ಮಾಗಡಿ: ರಾಗಿ ಖರೀದಿ ಕೇಂದ್ರದಲ್ಲಿ ಪ್ರತಿ ಎಕರೆಗೆ 15 ಕ್ವಿಂಟಲ್ ರಾಗಿಯನ್ನು ಖರೀದಿಸುವುದಾಗಿ ತಿಳಿಸಿದ್ದ ಅಧಿಕಾರಿಗಳು, ಈಗ 10 ಕ್ವಿಂಟಾಲ್ ಖರೀದಿಸುವುದಾಗಿ ಹೇಳಿದ್ದರಿಂದ ಆಕ್ರೋಶಗೊಂಡ ರೈತರು ರಾಗಿ ಖರೀದಿ ಕೇಂದ್ರಕ್ಕೆ ಬೀಗ ಜಡಿದು ಧಿಡೀರ್ ಪ್ರತಿಭಟನೆ ನಡೆಸಿದರು.
ಪಟ್ಟಣದ ರಾಗಿ ಕೇಂದ್ರ ಬಳಿ ತಾಲೂಕು ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ರೈತರು ಒಗ್ಗೂಡಿ ಪ್ರತಿಭಟನಾ ಧರಣಿ ನಡೆಸಿದರು. ಸುದ್ದಿಗಾರರೊಂದಿಗೆ ತಾಲೂಕು ರೈತ ಸಂಘದ ಅಧ್ಯಕ್ಷ ಹೊಸಪಾಳ್ಯದ ಲೋಕೇಶ್ ಮಾತನಾಡಿ, ರಾಗಿ ತಾಲೂಕಿನ ಪ್ರಮುಖ ಬೆಳೆಯಾಗಿದೆ. ದಿಢೀರನೆ ರಾಗಿ ಖರೀದಿಯನ್ನು 15 ಕ್ವಿಂಟಲ್ ಬದಲಾಗಿ 10ಕ್ಕೆ ಇಳಿಸಿರುವುದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಈಗಾಗಲೇ ನೂರಾರು ರೈತರು ಅನ್ ಲೈನ್‌ನಲ್ಲಿ ನೊಂದಾಣಿ ಮಾಡಿದ್ದು, 15 ಕ್ವಿಂಟಲ್ ಖರೀದಿಯ ಸ್ವೀಕೃತಿ ಪಡೆದಿದ್ದಾರೆ. ಆದರೆ ಈಗ 10 ಕ್ವಿಂಟಲ್ ಖರೀದಿಸುವುದಾಗಿ ಹೇಳುತ್ತಿರುವುದು ಇದು ಸರಿಯಾದ ಕ್ರಮವಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಜೈಲಿಗೆ ಹೋಗಲು ಸಿದ್ಧ :ಹೊಲಕ್ಕೆ ಭೇಟಿ ನೀಡಿ, ಪಹಣೆಯಲ್ಲಿನ ಬೆಳೆ ನೋಡಿ 15 ಕ್ವಿಂಟಲ್ ಖರೀದಿಸುವಂತೆ ರೈತರ ಪಟ್ಟು ಹಿಡಿದರು. ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡ ಬೇಕು. ಖರೀದಿಯ ಸಮಯ ನಿಗದಿಪಡಿಸಿ ರೈತರಿಗೆ ನ್ಯಾಯ ದೊರಕಿಸಿ ಕೊಡಬೇಕು. ರಾಗಿ ಖರೀದಿಯನ್ನು ಇನ್ನೂ ಮೂರು ತಿಂಗಳು ಹೆಚ್ಚುವರಿಯಾಗಿ ವಿಸ್ತರಿಸಬೇಕು. ನ್ಯಾಯ ಸಿಗುವರೆಗೂ ಇಲ್ಲಿಂದ ತೆರಳುವುದಿಲ್ಲ. ನಮ್ಮ ವಿರುದ್ಧ ದೂರು ನೀಡಿ ನಾವು ಜೈಲಿಗೆ ಹೋಗಲು ಸಿದ್ಧರಿದ್ದೇವೆ ಎಂದರು.
10 ಕ್ವಿಂಟಲ್ ಖರೀದಿಸಲು ಅದೇಶ: ಸ್ಥಳಕ್ಕೆ ಭೇಟಿದ ನೀಡಿದ ಆಹಾರ ಇಲಾಖೆ ಶಿರಸ್ತೇ ದಾರ್ ಶ್ರೀಧರ್ ಮಾತನಾಡಿ, ಸರ್ಕಾರ ರೈತ ರಿಂದ ಪ್ರತಿ ಎಕರೆಗೆ 15 ಕ್ವಿಂಟಲ್ ರಾಗಿ ಖರೀದಿಸಲು ಅವಕಾಶ ಕಲ್ಪಿಸಿತ್ತು. ಈಗ ಅದನ್ನು ಮಾರ್ಪಾಟು ಮಾಡಿ 10 ಕ್ವಿಂಟಲ್ ಖರೀದಿಸಲು ಅದೇಶ ನೀಡಿದ್ದಾರೆ. ಸರ್ಕಾರ ಆದೇಶದಂತೆ ಪ್ರತಿ ಎಕರೆಗೆ 10 ಕ್ವಿಂಟಲ್ ರಾಗಿ ಖರೀದಿಸುವುದಾಗಿ ತಿಳಿಸಿದ್ದೇವೆ. ಆದರೆ ರೈತರು 15 ಕ್ವಿಂಟಲ್ ರಾಗಿ ಖರೀದಿಸುವಂತೆ ಪಟ್ಟು ಹಿಡಿದು ಪ್ರತಿಭಟನೆ ಮಾಡುತ್ತಿದ್ದಾರೆ. ಸರ್ಕಾರದ ಆದೇಶ ಪಾಲಿಸುವುದು ನಮ್ಮ ಕರ್ತವ್ಯ ಎಂದರು.
ತಾಲೂಕು ರೈತ ಸಂಘದ ಅಧ್ಯಕ್ಷ ಲೋಕೇಶ್ ಶಿರಸ್ತೇದಾರ ಶ್ರೀಧರ್ ಮನವಿಗೆ ಸ್ಪಂದಿಸಿ ಕೇಂದ್ರ ಜಡಿದಿದ್ದ ಬೀಗ ತೆಗೆದು ಕೊಟ್ಟರು. ಇದೇ ವೇಳೆ ಮಾಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು. ರೈತ ಸಂಘದ ಪ್ರಧಾನ ಕಾರ್ಯ ದರ್ಶಿಗಳಾದ ಮಧು ಗೌಡ, ಮಂಜುನಾಥ್, ರಂಗಪ್ಪ, ದೊಡ್ಡ ರಂಗಯ್ಯ,ರಂಗಸ್ವಾಮಯ್ಯ ಬ್ಯಾಡರಹಳ್ಳಿ ಶಿವರಾಮಯ್ಯ, ರವಿಕುಮಾರ್, ರವಿಚಂದ್ರ, ಗಿರಿಧರ್, ಶ್ರೀನಿವಾಸ್, ರಾಯರು ಇದ್ದರು.