ಬನಹಟ್ಟಿ: ರಬಕವಿ-ಬನಹಟ್ಟಿ ತಾಲೂಕು ಹಾಗೂ ಸುತ್ತಮುತ್ತಲಿನ ಭಾಗದ ಜನರು ಸಾಕಷ್ಟು ಪ್ರಮಾಣದಲ್ಲಿ ಅರಿಷಿಣ ಹಾಗೂ ಕಬ್ಬು ಬೆಳೆಯುತ್ತಾರೆ. ಕೃಷ್ಣಾ ಮತ್ತು ಘಟಪ್ರಭಾ ಎಡದಂಡೆ ಕಾಲುವೆಯ ಮಧ್ಯದಲ್ಲಿನ ರೈತರ ಪ್ರಮುಖ ವಾಣಿಜ್ಯ ಬೆಳೆ ಅರಿಷಿನವಾಗಿದೆ. ಸದ್ಯ ಅರಿಷಿನಕ್ಕೆ ಸೂಕ್ತ ಬೆಲೆಯೇ ಇಲ್ಲದೆ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಅರಿಷಿನ ಬೆಳೆದು ಸಾಕಷ್ಟು ಲಾಭ ಮಾಡಿಕೊಂಡಿದ್ದ ರೈತರು ಇಂದು ಅರಿಷಿನ ಬೆಳೆದು ಹಾನಿ ಅನುಭವಿಸುತ್ತಿದ್ದಾರೆ.
ಈ ಬಾರಿ ಇಲ್ಲಿಯ ರೈತರು ಅರಿಷಿನ ಬಿಟ್ಟು ಬೇರೆ ಬೆಳೆಗಳತ್ತ ಮುಖ ಮಾಡಿದ್ದಾರೆ. ಈ ಸಲ ಅರಿಷಿನ ಬೀಜಗಳನ್ನು ಕೇಳುವವರೆ ಇಲ್ಲದಂತಾಗಿದೆ. ಶೇ. 60ರಷ್ಟು ಅರಿಷಿಣ ಬೀಜಗಳ ಮಾರಾಟ ಕಡಿಮೆಯಾಗಿದೆ ಎನ್ನುತ್ತಾರೆ ಅರಿಸಿನ ಬೀಜಗಳ ಮಾರಾಟಗಾರ ಸ್ಥಳೀಯ ದೇವರಾಜ ರಾಠಿ.
ಏಪ್ರಿಲ್ ಆರಂಭದಲ್ಲಿ ಸೇಲಂ ನಿಂದ ಅರಿಷಿನ ಬೀಜದ ಬೆಲೆ ಕ್ವಿಂಟಲ್‌ಗೆ ರೂ. 3200 ಇತ್ತು. ಮೇ ಅಂತ್ಯಕ್ಕೆ ಬೆಲೆ ರೂ.4200 ಏರಿಕೆಯಾಗಿದೆ. ಆದರೆ, ಈಗ ರೈತರು ಸೇಲಂನ ಚಿನ್ನಾ ಅರಿಷಿನ ಬೀಜ ಕೇಳುತ್ತಿದ್ದಾರೆ. ಆದರೆ, ಸೇಲಂನಿಂದ ಇದು ಪೂರೈಕೆಯಾಗುತ್ತಿಲ್ಲ. ಮತ್ತೂಂದು ತಳಿಯ ಕೇವಲ ಸೇಲಂ ಅರಿಷಿನಗಳ ಬೀಜವಿದೆ. ಆದರೆ, ಇದನ್ನು ರೈತರು ಕೇಳುತ್ತಿಲ್ಲ.
ಲಾಕ್‌ಡೌನ್‌ನಿಂದ ಸಾರಿಗೆ ಸಂಪೂರ್ಣವಾಗಿ ಕಡಿತಗೊಂಡಿತು. ಸಾರಿಗೆ ಬಂದಾಗಿದ್ದರಿಂದ ಸೇಲಂನಲ್ಲಿ ಬೀಜ ಮಾರಾಟ ಮಾಡುತ್ತಿದ್ದ ಬೆಳೆಗಾರರು ಅದನ್ನು ಸಂಸ್ಕರಿಸಿ ಅರಿಷಿನವನ್ನಾಗಿ ಮಾಡಿದರು. ಸದ್ಯ ಅಲ್ಲಿಯೇ ಅರಿಷಿನ ಬೀಜಗಳು ಇಲ್ಲದಂತಾಗಿದೆ. ಇದರಿಂದಾಗಿ ಈಗ ಸೇಲಂ ಅರಿಷಿನ ಬೀಜಗಳ ಪೂರೈಕೆಯಾಗುತ್ತಿಲ್ಲ ಎನ್ನುತ್ತಾರೆ ದೇವರಾಜ ರಾಠಿ. ಈ ಬಾರಿ ಅರಿಷಿನ ಬೆಳೆದ ರೈತರು ಇನ್ನೂ ಅರಿಷಿನವನ್ನು ತಮ್ಮ ಮನೆಯಲ್ಲಿಯೇ ಇಟ್ಟುಕೊಂಡಿದ್ದಾರೆ. ಇನ್ನೂ ಸಾಂಗ್ಲಿ ಮಾರುಕಟ್ಟೆ ಆರಂಭವಾಗಿಲ್ಲ. ಆದರೂ ರೈತರು ಮತ್ತೆ ಅರಿಷಿನ ಬೆಳೆಯ ಮೇಲೆ ಭರವಸೆ ಇಟ್ಟು ಮತ್ತೆ ಅರಿಷಿನ ಬೆಳೆಯಲು ಸಜ್ಜಾಗಿದ್ದಾರೆ ಎನ್ನುತ್ತಾರೆ ಜಗದಾಳ ಗ್ರಾಮದ ರೈತ ಸದಾಶಿವ ಬಂಗಿ.