Advertisement

ಬಸ್‌ ಸಂಚಾರದಲ್ಲಿ  ಮತ್ತೆ ಇಳಿಮುಖ

08:19 PM Apr 20, 2021 | Team Udayavani |

ಹಾವೇರಿ: ಸಾರಿಗೆ ನೌಕರರ ಮುಷ್ಕರದ 13ನೇ ದಿನವಾದ ಸೋಮವಾರ ಬಸ್‌ಗಳ ಸಂಚಾರದಲ್ಲಿ ಮತ್ತೆ ಇಳಿಮುಖವಾಗಿದೆ. ರವಿವಾರ ಕರ್ತವ್ಯಕ್ಕೆ ಹಾಜರಾಗಿದ್ದವರು ಸೋಮವಾರ ಗೈರಾಗಿದ್ದಾರೆ.

Advertisement

ಜಿಲ್ಲೆಯಲ್ಲಿ ಸೋಮವಾರ 86 ಬಸ್‌ ರಸ್ತೆಗಿಳಿದಿದ್ದವು. ರವಿವಾರ 140 ಬಸ್‌ ಸಂಚರಿಸಿದ್ದರಿಂದ ಮುಷ್ಕರದ ನಡುವೆಯೂ ಪ್ರಯಾಣಿಕರಿಗೆ ಅನುಕೂಲವಾಗಿತ್ತು. 280ಕ್ಕೂ ಹೆಚ್ಚು ಸಿಬ್ಬಂದಿ ಕೆಲಸಕ್ಕೆ ಹಾಜರಾಗಿದ್ದರು. ಆದರೆ, ಅವರಲ್ಲಿ ಅನೇಕರು ಸೋಮವಾರ ಮತ್ತೆ ಕರ್ತವ್ಯಕ್ಕೆ ಹಾಜರಾಗಿಲ್ಲ. ಮುಷ್ಕರದಲ್ಲಿ ಪಾಲ್ಗೊಂಡಿರುವ ನೌಕರರು ಕರ್ತವ್ಯಕ್ಕೆ ಹಾಜರಾದವರ ಮನವೊಲಿಸಿ ಮತ್ತೆ ಮುಷ್ಕರದಲ್ಲಿ ಪಾಲ್ಗೊಳ್ಳುವಂತೆ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ.

ಒಂದೆರಡು ದಿನ ಕೆಲಸಕ್ಕೆ ಹಾಜರಾಗಬೇಡಿ, ಎಲ್ಲವೂ ಸರಿಯಾಗುತ್ತದೆ ಎಂದು ಹೇಳಿ ಕೆಲಸಕ್ಕೆ ಹೋಗುವವರನ್ನು ತಡೆದಿದ್ದಾರೆ. ಇದಕ್ಕೆ ಒಪ್ಪಿ ಅನೇಕರು ಕೆಲಸಕ್ಕೆ ಹಾಜರಾಗಿಲ್ಲ. 86 ಬಸ್‌ ಸಂಚಾರ: ಜಿಲ್ಲೆಯ 6 ಡಿಪೋಗಳಿಂದ ಸೋಮವಾರ 86 ಬಸ್‌ ಸಂಚರಿಸಿದವು. ಹಾವೇರಿಯಿಂದ-14, ಹಿರೇಕೆರೂರು-28, ರಾಣಿಬೆನ್ನೂರು-10, ಹಾನಗಲ್ಲ-8, ಬ್ಯಾಡಗಿ-10, ಸವಣೂರು ಡಿಪೋದಿಂದ 8 ಬಸ್‌ಗಳು ಸಂಚರಿಸಿದವು. ರವಿವಾರ ಎಲ್ಲ ಡಿಪೋಗಳಿಂದಲೂ ಇದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ಗಳು ಸಂಚರಿಸಿದ್ದವು.

ರಸ್ತೆಗಿಳಿದ ಬಸ್‌ಗಳ ಸಂಖ್ಯೆ ಕಡಿಮೆಯಾದ್ದರಿಂದ ಸೋಮವಾರ ಖಾಸಗಿ ವಾಹನಗಳು ಮತ್ತೆ ಪ್ರಯಾಣಿಕರನ್ನು ಕರೆದೊಯ್ಯುವ ಕೆಲಸ ಮಾಡಿದವು. ಬಸ್‌ ನಿಲ್ದಾಣದಲ್ಲಿ ನಿಂತು ಪ್ರಯಾಣಿಕರನ್ನು ತುಂಬಿಕೊಂಡು ಸಂಚರಿಸಿದವು. ಟೆಂಪೋ, ಟ್ರ್ಯಾಕ್ಸ್‌, ಟಂಟಂ ವಾಹನಗಳ ಮೂಲಕ ಸಾರ್ವಜನಿಕರು ಸಂಚರಿಸುವಂತಾಯಿತು.

Advertisement

Udayavani is now on Telegram. Click here to join our channel and stay updated with the latest news.

Next