ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿದರೆ ಹೆಚ್ಚಿನ ದಂಡ ವಿಧಿಸುವ ಕಾನೂನು ಜಾರಿಗೆ ಬಂದ ಮೂರು ತಿಂಗಳಲ್ಲಿಯೇ ನಿಯಮ ಉಲ್ಲಂಘನೆ ಮಾಡುವವರ ಸಂಖ್ಯೆ ಇಳಿಮುಖವಾಗಿದ್ದು, ದಂಡ ಸಂಗ್ರಹಣೆಯಲ್ಲಿ ಹೆಚ್ಚಳ ಕಂಡಿದೆ.
ಅಸುರಕ್ಷಿತ ಮತ್ತು ಅಜಾಗರೂಕ ವಾಹನ ಚಾಲನೆಯಿಂದ ಸಾವು, ನೋವು, ನಷ್ಟವನ್ನು ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಮೋಟಾರು ವಾಹನ ಕಾನೂನು ತಿದ್ದುಪಡಿ ತರಲಾಗಿದ್ದು, ಇದೀಗ ನಗರದಲ್ಲಿ ಪರಿಣಾಮ ಬೀರುತ್ತಿದೆ. ನಿಯಮ ಉಲ್ಲಂಘನೆಯಲ್ಲಿ ಶೇ. 30 ಇಳಿಕೆ ಕಂಡಿದೆ. ದೇಶದಲ್ಲಿ ಸೆ. 3ರಂದು ಕಾನೂನು ಜಾರಿ ಬಂದಿದ್ದು, ರಾಜ್ಯ ಸರ್ಕಾರ ಸೆ. 21ರಂದು ದಂಡದ ಮೊತ್ತವನ್ನು ಪರಿಷ್ಕರಿಸಿ ಗೆಜೆಟ್ ಅಧಿಸೂಚನೆ ಹೊರಡಿಸಿತು. ಅಂದಿನಿಂದಲೇ ಹೊಸ ಕಾನೂನು ಜಾರಿಗೆ ಬಂದಿತು. ಅನಧಿಕೃತ ವ್ಯಕ್ತಿಗಳಿಗೆ ವಾಹನ ನೀಡಿದ ಮಾಲೀಕನಿಗೆ ದ್ವಿಚಕ್ರ ( ಸಾವಿರ ರೂ.), ಇತರೆ (3 ಸಾವಿರ), ನೋಂದಣಿ ಸಂಖ್ಯೆ ತಿರುಚುವುದು (ಒಂದು ಲಕ್ಷ ), ಅತಿವೇಗ ಚಾಲನೆ (1ರಿಂದ 2 ಸಾವಿರ), ಅಪಾಯಕಾರಿ ಚಾಲನೆ (1500-2000 ರೂ.), ಎರಡನೇ ಬಾರಿಗೆ (10 ಸಾವಿರ ರೂ.), ರೇಸಿಂಗ್ (5 ಸಾವಿರ) ಎರಡನೇ ಬಾರಿಗೆ (10 ಸಾವಿರ ರೂ.), ನೋಂದಣಿ ಮಾಡಿಸದೆ ಚಾಲನೆ (2 ಸಾವಿರ ರೂ.), ಹೆಲ್ಮೆಟ್ ರಹಿತ ಚಾಲನೆ (500 ರೂ.), ತುರ್ತು ವಾಹನಗಳಿಗೆ ದಾರಿ ಬಿಡದಿರುವುದು (ಸಾವಿರ ರೂ.) ಸೇರಿದಂತೆ 24 ನಿಯಮ ಉಲ್ಲಂಘನೆಗಳಿಗೆ ಸಂಚಾರಿ ಪೊಲೀಸರು ದಂಡ ವಿಧಿಸಬಹುದು.
ಬೆಂಗಳೂರಿನಲ್ಲಿ ಆಗಸ್ಟ್ ತಿಂಗಳಲ್ಲಿ 8.45 ಲಕ್ಷ ವಾಹನ ಸವಾರರು ಸಂಚಾರ ನಿಯಮ ಉಲ್ಲಂಘಿಸಿದ್ದು, ಸೆಪ್ಟೆಂಬರ್‌ನಲ್ಲಿ ಈ ಪ್ರಮಾಣ 5.96 ಲಕ್ಷ, ಅ. 4.93 ಲಕ್ಷ, ನವೆಂಬರ್ ತಿಂಗಳಲ್ಲಿ 4.79 ಲಕ್ಷ ಸವಾರರು ನಿಯಮ ಉಲ್ಲಂಘಿಸಿದ್ದಾರೆ. ತಿಂಗಳಿಂದತಿಂಗಳಿಗೆ ಈ ಸಂಖ್ಯೆ ಕಡಿಮೆಯಾಗುತ್ತಿದ್ದು, ದಂಡ ಸಂಗ್ರಹಣೆ ತಿಂಗಳಿಗೆ ಬರೋಬರಿ 10 ಕೋಟಿ ರೂ. ದಾಟುತ್ತಿದೆ.
ಹಿಂದಿನ ವರ್ಷಕ್ಕಿಂತ ಪ್ರಸಕ್ತ ವರ್ಷ ಸಂಚಾರ ನಿಯಮ ಉಲ್ಲಂಘನೆ ಪ್ರಮಾಣ ಕಡಿಮೆಯಾಗಿದೆ ಎಂದು ಪೊಲೀಸರ ವರದಿ ತಿಳಿಸಿದೆ. 2018ರಲ್ಲಿ 83.89 ಪ್ರಕರಣದಿಂದ 81.25 ಕೋಟಿ ರೂ. ಸಂಗ್ರಹಣೆಯಾಗಿದ್ದು, 2019 ಜನವರಿಯಿಂದ ನವೆಂಬರ್‌ವರೆಗೆ 75. 19 ಲಕ್ಷ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ 77.73 ಕೋಟಿ ರೂ. ದಂಡ ಸಂಗ್ರಹಿಸಲಾಗಿದೆ.
ಹೊಸ ಕಾನೂನು ಜಾರಿಯಾದಾಗಿನಿಂದ ಸಂಚಾರ ನಿಯಮ ಉಲ್ಲಂಘನೆ ಪ್ರಮಾಣ ಕಡಿಮೆಯಾಗಿದೆ. ವಾಹನ ಸವಾರರು ಸಿಗ್ನಲ್ ಜಂಪ್, ಹೆಲ್ಮೆಟ್ ಹಾಕಿ ವಾಹನ ಚಾಲನೆ, ಅಗತ್ಯ ದಾಖಲೆ ಇಟ್ಟುಕೊಂಡು ಚಾಲನೆ ಮಾಡುತ್ತಿದ್ದಾರೆ. ಆದ್ದರಿಂದ ನಿಯಮ ಉಲ್ಲಂಘನೆ ಕಡಿಮೆಯಾಗಿವೆ. ಹಂತ -ಹಂತವಾಗಿ ಸವಾರರು ಜಾಗರೂ.ಕರಾಗುತ್ತಿದ್ದಾರೆ. ಇದರಿಂದ ಸಾವು- ನೋವು ಪ್ರಮಾಣ ಕಡಿಮೆಯಾಗಲಿವೆ. –
ಡಾ.ಬಿ.ಆರ್.ರವಿಕಾಂತೇಗೌಡ, ನಗರ ಜಂಟಿ ಪೊಲೀಸ್ ಆಯುಕ್ತರು (ಸಂಚಾರ).
-ಮಂಜುನಾಥ ಗಂಗಾವತಿ