Advertisement
ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಕಳೆದ ಒಂದು ತಿಂಗಳಿಂದ ನಿಯಂತ್ರಣಕ್ಕೆ ಬರುತ್ತಿದ್ದು, ಪಾಸಿಟಿವ್ ಪ್ರಮಾಣ ಶೇ. 0.2ಕ್ಕೆ ಇಳಿದಿದ್ದರೆ, ಸೋಂಕಿನಿಂದ ಗುಣಮುಖರಾಗುತ್ತಿರುವವರ ಪ್ರಮಾಣ ಶೇ.98ರಷ್ಟಾಗಿದೆ. ಇದರಿಂದಾಗಿ ಜಿಲ್ಲೆಯ ಜನರು ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ. ಮುಂಬರುವ ದೀಪಾವಳಿ ಹಬ್ಬ ಸೇರಿದಂತೆ ಚಳಿಗಾಲದಲ್ಲಿ ಜನರು ಮೈ ಮರೆಯದೇ ಮುಂಜಾಗ್ರತೆ ವಹಿಸಿದರೆ ಜಿಲ್ಲೆ ಮತ್ತೆ ಕೊರೊನಾ ಮುಕ್ತವಾಗುವುದಲ್ಲಿ ಸಂದೇಹವೇ ಇಲ್ಲ. ಆದ್ದರಿಂದ ಜನರು ನಿರ್ಲಕ್ಷ್ಯ ತೋರದೇ ಮುಂಜಾಗ್ರತೆ ವಹಿಸುವುದು ಅಗತ್ಯವಿದೆ.
Related Articles
Advertisement
ನಿರಂತರ ಜಾಗೃತಿ: ಜಿಲ್ಲೆಯಲ್ಲಿ ಕೋವಿಡ್ ಸದ್ಯ ನಿಯಂತ್ರಣಕ್ಕೆ ಬಂದಿರುವುದು ಸ್ವಲ್ಪ ಮಟ್ಟಿಗೆ ಆತಂಕ ದೂರವಾಗಿಸಿದೆ. ವಾರಿಯರ್ಸ್ ಪರಿಶ್ರಮವೂ ಇದರ ಹಿಂದಿದೆ. ಸಾಕಷ್ಟು ವಾರಿಯರ್ಸ್‌ಗಳು ಸೋಂಕು ತಗು ಲಿದರೂ ಜಗ್ಗದೇ ಕೋವಿಡ್ ವಿರುದ್ಧ ಹೋರಾಟದಲ್ಲಿ ಸಕ್ರಿಯವಾಗಿದ್ದಾರೆ. ಜನರು ಸ್ವಯಂ ಜಾಗೃತಿ ಗೊಂಡಾಗ ಮಾತ್ರ ಇದರಿಂದ ದೂರವಿರಲು ಸಾಧ್ಯವಿದೆ. ಗುಂಪು ಸೇರದಂತೆ, ಮನೆಯೊಂದ ಹೊರ ಬಂದರೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸಾಕಷ್ಟು ಜಾಗೃತಿ ಮೂಡಿಸಲಾಗಿದೆ. ಪೊಲೀಸ್ ಇಲಾಖೆ ದಂಡ ವಿಧಿಸುತ್ತಿದೆ. ಕೋವಿಡ್ ಜಾಗೃತಿಗಾಗಿ ಹಲವು ಕಾರ್ಯಕ್ರಮ ಕೈಗೊಳ್ಳಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಟೆಸ್ಟ್ ಮಾಡುತ್ತಿರುವುದು, ಸೋಂಕಿತರ ಪ್ರಥಮ ಮತ್ತು ದ್ವಿತೀಯ ಸಂಪರ್ಕಿತರನ್ನು ತಕ್ಷಣ ಪತ್ತೆ ಹಚ್ಚಿ ಪ್ರತ್ಯೇಕಿಸುವಿಕೆ ಮುಂತಾದ ಕ್ರಮಗಳಿಂದ ಕೋವಿಡ್ ಇಳಿಮುಖವಾಗಿದೆ.
5.67ಲಕ್ಷ ರೂ. ದಂಡ ವಸೂಲಿ : ಕೋವಿಡ್ ನಿಯಂತ್ರಣದಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಕಂದಾಯ, ಆರೋಗ್ಯ ಇಲಾಖೆ ನಿರಂತರವಾಗಿ ಶ್ರಮಿಸಿವೆ. ಸುರಕ್ಷತಾ ಕ್ರಮ ಅಳವಡಿಸಿಕೊಳ್ಳುವಂತೆ ನಿರಂತರವಾಗಿ ಜಾಗೃತಿ ಮೂಡಿಸಿದ್ದರ ಪರಿಣಾಮವಾಗಿ
ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ. ಮಾಸ್ಕ್ ಧರಿಸದವರಿಗೆ ಪೊಲೀಸ್ ಇಲಾಖೆ ದಂಡ ವಸೂಲಿ ಮಾಡುತ್ತಿದೆ. ಜನರಿಗೆ ಮಾಸ್ಕ್ ಧರಿಸುವ ಕುರಿತು ಜಾಗೃತಿ ಮೂಡಿಸಲು ಸ್ವತಃ ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣನವರ ಅವರೇ ಬೀದಿಗಳಿದಿದ್ದರು. ಜಿಲ್ಲೆಯಲ್ಲಿ ಮಾಸ್ಕ್ ಧರಿಸದೇ ಸಂಚರಿಸುತ್ತಿದ್ದ 5,524 ಜನರನ್ನು ಪತ್ತೆ ಮಾಡಿ ಅವರಿಂದ 5,67,200 ರೂ. ದಂಡವನ್ನು ಪೊಲೀಸ್ ಇಲಾಖೆ ವಸೂಲಿ ಮಾಡಿದೆ.
160 ಸಕ್ರಿಯ ಪ್ರಕರಣ : ಜಿಲ್ಲೆಯಲ್ಲಿ ಮೇ 3 ರಂದು ಕೋವಿಡ್ ಸೋಂಕಿನ ಮೊದಲ ಪ್ರಕರಣ ಪತ್ತೆಯಾಗಿತ್ತು. ನಂತರದ ದಿನಗಳಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಏರುಗತಿಯಲ್ಲಿಯೇ ಸಾಗಿ ಸದ್ಯ ಸೋಂಕಿತರ ಸಂಖ್ಯೆ 10 ಸಾವಿರದ ಗಡಿ ದಾಡಿದೆ. ಆದರೆ, ಜಿಲ್ಲೆಯಲ್ಲಿ ಈವರೆಗೆ ಸೋಂಕಿತರ ಪೈಕಿ 10218 ಜನರು ಗುಣಮುಖರಾಗಿ ಬಿಡುಗಡೆ ಹೊಂದ್ದಿದ್ದು, ಇನ್ನು ಕೇವಲ 160 ಪಕರಣಗಳು(ನ.5ರವರೆಗೆ)ಮಾತ್ರ ಸಕ್ರಿಯವಾಗಿವೆ. ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಇದೇ ರೀತಿ ಇಳಿಮುಖಗೊಂಡಲ್ಲಿ ಇನ್ನು ಕೆಲವೇ ದಿನಗಳಲ್ಲಿ ಕೋವಿಡ್ ಮುಕ್ತ ಜಿಲ್ಲೆಯಾಗುವುದರಲ್ಲಿ ಸಂದೇಹವಿಲ್ಲ.
-ವೀರೇಶ ಮಡ್ಲೂರ