Advertisement

Quality of education!; ಸರಕಾರಿ ಶಾಲೆ ಅವಸ್ಥೆ ಬಿಚ್ಚಿಟ್ಟ ಸಿಎಜಿ ವರದಿ

01:24 AM Dec 15, 2024 | Team Udayavani |

ಬೆಂಗಳೂರು: ರಾಜ್ಯದ ಶಾಲೆಗಳಲ್ಲಿ ಮಕ್ಕಳು ಮತ್ತು ಶಿಕ್ಷಕರ ಅನುಪಾತ ಹೆಚ್ಚುತ್ತಿದೆ. ಏಕ ಶಿಕ್ಷಕರ ಸರಕಾರಿ ಶಾಲೆಗಳ ಸಂಖ್ಯೆಯಲ್ಲಿ ಏರಿಕೆ ಆಗುತ್ತಿದೆ. ಸಹಪಠ್ಯ ಚಟುವಟಿಕೆಗಳಿಗೆ ಏಕರೂಪದ ಚೌಕಟ್ಟಿಲ್ಲ, ಸಮಗ್ರ ಭಾಷಾ ಮೌಲ್ಯಮಾಪನಕ್ಕೆ ಚೌಕಟ್ಟು ಅಲಭ್ಯ, ನಿಧಿಯ ಕೊರತೆಯಿಂದ ಶಿಕ್ಷಣದ ಗುಣಮಟ್ಟದಲ್ಲಿ ಕುಸಿತ… ಹೀಗೆ ರಾಜ್ಯದ ಶಿಕ್ಷಣ ವ್ಯವಸ್ಥೆಯ ಲೋಪ ದೋಷ ಗಳ ಬಗ್ಗೆ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರು (ಸಿಎಜಿ) ತಮ್ಮ ವರದಿಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ವಿಧಾನಸಭೆಯಲ್ಲಿ ಮಂಡಿಸಲಾಗಿರುವ “ಕರ್ನಾಟಕ ದಲ್ಲಿ ಪ್ರಾಥಮಿಕ ಶಿಕ್ಷಣ ಸಂಸ್ಥೆಗಳ ಕಾರ್ಯವೈಖರಿಯ ವರದಿ’ಯಲ್ಲಿ ರಾಜ್ಯದ 2017-2022ರ ಅವಧಿಯ ಶೈಕ್ಷಣಿಕ ಸ್ಥಿತಿಗತಿಯ ಬಗ್ಗೆ ಟಿಪ್ಪಣಿ ಮಾಡಲಾಗಿದೆ. 8 ಆಯ್ದ ಜಿಲ್ಲೆಗಳು, 16 ಬ್ಲಾಕ್‌ ಶಿಕ್ಷಣ ಕಚೇರಿ ಮತ್ತು 128 ಶಾಲೆಗಳನ್ನು ಪರಿಶೀಲಿಸಿ ಸಿಎಜಿ ತನ್ನ ವರದಿ ನೀಡಿದೆ.
ಪ್ರಾಥಮಿಕ ಶಿಕ್ಷಣದಲ್ಲಿ ನಿವ್ವಳ ದಾಖಲಾತಿ ದರಕ್ಕೆ ಸಂಬಂಧಿಸಿ ಗುರಿ ಸಾಧಿಸಿಲ್ಲ.

ಇನ್ನೂ ಬಹಳಷ್ಟು ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ ಎಂದು ಸಿಎಜಿ ತನ್ನ ವರದಿಯಲ್ಲಿ ಹೇಳಿದೆ.
ಎಲ್ಲ ಮಕ್ಕಳು ಶಾಲೆಗೆ ದಾಖಲಾಗಬೇಕಾದರೆ ಪ್ರತೀ ಗ್ರಾ.ಪಂ.ನಲ್ಲಿ 1ರಿಂದ 12ನೇ ತರಗತಿವರೆಗಿನ ಶಾಲೆಗಳನ್ನು ಸ್ಥಾಪಿಸುವುದು, ಎಲ್ಲ ಗ್ರಾಮಗಳು ಮತ್ತು ವಸತಿಗಳಿಗೆ ರಸ್ತೆ ಸಂಪರ್ಕ ಮತ್ತು ಪಾಯಿಂಟ್‌ ಟು ಪಾಯಿಂಟ್‌ ಸಾರಿಗೆ ಒದಗಿಸುವುದು, ಶಾಲೆ ತೊರೆದವರು, ಶಾಲೆಗೆ ದಾಖಲಾಗದವರನ್ನು ಪತ್ತೆ ಹಚ್ಚಲು ಎನ್‌ಜಿಒ ಮತ್ತು ಸಮುದಾಯದ ನೆರವು ಪಡೆಯಬೇಕು ಎಂದು ಸಿಎಜಿ ಸಲಹೆ ನೀಡಿದೆ.

ಆಟದ ಮೈದಾನ ದುರ್ಲಭ
43,194 ಶಾಲೆಗಳ ಪೈಕಿ 19,799 ಶಾಲೆಗಳಲ್ಲಿ ಆಟದ ಮೈದಾನವಿಲ್ಲ. ಇತರ ರಾಜ್ಯ ಸರಕಾರಿ 1,292 ಶಾಲೆಗಳ ಪೈಕಿ 336, ಸ್ಥಳೀಯ ಸಂಸ್ಥೆಗಳ 28 ಶಾಲೆಗಳ ಪೈಕಿ 13, ಖಾಸಗಿ ಅನುದಾನಿತ 2,876 ಶಾಲೆಗಳ ಪೈಕಿ 618, ಖಾಸಗಿ ಅನುದಾನ ರಹಿತ 14,724 ಶಾಲೆಗಳ ಪೈಕಿ 2,690 ಮತ್ತು ಕೇಂದ್ರ ಸರಕಾರದ 98 ಶಾಲೆಗಳ ಪೈಕಿ 6 ಶಾಲೆಗಳಲ್ಲಿ ಆಟದ ಮೈದಾನವಿಲ್ಲ ಎಂಬುದನ್ನು ಸಿಎಜಿ ಪತ್ತೆ ಹಚ್ಚಿದೆ.

ಶೈಕ್ಷಣಿಕ ಸಲಹಾ ಮಂಡಳಿ ರಚನೆಗೆ ಶಿಫಾರಸು
ಎಲ್ಲ ಶಾಲೆಗಳು ಅನುಸರಿಸಬೇಕಾದ ಸುರಕ್ಷೆ, ಮೂಲ ಸೌಕರ್ಯ, ಶಿಕ್ಷಕರ ಸಂಖ್ಯೆ, ಆರ್ಥಿಕ ಪಾರದರ್ಶಕತೆ ಮುಂತಾದವುಗಳ ಬಗ್ಗೆ ಮಾನದಂಡ ರಚನೆಗೆ ರಾಜ್ಯ ಶಾಲಾ ಗುಣಮಟ್ಟ ಪ್ರಾಧಿಕಾರ ಸ್ಥಾಪಿಸಬೇಕು, ಶೈಕ್ಷಣಿಕ ನೀತಿಗಳ ಕುರಿತು ಸರಕಾರಕ್ಕೆ ಸಲಹೆ ನೀಡಲು ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ರಾಜ್ಯ ಶೈಕ್ಷಣಿಕ ಸಲಹಾ ಮಂಡಳಿ ರಚಿಸಬೇಕು ಎಂದು ಸಿಎಜಿ ಸಲಹೆ ನೀಡಿದೆ.

Advertisement

ಆಯ್ದ ಜಿಲ್ಲೆಗಳು
ಬೆಂಗಳೂರು ಗ್ರಾಮಾಂತರ, ಮೈಸೂರು, ರಾಯಚೂರು, ಶಿವಮೊಗ್ಗ, ಬಳ್ಳಾರಿ, ಚಾಮರಾಜನಗರ, ಬಾಗಲಕೋಟೆ ಮತ್ತು ಶಿರಸಿ (ಶೈಕ್ಷಣಿಕ ಜಿಲ್ಲೆ).

ವಿದ್ಯಾರ್ಥಿ-ಶಿಕ್ಷಕ ಅನುಪಾತ ಹೆಚ್ಚಳ
ವಿದ್ಯಾರ್ಥಿ-ಶಿಕ್ಷಕರ ಅನುಪಾತವು ನಿಗದಿತ 30:1ರ ಅನುಪಾತದೊಳಗೆ ಇದ್ದರೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದಕ್ಕೆ ಸಿಎಜಿ ವರದಿ ಕಳವಳ ವ್ಯಕ್ತಪಡಿಸಿದೆ. ಶಿಕ್ಷಣ ಇಲಾಖೆಯಲ್ಲಿ 2017-18ರ ಸಾಲಿನಲ್ಲಿ ವಿದ್ಯಾರ್ಥಿ-ಶಿಕ್ಷಕರ ಅನುಪಾತ 21.43 ಇದ್ದುದು, 2021-22ರ ಸಾಲಿಗೆ 26.19ಕ್ಕೆ ಏರಿದೆ. ಇನ್ನುವ2017-18ರಲ್ಲಿ 4,652 ಏಕ ಶಿಕ್ಷಕ ಪ್ರಾಥಮಿಕ ಶಾಲೆಗಳಿದ್ದರೆ, 2021-22ರ ಸಾಲಿನಲ್ಲಿ ಈ ಸಂಖ್ಯೆ 6,616ಕ್ಕೆ ಏರಿದೆ. ಈ ಪೈಕಿ 6,239 ಗ್ರಾಮೀಣ ಭಾಗದ ಪ್ರಾಥಮಿಕ ಶಾಲೆಗಳು ಎಂದು ವರದಿ ಉಲ್ಲೇಖಿಸಿದೆ.

ಶಿಕ್ಷಕ- ವಿದ್ಯಾರ್ಥಿ ಅನುಪಾತ
2017 -18 1:21.43
2018-19 1:22
2019-20 1:21.87
2020-21 1:23.1
2021-22 1:26.19
ಇರಬೇಕಾದ್ದು 1:30

ವರದಿಯ ಪ್ರಮುಖ ಅಂಶಗಳು
ಮಕ್ಕಳ ಪ್ರಮಾಣವನ್ನು ಅಳೆಯಲು ಸೂಕ್ತ ಕ್ರಮಗಳಿಲ್ಲ
ಶಿಕ್ಷಣ ಕ್ಷೇತ್ರಕ್ಕೆ ನಿಧಿ ಕೊರತೆ. ಗುಣಮಟ್ಟದ ಶಿಕ್ಷಣಕ್ಕೆ ಅಡ್ಡಿ
ಶಾಲೆಗಳಲ್ಲಿ ಮೂಲ ಸೌಕರ್ಯಗಳ ಕೊರತೆ
393 ಶಾಲೆಗಳಿಗೆ ವಿದ್ಯುತ್‌ ಸಂಪರ್ಕವಿಲ್ಲ
ಉಚಿತ ಪಠ್ಯಪುಸ್ತಕ, ಸಮವಸ್ತ್ರ ಅಲಭ್ಯ
ಕೆಲವು ಜಿಲ್ಲಾಗಳಲ್ಲಿ ಕ್ರೀಡಾ ಅನುದಾನ ಬಳಕೆಯಾಗಿಲ್ಲ
ಶೇ. 90 ಶಾಲೆಗಳಲ್ಲಿ ಗ್ರಂಥಾಲಯ ಕೊಠಡಿಗಳೆ ಇಲ್ಲ

 ರಾಕೇಶ್‌ ಎನ್‌.ಎಸ್‌

Advertisement

Udayavani is now on Telegram. Click here to join our channel and stay updated with the latest news.

Next