Advertisement

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆರೋಗ್ಯ ತೀವ್ರವಾಗಿ ಹದಗೆಟ್ಟಿದೆ: ಆಸ್ಪತ್ರೆ

11:55 AM Aug 31, 2020 | Mithun PG |

ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆರೋಗ್ಯ ಸ್ಥಿತಿ ಕ್ಷೀಣಿಸಿದೆ ಎಂದು ಆರ್ಮಿ ಆಸ್ಪತ್ರೆ ವರದಿ ಮಾಡಿದೆ. ಈಗಾಗಲೇ ಶ್ವಾಸಕೋಶದ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿ 20 ದಿನಗಳು ಕಳೆದಿದ್ದು ಆಳವಾದ ಕೋಮಾ ಸ್ಥಿತಿಯಲ್ಲಿದ್ದಾರೆ ಎಂದು ಹೆಲ್ತ್ ಬುಲೆಟಿನ್ ನಲ್ಲಿ ಹೇಳಲಾಗಿದೆ.

Advertisement

ಶ್ವಾಸಕೋಶದ ಸೋಂಕಿನಿಂದ ಸೆಪ್ಟಿಕ್ ಶಾಕ್ ಆಗಿದ್ದು, ವೆಂಟಿಲೇಟರ್ ಸಹಾಯದಿಂದ ಉಸಿರಾಡುತ್ತಿದ್ದಾರೆ. ತಜ್ಞ ವೈದ್ಯರ ತಂಡ ಪರಿಶೀಲನೆ ನಡೆಸುತ್ತಿದ್ದು, ಅದಾಗ್ಯೂ ಆರೋಗ್ಯ ತೀವ್ರವಾಗಿ ಹದಗೆಟ್ಟಿದೆ ಎಂದು ಸೇನಾ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

84 ವರ್ಷದ ಪ್ರಣಬ್ ಮುಖರ್ಜಿ ಆ. 10ರಂದು ದೆಹಲಿಯ ಸೇನಾ ಸಂಶೋಧನೆ ಮತ್ತು ರೆಫರಲ್ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಅವರ ಮೂತ್ರಪಿಂಡದಲ್ಲೂ ಸಮಸ್ಯೆಯಾಗಿದೆ. ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಇತ್ತೀಚೆಗೆ ಸೇನಾ ಆಸ್ಪತ್ರೆಯಲ್ಲಿ ಅವರಿಗೆ ಆಪರೇಷನ್ ಮಾಡಲಾಗಿತ್ತು. ಅದಾದ ನಂತರವೂ ಅವರ ಆರೋಗ್ಯ ಸುಧಾರಿಸಿರಲಿಲ್ಲ.

ಪ್ರಣಬ್ ಮುಖರ್ಜಿ 2012 ರಿಂದ 2017 ರವರೆಗೂ ಭಾರತದ 13ನೇ ರಾಷ್ಟ್ರಪತಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next