Advertisement
ಕೊರೊನಾ ಸೋಂಕು ವ್ಯಾಪಿಸಿ ಶಾಲಾ ಕಾಲೇಜುಗಳು ಬಂದ್ ಆಗಿದ್ದರೂ 2020-21, 2021-22ನೇ ಶೈಕ್ಷಣಿಕ ವರ್ಷಗಳಲ್ಲಿ ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದರು. ಇದರಿಂದ ಕನ್ನಡ ಶಾಲೆಗಳಿಗೆ ಮರುಜೀವ ಬಂದಂತಾಗಿತ್ತು. ಆದರೆ, ಈ ಸಲ ಸರ್ಕಾರಿ ಶಾಲೆಗಳ ದಾಖಲಾತಿ ಕುಸಿದಿರುವುದು ಆತಂಕಕ್ಕೆ ಕಾರಣವಾಗಿದೆ. 2021-22ನೇ ಸಾಲಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಸೇರಿದಂತೆ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ 2,86,617 ಮಕ್ಕಳು ಪ್ರವೇಶ ಪಡೆದಿದ್ದರು. ಕೊರೊನಾ ಸಂದರ್ಭದಲ್ಲಿನ ಕಲಿಕೆಯ ಹಿಂದುಳಿಯುವಿಕೆ ತುಂಬುವ ಸಲುವಾಗಿ ಈ ಸಲ ಮೇ 16ರಿಂದಲೇ ತರಗತಿ ಆರಂಭಿಸಿ ಕಲಿಕಾ ಚೇತರಿಕೆ ಆರಂಭಿಸಲಾಗಿತ್ತು. ಶಿಕ್ಷಣ ಇಲಾಖೆಯ ಸ್ಯಾಟ್ಸ್ (ವಿದ್ಯಾರ್ಥಿ ಸಾಧನೆಯ ಟ್ರ್ಯಾಕಿಂಗ್ ವ್ಯವಸ್ಥೆ ) ಅಂಕಿ ಅಂಶದ ಪ್ರಕಾರ ಈ ಸಲ ಪ್ರವೇಶ ಪಡೆದ ಮಕ್ಕಳ ಸಂಖ್ಯೆ 2,65,023. ಅಂದರೆ, ಕಳೆದ ವರ್ಷಕ್ಕಿಂತ 21,594 ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಕಡಿಮೆಯಾಗಿದ್ದಾರೆ.
Related Articles
Advertisement
ಎಲ್ಲ ತಾಲೂಕುಗಳಲ್ಲಿ ಇಳಿಕೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಸರ್ಕಾರಿ ಶಾಲೆಗಳ ಪ್ರವೇಶಾತಿ ಪ್ರಮಾಣದಲ್ಲಿ ಕುಸಿತ ಕಂಡಿದೆ. ಬ್ಯಾಡಗಿ ತಾಲೂಕಿನಲ್ಲಿ ಕಳೆದ ವರ್ಷ 25,455 ಮಕ್ಕಳಿದ್ದರೆ, ಈ ಸಲ 23,381ಕ್ಕೆ ಕುಸಿದಿದೆ. ಹಾನಗಲ್ಲ ತಾಲೂಕಿನಲ್ಲಿ ಹಿಂದಿನ ಸಾಲಿನಲ್ಲಿ 46,259 ಮಕ್ಕಳಿದ್ದರೆ, ಈ ಸಲ 43 ಸಾವಿರ ವಿದ್ಯಾರ್ಥಿಗಳಿದ್ದಾರೆ. ಹಾವೇರಿ ತಾಲೂಕಿನಲ್ಲಿ 21-22ನೇ ಸಾಲಿನಲ್ಲಿ 53,194 ಮಕ್ಕಳಿದ್ದರೆ, ಈ ವರ್ಷ 49,579 ಮಕ್ಕಳಿದ್ದಾರೆ. ಹಿರೇಕೆರೂರಿನಲ್ಲಿ ಕಳೆದ ವರ್ಷ 36,248 ಮಕ್ಕಳಿದ್ದರೆ, ಈ ಸಾಲಿಗೆ 33,491 ಮಕ್ಕಳಿದ್ದಾರೆ. ಕಳೆದ ವರ್ಷ ರಾಣಿಬೆನ್ನೂರು ತಾಲೂಕಿನಲ್ಲಿ 60,014 ಮಕ್ಕಳಿದ್ದರೆ, ಈ ಸಲ 55,275 ಮಕ್ಕಳು ದಾಖಲಾಗಿದ್ದಾರೆ. ಸವಣೂರು ತಾಲೂಕಿನಲ್ಲಿ ಕಳೆದ ಸಲ 30,017 ಮಕ್ಕಳಿದ್ದು, ಈ ಬಾರಿ 27,372 ವಿದ್ಯಾರ್ಥಿಗಳಿದ್ದಾರೆ. ಶಿಗ್ಗಾವಿ ತಾಲೂಕಿನಲ್ಲಿ ಕಳೆದ ಸಾಲಿನಲ್ಲಿ 35,372 ಮಕ್ಕಳಿದ್ದು, ಈ ವರ್ಷ 32,925 ವಿದ್ಯಾರ್ಥಿಗಳಿದ್ದಾರೆ. ಎಲ್ಲ ತಾಲೂಕುಗಳಲ್ಲಿ ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಇಳಿಕೆಯಾಗಿದೆ.
ವಿದ್ಯಾರ್ಥಿಗಳ ದಾಖಲಾತಿಯನ್ನು ಸ್ಯಾಟ್ಸ್‌ನಲ್ಲಿ ಅಪ್‌ಲೋಡ್ ಮಾಡುವ ಪ್ರಕ್ರಿಯೆ ಇನ್ನು ನಡೆಯುತ್ತಿದೆ. ಅಲ್ಲದೇ ಮಕ್ಕಳ ಪ್ರವೇಶ ಪ್ರಕ್ರಿಯೆ ಜು. 15ರವರೆಗೂ ಇದೆ. ಆದರೂ ಕಳೆದ ವರ್ಷಕ್ಕೆ ಹೋಲಿಸಿದರೆ ಸರ್ಕಾರಿ ಶಾಲೆಗಳಲ್ಲಿ ಪ್ರವೇಶಾತಿ ಕಡಿಮೆಯಾಗಿದೆ. ಅನೇಕ ಮಕ್ಕಳು ಖಾಸಗಿ ಶಾಲೆಗಳತ್ತ ಹೋಗಿದ್ದಾರೆ. –ಬಿ.ಎಸ್. ಜಗದೀಶ್ವರ, ಡಿಡಿಪಿಐ ಹಾವೇರಿ