Advertisement

21ನೇ ಸ್ಥಾನಕ್ಕೆ ಕುಸಿತ: ಶಿಕ್ಷಣ ಇಲಾಖೆ ವಿರುದ್ಧ ಸದಸ್ಯರು ಗರಂ

12:57 PM May 23, 2017 | |

ಮೈಸೂರು: ಈ ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆ ಫ‌ಲಿತಾಂಶದಲ್ಲಿ ಜಿಲ್ಲೆ 21ನೇ ಸ್ಥಾನಕ್ಕೆ ಕುಸಿದಿರುವ ಹಿನ್ನೆಲೆ, ಮುಂದಿನ ವರ್ಷ ಉತ್ತಮ ಫ‌ಲಿತಾಂಶ ಪಡೆಯಲು ಎಲ್ಲ ರೀತಿಯ ಕ್ರಮ ಕೈಗೊಳ್ಳುವುದಾಗಿ ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್‌ ತಿಳಿಸಿದರು.

Advertisement

ಅಬ್ದುಲ್‌ ನಜೀರ್‌ ಸಾಬ್‌ ಸಭಾಂಗಣದಲ್ಲಿ ಸೋಮವಾರ ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ಸದಸ್ಯ ವೆಂಕಟಸ್ವಾಮಿ ಎಚ್‌.ಡಿ.ಕೋಟೆ ತಾಲೂಕಿನಲ್ಲಿ ಶಿಕ್ಷಕರ ನೇಮಕದಲ್ಲಿ ಆಗಿರುವ ಲೋಪ ಕುರಿತು ಮಂಡಿಸಿದ ನಿಲುವಳಿ ಸೂಚನೆಯ ಚರ್ಚೆ ವೇಳೆ, ಈ ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆ ಫ‌ಲಿತಾಂಶ ಕುಸಿತಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳ ಕರ್ತವ್ಯಲೋಪವೇ ಕಾರಣ ಎಂದು ಪûಾತೀತವಾಗಿ ತರಾಟೆಗೆ ತೆಗೆದುಕೊಂಡ ಹಿನ್ನೆಲೆ, ಅವರು ಅಂಕಿಅಂಶಗಳ ಸಹಿತಿ ಸಭೆಗೆ ಮಾಹಿತಿ ನೀಡಿದರು.

ಶಿಕ್ಷಕರ ಕೊರತೆಯೇ ಫ‌ಲಿತಾಂಶ ಕುಸಿತಕ್ಕೆ ಕಾರಣವಲ್ಲ. ಅಗ್ರಸ್ಥಾನದಲ್ಲಿರುವ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲೂ ಶಿಕ್ಷಕರ ಕೊರತೆ ಇದೆ. ಆದರೆ, ಅಲ್ಲಿನ ಶಿಕ್ಷಕರುಗಳಲ್ಲಿ ಬದ್ಧತೆ ಇದೆ. ನಮ್ಮ ಶಿಕ್ಷಕರಲ್ಲಿ ಬದ್ಧತೆ ಕೊರತೆ ಕಾಣುತ್ತಿದೆ. ಶಿಕ್ಷಕರಿಗೆ ವಿಷಯವಾರು ತರಬೇತಿ ನೀಡಿದರೂ ಕ್ಷೇತ್ರಮಟ್ಟದಲ್ಲಿ ಕೆಲಸ ವಾಗುತ್ತಿಲ್ಲ. ಮೈಸೂರು ಮಾತ್ರವಲ್ಲ, ರಾಜ್ಯದ ಯಾವುದೇ ಜಿಲ್ಲೆ ತೆಗೆದುಕೊಂಡರೂ ವಿದ್ಯಾರ್ಥಿಗಳಿಗೆ ಗಣಿತ, ಇಂಗ್ಲಿಷ್‌ ಹಾಗೂ ವಿಜಾnನ ವಿಷಯಗಳು ಕಬ್ಬಿಣದ ಕಡಲೆಯಾಗಿಯೇ ಇರುತ್ತವೆ.

20 ಅಂಕ ಆಂತರಿಕವಾಗಿ ಕೊಟ್ಟರೂ, ಉತ್ತೀರ್ಣನಾಗಲು ವಿದ್ಯಾರ್ಥಿ ಕನಿಷ್ಠ 28 ಅಂಕಗಳನ್ನು ಪಡೆಯಲೇಬೇಕು. ಇದಕ್ಕಾಗಿಯೇ ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆಯಿಂದ ಗೆಲುವು ಪುಸ್ತಕ ಹೊರತರಲಾಗಿತ್ತು. ಆದರೂ ಯಾಕೆ ಸೋಲಾಯಿತು ಎಂಬುದನ್ನು ನೋಡಬೇಕಿದೆ. ಗೆಲುವು ಪುಸ್ತಕದಲ್ಲಿನ ಶೇ.89 ಪ್ರಶ್ನೆಗಳನ್ನು ಈ ಬಾರಿಯ ಪರೀಕ್ಷೆಯಲ್ಲಿ ಕೇಳಲಾಗಿತ್ತು.

ಹೀಗಾಗಿ ನಮ್ಮ ಶಿಕ್ಷಕರು ಬದ್ಧತೆಯಿಂದ ಗೆಲುವು ಪುಸ್ತಕದಲ್ಲಿನ ಅಂಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ಕಲಿಸಿದ್ದರೆ ಫ‌ಲಿತಾಂಶ ಇಷ್ಟು ಕುಸಿಯುತ್ತಿರಲಿಲ್ಲ. ಆದರೆ, ಈ ವಿಷಯದಲ್ಲಿ ಶಿಕ್ಷಕರು ವಿಫ‌ಲರಾಗಿದ್ದಾರೆ ಎಂದರು. ವಿಫ‌ಲವಾಗಿರುವ ಶಿಕ್ಷಕರು ಮತ್ತು ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಜತೆಗೆ ಮುಂದಿನ ಸಾಲಿನಲ್ಲಿ ಉತ್ತಮ ಫ‌ಲಿತಾಂಶ ಪಡೆಯುವ ನಿಟ್ಟಿನಲ್ಲಿ ಓದಿನಲ್ಲಿ ಹಿಂದಿರುವ ಮಕ್ಕಳನ್ನು 8ನೇ ತರಗತಿಯಿಂದಲೇ ಗುರುತಿಸಿ 10ನೇ ತರಗತಿ ಪರೀಕ್ಷೆಗೆ ಸಜ್ಜುಗೊಳಿಸಲು ನೀಲನಕ್ಷೆ ರೂಪಿಸುತ್ತಿರುವುದಾಗಿ ಹೇಳಿದರು.

Advertisement

ಜಿಲ್ಲೆಯಲ್ಲಿ 377 ಶಿಕ್ಷಕರ ಹುದ್ದೆ ಖಾಲಿ ಇದ್ದು, ಚಿತ್ರಕಲೆ, ತೋಟಗಾರಿಕೆ, ಸಂಗೀತ, ನೃತ್ಯ, ದೈಹಿಕ ಶಿಕ್ಷಕರ 114 ಖಾಲಿ ಹುದ್ದೆ ಹೊರತುಪಡಿಸಿದರೆ, 253 ಶಿಕ್ಷಕರ ಹುದ್ದೆ ಖಾಲಿ ಬರುತ್ತದೆ. ಈ ಬಾರಿ ಕೌನ್ಸೆಲಿಂಗ್‌ ಮೂಲಕ 101 ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಈವರೆಗೆ 82 ಮಂದಿ ಮಾತ್ರ ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದಾರೆ.

ಜಿಲ್ಲೆಯ ಗಡಿ ಹಾಗೂ ಕಾಡಂಚಿನ ಪ್ರದೇಶಗಳನ್ನು ಒಳಗೊಂಡ ಎಚ್‌.ಡಿ.ಕೋಟೆ ಹಾಗೂ ಪಿರಿಯಾಪಟ್ಟಣ ತಾಲೂಕುಗಳಿಗೆ ಖಾಲಿ ಇರುವ ಹುದ್ದೆಗಳು ಸಂಪೂರ್ಣ ಭರ್ತಿಯಾಗಬೇಕಾದರೆ ನೇಮಕಾತಿ ಮಾರ್ಗಸೂಚಿಯಲ್ಲಿ ಬದಲಾವಣೆ ಅಗತ್ಯವಾಗಿದೆ. ಆಗ ಖಾಲಿ ಹುದ್ದೆಗೆ ಅನುಗುಣವಾಗಿ ಹುದ್ದೆ ಭರ್ತಿ ಮಾಡಲು ನೇಮಕಾತಿ ಪ್ರಾಧಿಕಾರಕ್ಕೆ ಅನುಕೂಲವಾಗಲಿದೆ.

ಎಚ್‌.ಡಿ.ಕೋಟೆ ತಾಲೂಕಿನಲ್ಲಿ ಖಾಲಿ ಇರುವ ಶಿಕ್ಷಕರ ಎಲ್ಲ ಹುದ್ದೆಗಳನ್ನು ಭರ್ತಿ ಮಾಡುವಂತೆ ಶಿಕ್ಷಣ ಇಲಾಖೆ ಆಯುಕ್ತರು ಹಾಗೂ ಸಹ ನಿರ್ದೇಶಕರುಗಳಿಗೆ ಶಿಫಾರಸು ಮಾಡಲು ಸಭೆ ಅನುಮೋದನೆ ನೀಡಿತು. ಇದಕ್ಕೂ ಮುನ್ನ ಶಿಕ್ಷಕರ ಕೊರತೆ ಕುರಿತು ನಿಲುವಳಿ ಸೂಚನೆ ಮಂಡಿಸಿದ ವೆಂಕಟಸ್ವಾಮಿ, ಎಚ್‌.ಡಿ.ಕೋಟೆ ತಾಲೂಕಿನ 31 ಪ್ರೌಢಶಾಲೆಗಳಪೈಕಿ 25ರಲ್ಲಿ ಶಿಕ್ಷಕರ ಕೊರತೆ ಇದೆ.

ಆದರೆ, ಈ ಬಾರಿ ಕೌನ್ಸೆಲಿಂಗ್‌ ಮೂಲಕ ಶಿಕ್ಷಕರ ನೇಮಕಾತಿ ಮಾಡಿಕೊಂಡಾಗ ಸಮರ್ಪಕವಾಗಿ ಭರ್ತಿ ಮಾಡದೆ 94 ಶಿಕ್ಷಕರ ಕೊರತೆ ಇರುವಲ್ಲಿಗೆ ಕೇವಲ 7 ಶಿಕ್ಷಕರನ್ನು ನೇಮಕ ಮಾಡಿದ್ದಾರೆ. ಆದರೆ, ಕೆ.ಆರ್‌.ನಗರ ತಾಲೂಕಿನಲ್ಲಿ ಖಾಲಿಯಿದ್ದ 29 ಹುದ್ದೆಗಳನ್ನು ಭರ್ತಿಮಾಡಿದ್ದಾರೆ ಎಂದು ದೂರಿದರು. ಡಿ.ರವಿಶಂಕರ್‌, ಎಂ.ಪಿ.ನಾಗರಾಜ್‌, ಲತಾ ಸಿದ್ದಶೆಟ್ಟಿ, ಡಾ.ಪುಷ್ಪ ಅಮರನಾಥ್‌, ಮಂಗಳ ಸೋಮಶೇಖರ್‌, ಶ್ರೀಕೃಷ್ಣ, ಬೀರಿಹುಂಡಿ ಬಸವಣ್ಣ, ಸುಧೀರ್‌ ಅವರು ನಿಲುವಳಿ ಸೂಚನೆ ಬೆಂಬಲಿಸಿ ಮಾತನಾಡಿದರು.

ಶಿಕ್ಷಕರ ಹುದ್ದೆ ಖಾಲಿ
ಜಿಲ್ಲೆಯಲ್ಲಿ ಎಚ್‌.ಡಿ.ಕೋಟೆ, ಪಿರಿಯಾಪಟ್ಟಣ, ಕೆ.ಆರ್‌.ನಗರ ತಾಲೂಕುಗಳಲ್ಲೇ ಅತಿ ಹೆಚ್ಚು ಶಿಕ್ಷಕರ ಹುದ್ದೆ ಖಾಲಿ ಇದೆ. ಆದರೆ, ಆ ತಾಲೂಕುಗಳಲ್ಲಿ ಫ‌ಲಿತಾಂಶ ಉತ್ತಮವಾಗಿ ಬಂದಿದೆ. ಪಿರಿಯಾಪಟ್ಟಣ ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿದ್ದರೆ, ಎಚ್‌.ಡಿ.ಕೋಟೆ-5, ಮೈಸೂರು ದಕ್ಷಿಣ- 6, ಕೆ.ಆರ್‌.ನಗರ-7, ಮೈಸೂರು ಉತ್ತರ-8 ಹಾಗೂ ತಿ.ನರಸೀಪುರ 9ನೇ ಸ್ಥಾನದಲ್ಲಿವೆ. ಜತೆಗೆ ಅನುದಾನಿತ ಶಾಲೆಗಳಿಗಿಂತ ಅನುದಾನ ರಹಿತ ಶಾಲೆಗಳಲ್ಲಿ ಉತ್ತಮ ಫ‌ಲಿತಾಂಶ ಬಂದಿದೆ. ಸರ್ಕಾರಿ ಶಾಲೆಗಳಲ್ಲಿ ಶೇ.68.79 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.  ಜಿಲ್ಲೆಯಲ್ಲಿ ಪರೀಕ್ಷೆ ಬರೆದ 37503 ವಿದ್ಯಾರ್ಥಿಗಳ ಪೈಕಿ 27014 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 10489 ಮಕ್ಕಳು ಅನುತ್ತೀರ್ಣರಾಗಿದ್ದಾರೆ.

ಎಸ್ಸೆಸೆಲ್ಸಿ ಫ‌ಲಿತಾಂಶ ಪ್ರಕಟ ಮಾಡುವ ಸಂದರ್ಭದಲ್ಲಿ ಜಿಲ್ಲೆಗಳ ನಡುವೆ ರ್‍ಯಾಂಕಿಂಗ್‌ ನೀಡಿಕೆಯನ್ನು ಕೈಬಿಡಲು ಸರ್ಕಾರ ಚಿಂತನೆ ನಡೆಸಿದೆ.
-ಪಿ.ಶಿವಶಂಕರ್‌, ಜಿಪಂ ಸಿಇಒ

Advertisement

Udayavani is now on Telegram. Click here to join our channel and stay updated with the latest news.

Next