Advertisement

ಅಭಿವೃದ್ಧಿ ದರದ ಕುಸಿತ ಆರ್ಥಿಕತೆ ಹಳಿಯೇರಲಿ

12:55 AM Jan 09, 2020 | Team Udayavani |

ನಿರಂತರವಾಗಿ ಆರ್ಥಿಕ ಅಭಿವೃದ್ಧಿ ದರ ಕುಸಿಯುತ್ತಿರುವುದರಿಂದ ಸರಕಾರದ ಹಲವು ಮಹತ್ವಾಕಾಂಕ್ಷಿ ಯೋಜನೆಗಳಿಗೆ ಹಿನ್ನಡೆಯಾಗಲಿದೆ. ಈ ಕಾರಣಕ್ಕೆ ಸರಕಾರ ಜಿಡಿಪಿ ಕುಸಿತವನ್ನು
ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ.

Advertisement

ರಾಷ್ಟ್ರೀಯ ಸಾಂಖೀಕ ಕಚೇರಿ (ಎನ್‌ಎಸ್‌ಒ) 2019-20ನೇ ಸಾಲಿನ ಜಿಡಿಪಿ ಅಭಿವೃದ್ಧಿ ದರ ಶೇ.5ರಂತೆ ಅಭಿವೃದ್ಧಿ ಹೊಂದುವ ನಿರೀಕ್ಷೆಯನ್ನು ವ್ಯಕ್ತಪಡಿಸಿದೆ. ಈಗಾಗಲೇ ಆರ್ಥಿಕ ಕುಸಿತದ ಕಾರಣಕ್ಕೆ ಭಾರೀ ಟೀಕೆಗಳನ್ನು ಎದುರಿಸುತ್ತಿರುವ ಸರಕಾರಕ್ಕೆ ಇದು ಬಹಳ ಮುಜುಗರಉಂಟುಮಾಡುವ ವರದಿ. ಹಿಂದಿನ ಆರ್ಥಿಕ ವರ್ಷದಲ್ಲಿ ಶೇ. 6.8 ಜಿಡಿಪಿ ಅಭಿವೃದ್ಧಿ ದರವಿತ್ತು. ಪ್ರಸಕ್ತ ಸಾಲಿಗಾಗುವಾಗ ಅದು ಇನ್ನಷ್ಟು ಕುಸಿದಿರುವುದಲ್ಲದೆ ಕಳೆದೊಂದು ದಶಕದಲ್ಲೇ ಕನಿಷ್ಠ ಮಟ್ಟಕ್ಕಿಳಿದಿದೆ. ಇಂಥ ಹಿಂಜರಿತ ಭಾರೀ ಕಳವಳಕ್ಕೆ ಕಾರಣವಾಗುವುದಿಲ್ಲ ನಿಜ. ಇದಕ್ಕಿಂತಲೂ ಕಠಿಣ ಪರಿಸ್ಥಿತಿಯನ್ನು ದೇಶ ಎದುರಿಸಿ ಎದ್ದು ನಿಂತಿದೆ ಎಂಬ ಸರಕಾರದ ವಿವರಣೆಯನ್ನು ಒಪ್ಪಿಕೊಳ್ಳಬಹುದು. ಆದರೆ ನಿರಂತರವಾಗಿ ಆರ್ಥಿಕ ಅಭಿವೃದ್ಧಿ ದರ ಕುಸಿಯುತ್ತಿರುವುದರಿಂದ ಸರಕಾರದ ಹಲವು ಮಹತ್ವಾಕಾಂಕ್ಷಿ ಯೋಜನೆಗಳಿಗೆ ಹಿನ್ನಡೆಯಾಗಲಿದೆ. ಈ ಕಾರಣಕ್ಕೆ ಸರಕಾರ ಜಿಡಿಪಿ ಕುಸಿತವನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ.

ಸರಕಾರಿ ಅಂಕಿಅಂಶಗಳು ದ್ವಿತೀಯಾರ್ಧದಲ್ಲೂ ಆರ್ಥಿಕ ಚಟುವಟಿಕೆಗಳು ನಿರೀಕ್ಷಿತ ವೇಗದಲ್ಲಿ ಗರಿಗೆದರುವುದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತಿವೆ. ಈ ಸಂದರ್ಭದಲ್ಲಿ ಆರ್ಥಿಕ ಚೇತರಿಕೆಗಾಗಿ ಸರಕಾರ ಕೈಗೊಳ್ಳಬೇಕಾದ ಕ್ರಮಗಳು ಅನೇಕ ಇವೆ. ವಾಹನೋದ್ಯಮ, ರಿಯಲ್‌ಎಸ್ಟೇಟ್‌ ವಲಯಗಳಿಗೆ ಘೋಷಿಸಿದ ಪ್ಯಾಕೇಜ್‌ಗಳನ್ನು ಉಳಿದ ವಲಯಗಳಿಗೂ ವಿಸ್ತರಿಸುವ ಅಗತ್ಯವಿದೆ. ಮುಖ್ಯವಾಗಿ ಉತ್ಪಾದನಾ ವಲಯಕ್ಕೆ ತುರ್ತು ನೆರವು ಬೇಡುತ್ತಿದೆ. ಈ ವಲಯದಲ್ಲಾಗಿರುವ ಕುಂಠಿತ ನೇರವಾಗಿ ರಫ್ತಿನ ಮೇಲೆ ಪರಿಣಾಮ ಬೀರಿದ್ದು, ಇದರಿಂದ ವಿನಿಮಯ ದರ ಕುಸಿದು ವಿತ್ತೀಯ ಕೊರತೆ ಹೆಚ್ಚುತ್ತಿದೆ.

ಕಳೆದ ಸಾಲಿನ ಬಜೆಟ್‌ನಲ್ಲಿ ಜಿಡಿಪಿ ಶೇ. 12ರ ದರದಲ್ಲಿ ಅಭಿವೃದ್ಧಿ ಹೊಂದಲಿದೆ ಎಂದು ಹೇಳಲಾಗಿತ್ತು. ಇದು ಸಾಧ್ಯವಾಗದಿದ್ದರೂ ಸಾಮಾನ್ಯ ಅಭಿವೃದ್ಧಿಯನ್ನು ನಿರೀಕ್ಷಿಸಲಾಗಿತ್ತು. ಸಾಮಾನ್ಯ ಅಭಿವೃದ್ಧಿ ದರ ಎಂದರೆ ಶೇ.7ರಿಂದ 7.5ರ ಆಸುಪಾಸಿನಲ್ಲಿರಬೇಕು. ಆದರೆ ಪ್ರಸ್ತುತ ಸಾಲಿನ ನಿರೀಕ್ಷೆ ಇದಕ್ಕಿಂತಲೂ ಬಹಳ ಕಡಿಮೆಯಿದೆ. ಆರ್ಥಿಕ ಹಿಂಜರಿತ ಕಾಣಿಸಿಕೊಂಡು ಬಹಳ ಸಮಯವಾಗಿದ್ದರೂ ಇದೀಗ ಹೊಸ ಸವಾಲುಗಳು ಎದುರಾಗಿವೆ. ಮುಖ್ಯವಾಗಿ ಅಮೆರಿಕ ಮತ್ತು ಇರಾನ್‌ ನಡುವೆ ಉಂಟಾಗಿರುವ ಪ್ರಕ್ಷುಬ್ಧತೆ ನಮ್ಮ ಆರ್ಥಿಕತೆಯ ಮೇಲೆ ನೇರವಾಗಿಯೇ ಪರಿಣಾಮಗಳನ್ನು ಬೀರುತ್ತಿದೆ. ಕಚ್ಚಾತೈಲ ಬೆಲೆ ಏರಿಕೆಯಿಂದಾಗಿ ಈಗಾಗಲೇ ಪೆಟ್ರೋಲು ಮತ್ತು ಡೀಸೆಲ್‌ ಬೆಲೆ ಹೆಚ್ಚಳವಾಗಿದೆ. ಜೊತೆಗೆ ಚಿನ್ನವೂ ಬೆಲೆ ಏರಿಕೆಯಲ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನು ಮಾಡುತ್ತಿದೆ. ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರ ಖರ್ಚು ಮಾಡುವ ಸಾಮರ್ಥ್ಯ ಕಡಿಮೆಯಾಗುತ್ತಿದೆ. ಹೀಗೆ ಆರ್ಥಿಕತೆಯ ಎಲ್ಲ ಅಂಗಗಳೂ ಹೊಡೆತ ತಿನ್ನುತ್ತಿರುವ ಇಂಥ ಸವಾಲಿನ ಪರಿಸ್ಥಿತಿಯಲ್ಲಿಯೇ ಇನ್ನು ಕೆಲವೇ ದಿನಗಳಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ ಮಂಡಿಸಲಿದ್ದಾರೆ.

ಹೂಡಿಕೆಗಳನ್ನು ಆಕರ್ಷಿಸುವ ಸಲುವಾಗಿ ಸರಕಾರ ಕೆಲ ಸಮಯದಿಂದ ಪ್ರಾಮಾಣಿಕವಾದ ಪ್ರಯತ್ನಗಳನ್ನು ಮಾಡುತ್ತಿದೆ. ಕಾರ್ಪೊರೇಟ್‌ ತೆರಿಗೆ ಕಡಿತ, ಉದ್ಯಮಿಗ ಜೊತೆ ಪ್ರಧಾನಿಯ ಸಂವಾದ ಈ ಮುಂತಾದ ಕ್ರಮಗಳಿಂದ ಹೂಡಿಕೆದಾರರಲ್ಲಿರುವ ಆತಂಕವನ್ನು ಹೋಗಲಾಡಿಸುವುದು ಈ ಸಂದರ್ಭದಲ್ಲಿ ಅಪೇಕ್ಷಣೀಯ ಕ್ರಮಗಳೇ. ಆದರೆ ಇದಿಷ್ಟೇ ಸಾಲದು. ಇಂಥ ಉಪಕ್ರಮಗಳು ಫ‌ಲನೀಡಲು ಬಜೆಟ್‌ನಲ್ಲಿ ಆರ್ಥಿಕ ಸುಧಾರಣೆಗಳಿಗೆ ಹೆಚ್ಚಿನ ಒತ್ತು ನೀಡಬೇಕು. ದೂರಗಾಮಿ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ವೈಧಾನಿಕವಾದ ಸುಧಾರಣೆಗಳನ್ನು ತರುವುದು ಈಗಿನ ಅಗತ್ಯ. ದೇಶವನ್ನು ಜಗತ್ತಿನ ಐದನೇ ಆರ್ಥಿಕ ಶಕ್ತಿಯಾಗಿ ಬೆಳೆಸುವ , 5 ಲಕ್ಷಕೋಟಿ ಆರ್ಥಿಕತೆಯನ್ನಾಗಿ ಮಾಡುವಂಥ ದೊಡ್ಡ ಗುರಿಗಳನ್ನು ಸರಕಾರ ಇಟ್ಟುಕೊಂಡಿದೆ. 5 ಲಕ್ಷ ಕೋ. ರೂ. ಆರ್ಥಿಕತೆಯಾಗಬೇಕಾದರೆ ಜಿಡಿಪಿ ಅಭಿವೃದ್ಧಿ ದರ ಶೇ. 12 ಇರಬೇಕು. ಪ್ರಸ್ತುತ ಅದರ ಅರ್ಧವೂ ಇಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next