Advertisement

ಕೋವಿಡ್‌ನಿಂದಾಗಿ ‘ಮೃತ’ಎಂದು ಘೋಷಿಸಲ್ಪಟ್ಟ ವ್ಯಕ್ತಿ 2 ವರ್ಷಗಳ ಬಳಿಕ ಜೀವಂತವಾಗಿ ಪ್ರತ್ಯಕ್ಷ

12:09 PM Apr 16, 2023 | Suhan S |

ಮಧ್ಯಪ್ರದೇಶ: ಕೋವಿಡ್‌ ನಿಂದ ಸಾವಿರಾರು ಮಂದಿ ಮೃತಪಟ್ಟಿದ್ದಾರೆ. ಎಷ್ಟೋ ಮಂದಿ ಅನಾಥರಾಗಿದ್ದಾರೆ. ತನ್ನವರನ್ನು ಕಳೆದುಕೊಂಡು ಇನ್ನು ಆಘಾತದಲ್ಲಿದ್ದಾರೆ. ಕೊನೆಯ ಬಾರಿ ಮುಖವನ್ನೂ ನೋಡಲು ಸಿಗದಿರುವವರು ಇದ್ದಾರೆ. ಮಧ್ಯ ಪ್ರದೇಶದಲ್ಲಿ ನಡೆದ ಘಟನೆಯೊಂದು ಒಮ್ಮೆ ಎಂಥವವರಿಗೂ ಅಚ್ಚರಿ ಮೂಡಿಸವುದು ಖಂಡಿತ.

Advertisement

ಕೋವಿಡ್‌ ನಿಂದ ಮೃತಪಟ್ಟಿದ್ದ ವ್ಯಕ್ತಿಯೊಬ್ಬ ಎರಡು ವರ್ಷಗಳ ಬಳಿಕ ಜೀವಂತವಾಗಿ ಮನೆಗೆ ಬಂದರೆ ಏನಾಗುತ್ತದೆ? ಇದನ್ನು ಕೇಳುವಾಗ ಇಲ್ಲ ಇದು ಅಸಾಧ್ಯವೆಂದು ಅನ್ನಿಸಬಹುದು. ಆದರೆ ಇದು ನಡೆದಿರುವುದು ಮಾತ್ರ ಸತ್ಯ.

ಅದು ಕೋವಿಡ್‌ ನ ಎರಡನೇ ಅಲೆ (2021). ಅನೇಕ ಸಾವು – ನೋವುಗಳು ಸಂಭವಿಸುತ್ತಿದ್ದ ದಿನಗಳು. ಮಾಸ್ಕ್‌ ಕಡ್ಡಾಯ, ಸಾಮಾಜಿಕ ಅಂತರ ಪಾಲನೆ ಆಗುತ್ತಿದ್ದ ದಿನಗಳು. ಮಧ್ಯಪ್ರದೇಶದ ಧಾರ್ ಜಿಲ್ಲೆಯವರಾದ ಕಮಲೇಶ್ ಪಾಟಿದಾರ್ ಎಂಬಾತನಿಗೆ ಕೋವಿಡ್‌ ಸೋಂಕು ಕಾಣಿಸಿಕೊಂಡಿದೆ. ತನ್ನ ಕುಟುಂಬದಿಂದ ದೂರವಾಗಿ ಕಮಲೇಶ್ ಪಾಟಿದಾರ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ತನ್ನ ಗಂಡ ಹೇಗಿದ್ದಾರೆ ಎನ್ನುವ ಚಿಂತೆಯಲ್ಲಿ ಪತ್ನಿ, ತನ್ನ ಮಗ ಬೇಗ ಗುಣಮುಖನಾಗಲಿ ಎನ್ನುವ ಚಿಂತೆಯಲ್ಲಿ ಪೋಷಕರು ಮನೆಯಲ್ಲಿರುವಾಗ, ಸ್ಥಳೀಯ ಆಡಳಿತದ ಅಧಿಕಾರಿಗಳು, ನಿಮ್ಮ ಮಗ ಕೋವಿಡ್‌ ನಿಂದ ಮೃತಪಟ್ಟಿದ್ದಾರೆ. ಈಗಿನ ನಿಯಮದಂತೆ ಅವರ ಅಂತಿಮ ವಿಧಿ ವಿಧಾನಗಳನು ನಾವು ನೆರವೇರಿಸಿದ್ದೇವೆ ಎಂದು ಮನೆಯವರಿಗೆ ಆಘಾತಕಾರಿ ವಿಚಾರವನ್ನು ಹೇಳಿದ್ದಾರೆ.

ಇದನ್ನೂ ಓದಿ: Ganguly – Virat ನಡುವೆ ಮುಗಿಯದ ಶೀತಲ ಸಮರ: RCB- DC ಪಂದ್ಯದಲ್ಲಿ ಆಗಿದ್ದೇನು?

Advertisement

ನಿನ್ನೆಯವರೆಗೂ ಇದ್ದ ಮಗನಿಗೆ ಕೋವಿಡ್‌ ಬಂದು ಆತ ನಮ್ಮಿಂದ ದೂರವಾದ ಎನ್ನುವ ಚಿಂತೆಯಲ್ಲಿಯೇ ಕುಟುಂಬವಿತ್ತು. ಎರಡು ವರ್ಷದ ಬಳಿಕ ಅಂದರೆ 2023 ( ಇತ್ತೀಚೆಗೆ) ಕೋವಿಡ್‌ ನಿಂದ ಮೃತಪಟ್ಟಿದ್ದ ಎನ್ನಲಾಗಿದ್ದ ಕಮಲೇಶ್ ಪಾಟಿದಾರ್ ಜೀವಂತವಾಗಿ ತನ್ನ ಮನೆಯವರ ಮುಂದೆ ಬಂದಿದ್ದಾರೆ..!

ಮಗನನ್ನು ನೋಡಿ ಏನು ಹೇಳಲೂ ಆಗದ ಸ್ಥಿತಿಯಲ್ಲಿ ಹಾಗೂ ಇದು ಹೇಗೆ ಸಾಧ್ಯವಾಯಿತು ಎನ್ನುವ ಪ್ರಶ್ನೆಯನ್ನು ಇಟ್ಟುಕೊಂಡು ಈ ಬಗ್ಗೆ ಕಣ್ವನ್ ಪೊಲೀಸ್ ಠಾಣೆಗೆ ಕುಟುಂಬ ಮಾಹಿತಿ ನೀಡಿದೆ.

ಈ ವೇಳೆ ಕಮಲೇಶ್ ಪಾಟಿದಾರ್ ಅವರನ್ನು ಕೇಳಿದಾಗ ಅವರು, ನಡೆದ ಎಲ್ಲಾ ಘಟನೆಯನ್ನು ವಿವರಿಸಿದ್ದಾರೆ.

ಎರಡು ವರ್ಷ ಎಲ್ಲಿ ಇದ್ದರು ಕಮಲೇಶ್? :

ನಾನು ಎರಡು ವರ್ಷಗಳಿಂದ ಗುಜರಾತಿನ ಅಹಮದಬಾದ್‌ ನ ಗ್ಯಾಂಗ್‌ ವೊಂದರ ವಶದಲ್ಲಿದ್ದೆ. ಆ ಗ್ಯಾಂಗ್‌ ನನ್ನ ಪ್ರಜ್ಞೆ ತಪ್ಪುವಂತೆ ಪ್ರತಿದಿನ ಇಂಜೆಕ್ಷನ್‌ ನೀಡುತ್ತಿತ್ತು. ಎರಡು ವರ್ಷ ಗ್ಯಾಂಗ್‌ ನಿಂದ ಚಿತ್ರಹಿಂಸೆ ಅನುಭವಿಸಿದೆ. ಶುಕ್ರವಾರ ( ಏ.14 ರಂದು) ಗ್ಯಾಂಗ್‌ ಕಾರಿನಲ್ಲಿ ನನ್ನನು ಎಲ್ಲೋ ಕರೆದುಕೊಂಡು ಹೋಗಿತ್ತು. ದಾರಿ ಮಧ್ಯ ಹೊಟೇಲ್‌ ಗೆ ಹೋಗಲು ಕಾರನ್ನು ನಿಲ್ಲಿಸಿದ್ದಾರೆ. ಅವರು ಅತ್ತ ಹೋದಾಗ , ಈ ಕಡೆಯಿಂದ ಅಹಮದಬಾದ್‌ ಟು ಇಂದೋರ್‌ ಹೋಗುವ ಬಸ್ಸೊಂದು ಬಂದಿದೆ. ಕೂಡಲೇ ನಾನು ಆ ಬಸ್ಸಿಗೆ ಹತ್ತಿದೆ. ಆ ಬಳಿಕ ತಡರಾತ್ರಿ ಬಸ್ ಸರ್ದಾರ್‌ಪುರ ತಲುಪಿತು. ನಾನು ಅಲ್ಲಿಂದ ಕೆಲವರ ಸಹಾಯವನ್ನು ಕೋರಿ ವಡ್ವೇಲಿಯಲ್ಲಿರುವ ನನ್ನ ಸಂಬಂಧಿಕರ ಮನೆಗೆ ತಲುಪಿದೆ ಎಂದು ಕಮಲೇಶ್ ಹೇಳಿದ್ದಾರೆ.

ಸಂಬಂಧಿಕರು ಈ ವಿಚಾರವನ್ನು‌ ಕಮಲೇಶ್‌ ಅವರ ಮನೆಯವರಿಗೆ ತಿಳಿಸಿದ್ದಾರೆ. ಅವರು ಖುಷಿಯಿಂದ ಮಾತೇ ಬಾರದೇ ಮಗನನ್ನು ನೋಡಿ ಭಾವುಕರಾಗಿ ಅಪ್ಪಿಕೊಂಡಿದ್ದಾರೆ. ಎರಡು ವರ್ಷದಿಂದ ವಿಧವೆಯಂತೆ ಬದುಕುತ್ತಿದ್ದ ಪತ್ನಿ ಈ ಕ್ಷಣವನ್ನು ನೋಡಿ ಒಮ್ಮೆಗೆ ಮೌನವಾಗಿ, ಪತಿಯನ್ನು ನೋಡಿ ಅತೀವ ಸಂತಸಪಟ್ಟಿದ್ದಾರೆ.

ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next