ಆಳಂದ: ಮಳೆ, ಬೆಳೆ ಇಲ್ಲದೆ, ಸಂಕಷ್ಟದಲ್ಲಿರುವ ತಾಲೂಕಿನ ಜನ ಜಾನುವಾರುಗಳಿಗೆ ಸಕಾಲಕ್ಕೆ ನೆರವು ಒದಗಿಸಲು ಸರ್ಕಾರ ಕೂಡಲೇ ಬರ ಪೀಡಿತ ತಾಲೂಕು ಘೋಷಣೆ ಮೂಲಕ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ (ಕೆಪಿಆರ್‌ಎಸ್) ತಾಲೂಕು ಸಮಿತಿ ಕಾರ್ಯಕರ್ತರು ಪ್ರತಿಭಟನೆ ಪಟ್ಟಣದಲ್ಲಿ ಗುರುವಾರ ಸಮಿತಿ ಅಧ್ಯಕ್ಷ ಲಕ್ಷ್ಮೀಪುತ್ರ
ಹೇಮಾಜಿ ನೇತೃತ್ವದಲ್ಲಿ ರೈತಪರ ಹಾಗೂ ಕೂಲಿ ಕಾರ್ಮಿಕರ ಬೇಡಿಕೆ ಮುಂದಿಟ್ಟು ಬಸ್ ನಿಲ್ದಾಣ ಮೂಲಕ ತಹಶೀಲ್ದಾರ್
ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಆರ್‌ಎಸ್ ರಾಜ್ಯ ಅಧ್ಯಕ್ಷ ಮಾರುತಿ ಮಾನ್ಪಡೆ, ಬರ ಪಟ್ಟಿಯಿಂದ ಆಳಂದ ತಾಲೂಕನ್ನು ಕೈ ಬಿಟಿರುವ ಕ್ರಮ ಸರಿಯಲ್ಲ. ಸರ್ಕಾರ ಜಿಲ್ಲಾಡಳಿತದಿಂದ ನೈಜ ವರದಿ ತರಿಸಿಕೊಂಡು ಕೂಡಲೇ ಬರ ಘೋಷಿಸಿ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬರ ಘೋಷಣೆ ಸೇರಿ ಇನ್ನಿತರ ಬೇಡಿಕೆ ಈಡೇರಿಕೆಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವತನಕ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಮುಂದುವರಿಯಲಿದೆ. ಸರ್ಕಾರ ಸ್ಪಂದಿಸದೆ ಹೋದಲ್ಲಿ ಆಳಂದ ಬಂದ್ ಕರೆ ಸೇರಿದಂತೆ ಹಂತ, ಹಂತವಾಗಿ ಹೋರಾಟದ ಸ್ವರೂಪ ಬದಲಾಗಲಿದೆ ಎಂದು ಅವರು ಎಚ್ಚರಿಸಿದರು.
ಮುಖಂಡ ರಮೇಶ ಲೋಹಾರ ಮಾತನಾಡಿ, ಶಾಸಕರು ಮತ್ತು ಅಧಿಕಾರಿಗಳು ಜನ ವಿರೋಧಿ ಕೆಲಸ ಮಾಡಿದ್ದಾರೆ. ತಾಲೂಕು ಬರ ಪಟ್ಟಿಗೆ ಸೇರಿಸಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಬೆಳೆ ಪರಿಹಾರ, ಬೆಳೆವಿಮೆ ನೀಡಬೇಕು ಎಂದು ಒತ್ತಾಯಿಸಿದರು.
ಪ್ರಸ್ತಕ ಸಾಲಿನ ಮುಂಗಾರು, ಹಿಂಗಾರು ಬೆಳೆ ನಷ್ಟವಾಗಿದ್ದು, ಬೆಳೆವಿಮೆ ಜಾರಿಗೊಳಿಸಬೇಕು. 2016ನೇ ಸಾಲಿನಲ್ಲಿ ಬೆಳೆ ವಿಮೆಯಿಂದ ವಂಚತವಾಗಿರುವ ಕವಲಗಾ, ಬೋಧನ, ನಿಂಬಾಳ ಗ್ರಾಪಂ ವ್ಯಾಪ್ತಿಯ ರೈತರಿಗೆ ಬೆಳೆವಿಮೆ ನೀಡಬೇಕು. ತಾಲೂಕಿನ ಜಾನುವಾರುಗಳಿಗೆ ಮೇವು ಒದಗಿಸಬೇಕು. ಕೃಷಿ ಕೂಲಿ ಕಾರ್ಮಿಕರಿಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದ ತಕ್ಷಣವೇ ಕೆಲಸ ಒದಗಿಸಬೇಕು ಎಂದು ಆಗ್ರಹಿಸಿದರು.
ಕೆಪಿಆರ್‌ಎಸ್ ತಾಲೂಕು ಸಮಿತಿ ಪ್ರಧಾನ ಕಾರ್ಯದರ್ಶಿ ಕಲ್ಯಾಣಿ ತುಕಾಣಿ, ಸಾಯಬಣ್ಣ ನಿಂಬಾಳ, ಜಿಲ್ಲಾ ಮುಖಂಡ ಪಾಂಡುರಂಗ ಮಾವೀನಕರ್ ಪಾಲ್ಗೊಂಡಿದ್ದರು. ಗುಂಡಯ್ಯ ಸ್ವಾಮಿ, ಬಾಬುರಾವ್ ಮಡ್ಡೆ ಇನ್ನಿತರ ಮುಖಂಡರು ಧರಣಿಗೆ ಬೆಂಬಲಿಸಿದರು. ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಬಸವರಾಜ ಎಂ. ಬೆಣ್ಣೆಶಿರೂರ ಮನವಿ ಸ್ವೀಕರಿಸಿದರು. ಮುಖಂಡರು ಅನಿರ್ದಿಷ್ಟಾವಧಿ ಧರಣಿ ಮುಂದುವರಿಸಿದರು.