ಚಿತ್ರದುರ್ಗ: ನೇತ್ರ (ಕಣ್ಣು) ಮತ್ತು ಮಾನವನ ಅಂಗಾಂಗಗಳನ್ನು ರಾಷ್ಟ್ರೀಯ ಸಂಪತ್ತು ಎಂದು ಘೋಷಣೆ ಮಾಡಬೇಕೆಂದು ಡಾ| ಶಿವಮೂರ್ತಿ ಮುರುಘಾ ಶರಣರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಇಲ್ಲಿನ ಪತ್ರಕರ್ತರ ಭವನದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೇನೆ ವತಿಯಿಂದ ಸಂಗೊಳ್ಳಿ ರಾಯಣ್ಣನ ಹುತಾತ್ಮ ದಿನಾಚರಣೆ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ನೇತ್ರದಾನ ಶಿಬಿರವನ್ನು ಉದ್ಘಾಟಿಸಿ ಶರಣರು ಮಾತನಾಡಿದರು.
ದೇಶದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಅಂಧರಿದ್ದಾರೆ. ಕಣ್ಣುಗಳನ್ನು ರಾಷ್ಟ್ರೀಯ ಸಂಪತ್ತು ಎಂದು ಘೋಷಣೆ ಮಾಡಿದರೆ ಇಡೀ ದೇಶದ ಎಲ್ಲ ಅಂಧರ ಬಾಳಿಗೆ ಬೆಳಕು ನೀಡಬಹುದಾಗಿದೆ. ಈ ಕಾರ್ಯ ಮಾಡುವುದರಿಂದ ದೇಶವನ್ನು ಅಂಧ ಮುಕ್ತರನ್ನಾಗಿಸಬಹುದಾಗಿದೆ. ಅದೇ ರೀತಿ ಮಾನವನ ಅಂಗಾಂಗಗಳನ್ನೂ ರಾಷ್ಟ್ರೀಯ ಸಂಪತ್ತು ಎಂದು ಘೋಷಣೆ ಮಾಡುವುದರಿಂದ ಸಾಕಷ್ಟು ಸಂಶೋಧನೆಗಳಿಗೆ ಅವಕಾಶ ಕಲ್ಪಿಸಿದಂತಾಗುವುದಲ್ಲದೆ ಅನೇಕ ರೋಗ, ರುಜಿನಗಳಿಗೆ ಕಡಿವಾಣ ಹಾಕಲು ಸಹಕಾರಿಯಾಗಲಿದೆ . ನೆರೆಯ ಶ್ರೀಲಂಕಾ ದೇಶ ನೇತ್ರಗಳನ್ನು ರಾಷ್ಟ್ರೀಯ ಸಂಪತ್ತು ಎಂದು ಘೋಷಿಸಿರುವುದರಿಂದ ಆ ದೇಶವು ಅಂಧ ಮುಕ್ತ ದೇಶವಾಗಿದೆ. ಅಲ್ಲದೆ ಹೆಚ್ಚಾದ ಕಣ್ಣುಗಳನ್ನು ವಿದೇಶಗಳಿಗೆ ಕಳುಹಿಸಿಕೊಡಲಾಗುತ್ತಿದೆ. ಆದ್ದರಿಂದ ಕೇಂದ್ರ ಸರ್ಕಾರ ಈ ಎಲ್ಲ ಕಾರಣಗಳಿಂದಾಗಿ ಕಣ್ಣು ಮತ್ತು ದೇಹದ ಅಂಗಾಂಗಗಳನ್ನು ರಾಷ್ಟ್ರೀಯ ಸಂಪತ್ತು ಎಂದು ಘೋಷಣೆ ಮಾಡಿ ಸಂರಕ್ಷಿಸಬೇಕಾಗಿದೆ. ಆ ಮೂಲಕ ಭಾರತ ದೇಶ ಅಂಧ ಮುಕ್ತವಾಗಿ ಹೊರ ಹೊಮ್ಮಬೇಕಾಗಿದೆ ಎಂದು ತಿಳಿಸಿದರು.
ಚನ್ನಮ್ಮ ನಾಡಿನಲ್ಲಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಬಲಗೈ ಭಂಟನಾಗಿದ್ದ. ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದನ್ನು ನೆನೆದರೆ ರೋಮಾಂಚನವಾಗುತ್ತದೆ. ರಾಯಣ್ಣ ಒಬ್ಬ ದೇಶದ ಅಪ್ರತಿಮ ದೇಶಭಕ್ತ ಹಾಗೂ ಕನ್ನಡ ನಾಡಿನ ಮೊದಲ ಸ್ವಾತಂತ್ರ್ಯ ಹೋರಾಟಗಾರನಾಗಿದ್ದಾನೆ ಎಂದು ಬಣ್ಣಿಸಿದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೇನೆ ಅಧ್ಯಕ್ಷ ಟಿ. ಆನಂದ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಗೊಳ್ಳಿ ರಾಯಣ್ಣನ ಹುತಾತ್ಮ ದಿನಾಚರಣೆಯನ್ನು ಎರಡು ದಿನಗಳ ಕಾಲ ವಿಶೇಷವಾಗಿ ಆಚರಿಸಲಾಗುತ್ತಿದೆ. ಜ. 24 ಮತ್ತು 26 ರಂದು ನೇತ್ರದಾನ ಶಿಬಿರ, ಹತ್ತು ಮಂದಿ ನಿವೃತ್ತ ಯೋಧರಿಂದ ಮರಣಾ ನಂತರ ಕಣ್ಣುಗಳನ್ನು ದಾನವಾಗಿ ಪಡೆಯಲು ವಾಗ್ಧಾನ ಮಾಡಲಾಗುವುದು. ಇದು ನೇತ್ರದಾನದ ಮಹತ್ವ ಸಾರಲಿದೆ. ಜ. 26 ರಂದು ಸಂಜೆ 6:30ಕ್ಕೆ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ನಿಖೀತ್ ರಾಜ್ ಮೌರ್ಯ ಪಾಲ್ಗೊಳ್ಳಲಿದ್ದಾರೆ. ಈ ಎಲ್ಲ ಕಾರ್ಯಕ್ರಮಗಳಿಗೆ ನಿವೃತ್ತ ಯೋಧರ ಸಂಘದ ಪದಾಧಿಕಾರಿಗಳು ಕೈಜೋಡಿಸಲಿದ್ದಾರೆ ಎಂದರು.
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಕೆ.ಆರ್. ಮಂಜುನಾಥ್, ಗಾಯತ್ರಿ ಶಿವರಾಂ, ಕ್ಯಾಪ್ಟನ್ ಮಹೇಶ್ವರಪ್ಪ, ನಗರಸಭಾ ಸದಸ್ಯ ಶಶಿಧರ, ಪದ್ಮನಾಭಬಾಬು, ಗೋವಿಂದರಾಜು ಮತ್ತಿತರರು ಇದ್ದರು.