವಿದನಿಲ್ಲದಿದ್ದಲ್ಲಿ ಒಂದೇ ಬಣ್ಣದ ವೃತ್ತಾಕಾರ, ಚೌಕಾಕಾರಗಳನ್ನು ಬಿಡಿಸಿ. ಪ್ರತಿ ಆಕೃತಿಗೂ ಪ್ರಖರವಾದ ಬೇರೆ ಬೇರೆ ಬಣ್ಣಗಳನ್ನು ಬಳಸುವ ಮೂಲಕ ವೈವಿಧ್ಯವನ್ನು ಪಡೆಯಬಹುದು. ಈಗ ಗೋಡೆಗೆ ಹಚ್ಚುವ ಸಿದ್ಧರೂಪದ ಅಲಂಕಾರದ ಚಿತ್ರಗಳು ಸಿಗುತ್ತವೆ. ಸೂಕ್ತವಾದವುಗಳನ್ನು ಖರೀದಿಸಿ ಮನೆಯ ಅಂದವನ್ನು ಹೆಚ್ಚಿಸಬಹುದು.


ಗೋಡೆಯಲ್ಲಿಗಾಢ ಬಣ್ಣದ ಪರದೆ ಮತ್ತು ರತ್ನಗಂಬಳಿ
ಗಾಢ ಬಣ್ಣದ ಕಿಟಕಿ ಮತ್ತು ಬಾಗಿಲ ಪರದೆಗಳೇ ಸೂಕ್ತ. ನೆಲಕ್ಕೆ ನೇರಳೆ, ಕಾಫಿ ಅಥವಾ ಕಂದು ಬಣ್ಣದ ರತ್ನಗಂಬಳಿ ಸೂಕ್ತವಾದರೆ ಇದೇ ಬಣ್ಣದ ಕಿಟಕಿ ಪರದೆಯೂ ಉತ್ತಮವಾದ ಮೆರುಗು ನೀಡುತ್ತದೆ. ಆದರೆ, ಪೀಠೊಪಕರಣಗಳು ಮತ್ತು ಮೇಜಿನ ಮೇಲಿನ ಬಟ್ಟೆ ಬಿಳಿಬಣ್ಣದ್ದಿರಲಿ. ಇದು ಹಿಂಭಾಗದ ಗಾಢವರ್ಣದ ಪರದೆ ಹಿಂಭಾಗದಲ್ಲಿ ಎದ್ದು ಕಾಣುತ್ತದೆ.

ಪುಸ್ತಕದ ಕಪಾಟೊಂದು ಇರಲಿ
ಪುಸ್ತಕಗಳನ್ನು ಸುಂದರವಾಗಿ ಜೋಡಿಸಲು ಪುಸ್ತಕದ ಕಪಾಟೊಂದನ್ನು ಗೋಡೆಯ ಮಧ್ಯೆ ಇರಿಸಿ. ಒಂದೋ ದೊಡ್ಡ ಅಥವಾ ಗೋಡೆಗೇ ಅಳವಡಿಸಬಲ್ಲ ಚಿಕ್ಕಚಿಕ್ಕ ಮೂರು ಅಥವಾ ನಾಲ್ಕು ಕಪಾಟುಗಳನ್ನೂ ಮಾಡಿ. ಆದರೆ, ಇವು ಗಾಢವರ್ಣದಲ್ಲಿದ್ದು ಬಿಳಿ ಬಣ್ಣದ ಹಿನ್ನಲೆಯಲ್ಲಿ ಕಾಣುವಂತಿರಬೇಕು. ಈ ಪುಸ್ತಕ ಕಪಾಟನ್ನು ನಿಮ್ಮ ಅಭಿರುಚಿಗೆ ತಕ್ಕಂತೆ ವಿಭಿನ್ನವಾದ ಆಕಾರದಲ್ಲಿ ನಿರ್ಮಿಸಬಹುದು. ಕೇವಲ ಪುಸ್ತಕಗಳನ್ನು ಮಾತ್ರ ಇಡದೇ ಆಲಂಕಾರಿಕ ವಸ್ತುಗಳನ್ನಿಡಲು ಸಾಧ್ಯವಾಗುವಂತಹ ಕಪಾಟನ್ನು ಮಾಡಿ. ಇದು ಇನ್ನಷ್ಟು ಸುಂದರವಾಗಿ ಕಾಣುತ್ತದೆ.

Advertisement

ಆಲಂಕಾರಿಕ ವಸ್ತುಗಳನ್ನು ಇರಿಸಿ
ಬಿಳಿ ಬಣ್ಣದ ಗೋಡೆಯ ಹಿನ್ನಲೆಯಲ್ಲಿ ಎದ್ದು ಕಾಣುವಂತಿರುವ ಕಲಾತ್ಮಕ ಮತ್ತು ಆಲಂಕಾರಿಕ ವಸ್ತುಗಳನ್ನು ಸ್ಥಾಪಿಸಿ ಮನೆಯ ಸುಂದರತೆಯನ್ನು ಹೆಚ್ಚಿಸಿ. ಒಂದು ವೇಳೆ ನಿಮ್ಮ ಮನೆಯ ಸೋಫಾಸೆಟ್‌ ಬಿಳಿ ಬಣ್ಣದಲ್ಲಿದ್ದರೆ ಅದರಲ್ಲಿರುವ ದಿಂಬುಗಳು ಗಾಢವರ್ಣದಲ್ಲಿರಲಿ. ಇದರ ಮೇಲೆ ಸಾಕಷ್ಟು ಬೆಳಕು ಬೀಳುವಂತಿರಲಿ. ಇಲ್ಲದಿದ್ದರೆ ಒಂದು ಹೆಚ್ಚುವರಿ ಬಲ್ಬ್ ಅಥವಾ ಟ್ಯೂಬ್‌ಲೈಟ್‌ಗಳನ್ನು ಹಾಕಿ ಬೆಳಕು ಸಾಕಷ್ಟಿರುವಂತೆ ನೋಡಿಕೊಳ್ಳಿ.

ಸುಲಭಾ ಆರ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next