Advertisement
ಈಗಾಗಲೇ ಮಲ್ಪೆ ಬಂದರಿನಲ್ಲಿ ಎಲ್ಲ ಸ್ತರದ ಒಟ್ಟು 2,000ದಷ್ಟು ಯಾಂತ್ರಿಕ ಬೋಟುಗಳಿದ್ದು ಈ ಪೈಕಿ ಶೇ. 70ರಷ್ಟು ಬೋಟುಗಳು ದಡ ಸೇರಿ ಲಂಗರು ಹಾಕಿವೆ. ಇದರಿಂದ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡ ಮಾಲಕರು, ಕಾರ್ಮಿಕರು ಮತ್ತವರ ಕುಟುಂಬ ನಿರ್ವಹಣೆಯ ಮೇಲೆ ಭಾರೀ ಪರಿಣಾಮ ಬೀರಿದೆ. ಲಭ್ಯ ಮೀನಿನ ದರವೂ ಕೂಡ ಅಧಿಕವಾಗಿ ಮೀನಿನ ಖಾದ್ಯದ ಮೇಲೂ ಪರಿಣಾಮ ಬೀರಿದೆ.
Related Articles
Advertisement
ಕಳೆದ ನಾಲ್ಕು ತಿಂಗಳಿನಿಂದ ಮೀನು ಗಾರರು ಬಳಸುವ ಡೀಸಿಲ್ ಮೇಲಿನ ಸಹಾಯಧನ ಸರಕಾರ ನೀಡಿಲ್ಲ. ಇದರಿಂದ ಮೀನುಗಾರರು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಕೆಲವರಿಗೆ ಆಗಸ್ಟ್‌ನಿಂದ ಬಾಕಿ ಇದ್ದರೆ ಇನ್ನು ಕೆಲವರಿಗೆ ಸೆಪ್ಟೆಂಬರ್‌ನಿಂದ ಯಾವುದೇ ಸಬ್ಸಿಡಿ ಹಣ ಖಾತೆಗೆ ಜಮೆಯಾಗಿಲ್ಲ ಎನ್ನಲಾಗಿದೆ. ಅತೀ ಶೀಘ್ರದಲ್ಲಿ ಬಾಕಿ ಇರುವ ಹಣ ಪಾವತಿಸುವಂತೆ ಮೀನುಗಾರರು ಆಗ್ರಹಿಸಿದ್ದಾರೆ.
ಕಡಲಿಗಿಳಿಯಲು ಹಿಂದೇಟು :
ಮಲ್ಪೆ ಬಂದರು ದಕ್ಕೆಯಲ್ಲಿ ಹೊರಟ ಆಳಸಮುದ್ರ ಬೋಟ್‌ಗಳು ಕೇರಳ, ಗೋವಾ ಮಹಾರಾಷ್ಟ್ರದತ್ತ ತೆರಳಿ ಮೀನುಗಾರಿಕೆಯಲ್ಲಿ ತೊಡಗಿಸಿಕೊಳ್ಳುತ್ತವೆ. ಆಳಸಮುದ್ರ ಬೋಟುಗಳು ಮೀನುಗಾರಿಕೆಗೆ ತೆರಳಿದರೆ ಮರಳಿ ಬರುವಾಗ 10ರಿಂದ 12 ದಿನವಾಗುತ್ತದೆ. ಈಗಿನ ಪರಿಸ್ಥಿತಿಯಲ್ಲಿ ಒಮ್ಮೆ ಹೋಗಿ ಬರಲು ಡೀಸೆಲ್ ಮಂಜುಗಡ್ಡೆ, ಆಹಾರ ಸಾಮಗ್ರಿ, ವೇತನ ಸೇರಿದಂತೆ ಕನಿಷ್ಠ 6 ಲಕ್ಷ ರೂ. ಬೇಕಾಗುತ್ತದೆ. ಹಾಗಾಗಿ 7-8 ಲಕ್ಷ ರೂ. ಮೌಲ್ಯದ ಮೀನು ಸಂಗ್ರಹವಾದರೆ ಮಾತ್ರ ಆರ್ಥಿಕ ಲಾಭ ಗಳಿಸಲು ಸಾಧ್ಯ. ಸದ್ಯದ ಪರಿಸ್ಥಿತಿಯಲ್ಲಿ ಮೀನಿನ ಲಭ್ಯತೆ ಕಡಿಮೆ ಇರುವ ಕಾರಣ ಹೆಚ್ಚೆಂದರೆ 3 ರಿಂದ 3.5 ಲಕ್ಷ ರೂ. ಮೌಲ್ಯದ ಮೀನುಗಳು ಮಾತ್ರ ಸಿಗುತ್ತದೆ. ಇದರಿಂದಾಗಿ ಬೋಟು ಮಾಲಕರು ಆರ್ಥಿಕವಾಗಿ ನಷ್ಟ ಹೊಂದುವುದರಿಂದ ಬೋಟ್‌ಗಳನ್ನು ಕಡಲಿಗೆ ಇಳಿಸಲು ಹಿಂದೇಟು ಹಾಕುತ್ತಾರೆ. ನೂರಾರು ಪಸೀìನ್ ಬೋಟುಗಳಿಗೂ ಸಂಪಾದನೆ ಇಲ್ಲದೆ ಅದರಲ್ಲಿ ದುಡಿಯುವ ಕಾರ್ಮಿಕರು ಕೆಲಸ ಬಿಟ್ಟು ಹೋಗಿದ್ದಾರೆ. ಇದರಿಂದ ಬೋಟು ಮಾಲಕರು ಆತಂಕಪಡುವಂತಾಗಿದೆ.
ಮೀನಿನ ಲಭ್ಯತೆ ಕಡಿಮೆ ಇರುವುದರಿಂದ ಮಲ್ಪೆಯಲ್ಲಿ ಸಾಕಷ್ಟು ಬೋಟುಗಳು ಈಗಾಗಲೇ ಲಂಗರು ಹಾಕಿವೆ. ಸಾಮಾನ್ಯವಾಗಿ ಡಿಸೆಂಬರ್, ಜನವರಿ ತಿಂಗಳಲ್ಲಿ ಇಂತಹ ಸ್ಥಿತಿ ಇರುತ್ತದೆ. ಈಗಾಗಲೇ ಇಲಾಖೆಯಿಂದ ಡೀಸಿಲ್ ಸಬ್ಸಿಡಿ ಖಜಾನೆಗೆ ಬಂದಿದೆ. ಕೆಲವೇ ದಿನದಲ್ಲಿ ಮೀನುಗಾರರ ಖಾತೆಗೆ ಜಮೆಯಾಗಲಿವೆ. –ಗಣೇಶ್ ಕೆ., ಉಪನಿರ್ದೇಶಕರು, ಮೀನುಗಾರಿಕೆ ಇಲಾಖೆ