Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದ ಬಿಜೆಪಿ ನಿಯೋಗ ಕೇಂದ್ರ ಪರಿಸರ ಖಾತೆ ಸಚಿವ ಹರಿಪ್ರಸಾದ್ ಅವರನ್ನು ಭೇಟಿಯಾಗಿ ಡಾ| ಕಸ್ತೂರಿ ರಂಗನ್ ವರದಿ ಜಾರಿಯಿಂದ ಆಗಬಹುದಾದ ಕಷ್ಟ ನಷ್ಟಗಳ ಬಗ್ಗೆ ಚರ್ಚಿಸಿದಾಗ ರಾಜ್ಯ ಸರಕಾರ ನೀಡಿದ ವರದಿಯ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ತಜ್ಞರು ನೀಡಿದ ವರದಿಯನ್ನು ಕೂಡ ನಿಯೋಗದ ಮುಂದಿಟ್ಟಿದ್ದು, ಸಂಪೂರ್ಣ ನ್ಯೂನತೆಯಿಂದ ಕೂಡಿದೆ ಎಂದು ಹೇಳಿದರು.ಕೇರಳ ಸರಕಾರದ ಮಾದರಿಯಲ್ಲಿ ಕರ್ನಾಟಕ ಸರಕಾ ರಕ್ಕೆ ತಕರಾರನ್ನು ಸಲ್ಲಿಸಲು ಯಾಕೆ ಸಾಧ್ಯವಾಗಿಲ್ಲವೆಂದು ಪ್ರಶ್ನಿಸಿದ ಅವರು ತಜ್ಞರ ಸಮಿತಿ ಜನಪ್ರತಿನಿಧಿಗಳು ಹಾಗೂ ಜನರ ಅಭಿಪ್ರಾಯಗಳನ್ನು ಸಂಗ್ರಹಿಸಿ ವರದಿ ತಯಾರಿಸಬೇಕಾಗಿತ್ತು ಎಂದರು. ಕೇರಳ ಸರಕಾರಕ್ಕೆ ಜನರ ಮೇಲೆ ಇರುವ ಕಾಳಜಿ ಕರ್ನಾಟಕ ಸರಕಾರಕ್ಕಿಲ್ಲ. ಮತ್ತೆ ತಕರಾರು ಸಲ್ಲಿಸಲು ಎರಡು ವರ್ಷಗಳ ಕಾಲಾವಕಾಶ ಇರುವುದರಿಂದ ರಾಜ್ಯ ಸರಕಾರ ತತ್ ಕ್ಷಣ ಎಚ್ಚೆತ್ತುಕೊಂಡು ಜನಪರವಾಗಿ ಸೂಕ್ತ ರೀತಿಯಲ್ಲಿ ವರದಿಯನ್ನು ನೀಡಲಿ ಎಂದು ಕೆ.ಜಿ. ಬೋಪಯ್ಯ ಹೇಳಿದರು. ಅರಣ್ಯ ಸಚಿವರಿಗೆ ಯಾವುದೇ ಮಾಹಿತಿ ಇಲ್ಲ, ಅಧಿಕಾರಿಗಳು ಹೇಳುವುದನ್ನು ಕೇಳುತ್ತಾರೆ ಅಷ್ಟೆ ಎಂದು ಟೀಕಿಸಿದರು.
Related Articles
Advertisement
ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ಪ್ರತಿವರ್ಷ ಜಿಲ್ಲೆಗೆ ರೂ. 50 ಕೋಟಿ ವಿಶೇಷ ಪ್ಯಾಕೇಜ್ ಎಂದು ಘೋಷಣೆ ಮಾಡುತ್ತಿದೆಯೇ ಹೊರತು ಕಳೆದ ನಾಲ್ಕು ವರ್ಷಗಳಲ್ಲಿ ಕೇವಲ ರೂ. 41 ಕೋಟಿಯಷ್ಟೆ ಬಿಡುಗಡೆ ಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಿಜೆಪಿ ಸರಕಾರವಿದ್ದಾಗ ಪ್ಯಾಕೇಜ್ ಘೋಷಣೆಯಾದ ವರ್ಷವೇ ಹಣ ಬಿಡುಗಡೆ ಮಾಡಲಾಗುತ್ತಿತ್ತು. ಆದರೆ ಈಗಿನ ಕಾಂಗ್ರೆಸ್ ಸರಕಾರ ಕೊಡಗು ಜಿಲ್ಲೆಯನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿದರು. ಕಾವೇರಿ ನೀರಾವರಿ ಪ್ರದೇಶ ವ್ಯಾಪ್ತಿಯ ಜನಪ್ರತಿನಿಧಿಗಳ ಸಭೆಯನ್ನು ಸರಕಾರ ಕರೆದಿದ್ದು, ಕೊಡಗಿನ ನಿರ್ಲಕ್ಷ್ಯವನ್ನು ಖಂಡಿಸಿ ಸಭೆಯಲ್ಲಿ ತಾವುಗಳು ಭಾಗವಹಿಸಲಿಲ್ಲವೆಂದು ಅಪ್ಪಚ್ಚುರಂಜನ್ ಹೇಳಿದರು. ಸರಕಾರದ ಕಡೆಗಣನೆಯನ್ನು ಖಂಡಿಸಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಅವರು, ಕಾಡಾನೆ ಹಾವಳಿಯನ್ನು ತಡೆಗಟ್ಟಲು ಸರಕಾರ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲವೆಂದು ಟೀಕಿಸಿದರು. ಅರಣ್ಯ ಭಾಗದಲ್ಲಿ 1500 ಹಾಗೂ ತೋಟಗಳಲ್ಲಿ 300 ಕಾಡಾನೆಗಳಿವೆ ಎಂದು ಸರಕಾರವೇ ಮಾಹಿತಿ ನೀಡಿದೆ ಎಂದರು. ಆದರೆ ಕಾಡಾನೆಗಳನ್ನು ಹಿಡಿಯುವ ಕಾರ್ಯಾ ಚರಣೆ ನಡೆದಿಲ್ಲ. ಅರಣ್ಯ ಭಾಗದಲ್ಲಿರುವ ಆಹಾರಕ್ಕೆ ಯೋಗ್ಯವಲ್ಲದ ಮರಗಳನ್ನು ತೆಗೆದು ವನ್ಯಜೀವಿಗಳ ಹಸಿವನ್ನು ನೀಗಿಸುವ ಮರಗಳನ್ನು ಬೆಳೆಸುವಂತೆ ಅರಣ್ಯ ಸಚಿವರಲ್ಲಿ ಮನವಿ ಮಾಡಲಾಗಿದೆ. ಈ ಕಾರ್ಯಕ್ಕೆ ಸರಕಾರ ಮುಂದಾದರೆ ಯೋಗ್ಯವಲ್ಲದ ಮರಗಳನ್ನು ತೆರವುಗೊಳಿಸಲು ಕೇಂದ್ರ ಸರಕಾರದಿಂದ ಅನುಮತಿ ದೊರಕಿಸಿ ಕೊಡುವುದಾಗಿ ಅಪ್ಪಚ್ಚು ರಂಜನ್ ಹೇಳಿದರು.
ಸಿ ಮತ್ತು ಡಿ ಭೂಮಿ ಮಂಜೂರು
ಕೊಡಗು ಜಿಲ್ಲೆಯ ಮೂರು ತಾಲ್ಲೂಕಿನಲ್ಲಿ ಸುಮಾರು 3669 ಅರ್ಜಿದಾರರು ಹೊಂದಿರುವ 6105.20 ಎಕರೆ ಸಿ ಮತ್ತು ಡಿ ಭೂಮಿಯನ್ನು ಸಕ್ರಮಗೊಳಿಸಲು ಸರಕಾರ ಆದೇಶ ನೀಡಿದೆ. ಇದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರ ಕಾಳಜಿಯಿಂದ ಆಗಿದೆ ಎಂದು ಅಪ್ಪಚ್ಚುರಂಜನ್ ಮೆಚ್ಚುಗೆ ವ್ಯಕ್ತಪಡಿಸಿದರು. ಸೋಮವಾರಪೇಟೆ ತಾಲೂಕಿನಲ್ಲಿ 3032 ಅರ್ಜಿ ದಾರರು 4368.20 ಎಕರೆ, ಮಡಿಕೇರಿ ತಾಲೂಕಿನಲ್ಲಿ 523 ಅರ್ಜಿದಾರರು 1249 ಎಕರೆ ಹಾಗೂ ವಿರಾಜಪೇಟೆ ತಾಲೂಕಿನಲ್ಲಿ 114 ಅರ್ಜಿದಾರರು 488 ಎಕರೆ ಸಿ ಮತ್ತು ಡಿ ಭೂಮಿಯನ್ನು ಹೊಂದಿದ್ದಾರೆ ಎಂದು ಅವರು ಮಾಹಿತಿ ನೀಡಿದರು.