Advertisement

ಕಾಯಿದೆ ಜಾರಿಯಿಂದ ಅರಣ್ಯ ನಾಶ ಪ್ರಕರಣಗಳ ಇಳಿಕೆ: ರಮಾನಾಥ್‌ ರೈ

07:15 AM Aug 03, 2017 | Team Udayavani |

ಬೆಂಗಳೂರು:ಪರಿಸರ ಹಾಗೂ ವನ್ಯಜೀವಿ ಸಂರಕ್ಷಣೆ ಕಾಯ್ದೆಗಳು ಜಾರಿಯಾದ ನಂತರದಲ್ಲಿ ಅರಣ್ಯ ನಾಶದಂತಹ ಪ್ರಕರಣಗಳು ಕಡಿಮೆಯಾಗಿವೆ ಎಂದು ಅರಣ್ಯ ಇಲಾಖೆ ಸಚಿವ ರಮಾನಾಥ ರೈ ಹರ್ಷ ವ್ಯಕ್ತಪಡಿಸಿದ್ದಾರೆ.

Advertisement

ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆಯಿಂದ ವತಿಯಿಂದ ಗುರುವಾರ ಯಲಹಂಕ ವಿಧಾನಸಭಾ ಕ್ಷೇತ್ರದ ಪುಟ್ಟೇನಹಳ್ಳಿ ಕೆರೆ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾಯ್ದೆಗಳು ಜಾರಿ ನಂತರದಲ್ಲಿ ಜನಗರದಲ್ಲಿ ಜಾಗೃತಿ ಮೂಡಿದೆ. ಆದರೆ, ಭಯದ ಬದಲಿಗೆ, ಸ್ವಯಂ ಪ್ರೇರಿತವಾಗಿ ಪರಿಸರ ಸಂರಕ್ಷಣೆಯಲ್ಲಿ ಪಾಲ್ಗೊಳ್ಳಬೇಕಿದೆ ಎಂದು ತಿಳಿಸಿದರು.

ಪರಿಸರ ನಾಶದಿಂದ ಜಾಗತಿಕ ತಾಪಮಾನ ಹೆಚ್ಚಾಗಿದ್ದು, ಹವಾಮಾನದಲ್ಲಿ ವೈಪರಿತ್ಯ ಕಂಡಿದೆ. ಪ್ರತಿಯೊಬ್ಬರು ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕಿದೆ. ಮುಖ್ಯಮಂತ್ರಿಗಳು ನಗರ ಪ್ರದಕ್ಷಿಣೆ ವೇಳೆ ಪುಟ್ಟೇನಹಳ್ಳಿ ಕೆರೆ ಅಭಿವೃದ್ಧಿಪಡಿಸುವ ಭರವಸೆ ನೀಡಿದ್ದರು. ಅದರಂತೆ 9 ಕೋಟಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿಪಡಿಸಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದರು.

ಸುಮಾರು 37 ಎಕರೆ ಜಾಗದಲ್ಲಿ ಹರಡಿಕೊಂಡಿರುವ ಪುಟ್ಟೇನಹಳ್ಳಿ ಕೆರೆಗೆ ದೇಶ – ವಿದೇಶಗಳಿಂದ 125ಕ್ಕೂ ಹೆಚ್ಚು ಪ್ರಬೇಧದ ಪಕ್ಷಿಗಳು ಬರುತ್ತವೆ. ಹೀಗಾಗಿ ಕೆರೆಯನ್ನು ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶವೆಂದು ಘೋಷಿಸಲಾಗಿದೆ. ಇದೀಗ ಕೆರೆಯ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದ್ದು, ವರ್ಷದೊಳಗೆ ಕೆರೆ ಆಕರ್ಷಣೀಯ ಹಾಗೂ ಪ್ರವಾಸೋದ್ಯಮ ತಾಣವಾಗಿ ಪರಿವರ್ತನೆಯಾಗಲಿದೆ ಎಂದು ಭರವಸೆ ನೀಡಿದರು.

ಶಾಸಕ ಎಸ್‌.ಆರ್‌.ವಿಶ್ವನಾಥ್‌ ಮಾತನಾಡಿ, ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕೆರೆ ಅಭಿವೃದ್ದಿ ಯೋಜನೆಗೆ ಚಾಲನೆ ಸಿಕ್ಕಿರುವುದು ಈ ಭಾಗದ ಜನರಲ್ಲಿ ಸಂತಸ ಮೂಡಿಸಿದೆ. ಅಭಿವೃದ್ಧಿ ಕಾಮಗಾರಿಯಿಂದಾಗಿ ಕೆರೆಗೆ ಕೊಳಚೆ ನೀರು ಪ್ರವೇಶಿಸುವುದು ತಪ್ಪಲಿದೆ ಎಂದು ತಿಳಿಸಿದರು.

Advertisement

ಇತ್ತೀಚೆಗೆ ಡೆಹರಾಡೂನ್‌ನಲ್ಲಿರುವ ಪರಿಸರ ಸಂಶೋಧನಾ ಕೇಂದ್ರದ ವರದಿಯಂತೆ ರಾಜ್ಯದಲ್ಲಿ 29,900 ಹೆಕ್ಟರ್‌ನಷ್ಟು ಹಸಿರು ಹೊದಿಕೆ ಹೆಚ್ಚಾಗಿದೆ. ಇದರೊಂದಿಗೆ ಈ ಹಿಂದೆ ಅರಣ್ಯೇತರ ಉದ್ದೇಶಗಳಿಗೆ ಅರಣ್ಯ ಭೂಮಿ ಬಳಸುವುದು ಕಡಿಮೆಯಾಗಿದೆ ಎಂದು ರಮಾನಾಥ್‌ ರೈ ಹರ್ಷ ವ್ಯಕ್ತಪಡಿಸಿದರು.

ಕೆರೆಯ ಅಭಿವೃದ್ಧಿಯ ವಿವರ
ಕೆರೆಯಲ್ಲಿನ ಹೂಳೆತ್ತುವುದು, ಗಿಡಘಂಟಿಗಳನ್ನು ತೆಗೆಯುವುದು, ತ್ಯಾಜ್ಯ ನೀರು ಕೆರೆ ಪ್ರವೇಶಿಸದಂತೆ ಕ್ರಮಕೈಗೊಳ್ಳುವುದು, ಕೆರೆಯಲ್ಲಿ ಆಮ್ಲಜನ ಪ್ರಮಾಣ ಹೆಚ್ಚಿಸಲು ಏರಿಯೇಷನ್‌ ವ್ಯವಸ್ಥೆ, ಕೆರೆಯ ಒತ್ತುವರಿ ತಡೆಯಲು ತಂತಿಬೇಲಿ ಅಳವಡಿಕೆ, ಕೆರೆಯ ಆವರಣದಲ್ಲಿ ಮಾಹಿತಿ ಕೇಂದ್ರ, ಲಾನ್‌ ಅಭಿವೃದ್ಧಿ, ಭದ್ರತಾ ಕೊಠಡಿ, ನಿರ್ವಹಣಾ ಕೊಠಡಿ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ವಾಕಿಂಗ್‌ ಟ್ರ್ಯಾಕ್‌ ನಿರ್ಮಾಣ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಬೆಂಗಳೂರು ನಗರ ಉಪವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪಿಕಾ ಭಾಜ್ಪೆ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next