Advertisement

ಎಕರೆಗೆ 20 ಸಾವಿರ ಬೆಳೆ ಪರಿಹಾರ ಘೋಷಿಸಿ

12:02 PM Aug 16, 2019 | Suhan S |

ರಾಮದುರ್ಗ: ಉತ್ತರ ಕರ್ನಾಟಕದ ಬಹುತೇಕ ಎಲ್ಲ ಜಿಲ್ಲೆಗಳು ಪ್ರವಾಹದಿಂದ ಜಲಾವೃತಗೊಂಡು ರೈತರು ಹಾಗೂ ಸಾರ್ವಜನಿಕರ ಬದುಕು ಸಂಕಷ್ಟದಲ್ಲಿದ್ದರೂ ಸರಕಾರ ಪರಿಹಾರ ನೀಡಲು ಮುಂದಾಗದಿರುವುದು ನಾಚಿಕೆಗೇಡಿನ ಸಂಗತಿ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಆಕ್ರೋಶ ವ್ಯಕ್ತಪಡಿಸಿದರು.

Advertisement

ಸ್ಥಳೀಯ ಪ್ರಸ್‌ ಕ್ಲಬ್‌ನಲ್ಲಿ ಗುರುವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ಭಾಗಗಳಲ್ಲಿ ತೆರೆಯಲಾದ ಪರಿಹಾರ ಕೇಂದ್ರಗಳು ಸರಕಾರದ ಲೆಕ್ಕದಲ್ಲಿದ್ದರೂ ಅವುಗಳು ನಡೆಯುತ್ತಿರುವುದು ಸಾರ್ವಜನಿಕರು ನೀಡುವ ಆಹಾರ ಪದಾರ್ಥಗಳಿಂದ ಎಂಬುದನ್ನು ಸರಕಾರ ಮರೆಯಬಾರದು. ಬೆಳೆ, ಮನೆ-ಮಠ ಕಳೆದುಕೊಂಡ ನಿರಾಶ್ರಿತರಿಗೆ 3800 ರೂ ಗಳನ್ನು ಪರಿಹಾರವಾಗಿ ನೀಡುತ್ತಿರುವದು ರೈತರನ್ನು ಗೇಲಿ ಮಾಡಿದಂತಾಗುತ್ತದೆ. ಕೂಡಲೇ ಸರಕಾರ ರೈತನ ಉತ್ಪಾದನಾ ಹಾಗೂ ಮಾರುಕಟ್ಟೆ ದರ ಆಧರಿಸಿ ಎಕರೆಯೊಂದಕ್ಕೆ ಕನಿಷ್ಠ 20 ಸಾವಿರ ಬೆಳೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಪಕ್ಕದ ರಾಜ್ಯಗಳಾದ ತಮಿಳುನಾಡು, ಕೆರಳದಲ್ಲಿ ಪ್ರವಾಹ ಉಂಟಾದರೆ ಕೂಡಲೇ ಪ್ರಧಾನಿ ಭೇಟಿ ನೀಡಿ ಸಾವಿರಾರು ಕೋಟಿ ಪರಿಹಾರ ಘೋಷಿಸಿದರು. ಆದರೆ ರಾಜ್ಯದಲ್ಲಿ ಇಬ್ಬರು ಕೇಂದ್ರ ಸಚಿವರು ಬಂದು ಪ್ರವಾಹ ಪರಿಸ್ಥಿತಿ ನೋಡಿ 128 ಕೋಟಿ ಅರೇ ಕಾಸಿನ ಪರಿಹಾರ ನೀಡುವ ಮೂಲಕ ತಾರತಮ್ಯ ತೋರುತ್ತಿರುವುದು ಸರಿಯಲ್ಲ. ರಾಜ್ಯದಲ್ಲಿ ಸುಮಾರು 1 ಲಕ್ಷ ಕೋಟಿ ಹೆಕ್ಟೇರ್‌ ಬೆಳೆ ಹಾನಿಯಾಗಿದೆ. ಇದ್ಯಾವುದನ್ನು ಲೆಕ್ಕಿಸದೇ ರಾಜ್ಯ ಮುಖ್ಯಮಂತ್ರಿಗಳು 10 ಸಾವಿರ ಕೋಟಿ ನಷ್ಟವಾಗಿದೆ ಎಂದು ಕೇಂದ್ರ ಕನಿಷ್ಠ 3 ಸಾವಿರ ಕೋಟಿ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ. ಇದರಿಂದ ಏನೂ ಆಗದು. ಕೂಡಲೇ ಕೇಂದ್ರ ಸರಕಾರ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ತಕ್ಷಣದಲ್ಲಿ ಪರಿಹಾರ ನೀಡಬೇಕು. ಅಲ್ಲದೇ ರಾಜ್ಯ ಸರಕಾರ ರಾಜ್ಯ ವಿಪತ್ತು ನಿಧಿ ಸ್ಥಾಪಿಸಿ 5 ಸಾವಿರ ಕೋಟಿ ಮೀಸಲಿಡಬೇಕು ಎಂದು ಆಗ್ರಹಿಸಿದರು.

ನೀರು ಹಂಚಿಕೆ ವಿಚಾರದಲ್ಲಿ ಕೇಂದ್ರ ಸರಕಾರ ತಾರತಮ್ಯ ಭಾವನೆ ಅನುಸರಿಸುತ್ತಿದ್ದು, ಇದು ಸರಿಯಾದ ಕ್ರಮವಲ್ಲ. ಟ್ರಿಬ್ಯುನಲ್ ರಚನೆ ಮಾಡಿದ್ದರೂ ಅದರಂತೆ ನ್ಯಾಯ ಸಮ್ಮತವಾಗಿ ನಡೆದುಕೊಳ್ಳುತ್ತಿಲ್ಲ. ಕಾವೇರಿ ವಿಚಾರದಲ್ಲಿ ಮಂಡಳಿ ರಚನೆ ಮಾಡಿ ರಾಜ್ಯದ ಹಕ್ಕು ಇಲ್ಲದಂತೆ ಮಾಡಿದೆ. ಕೃಷ್ಣಾ ನದಿಯಿಂದ ಕುಡಿಯಲು ನೀರು ಕೇಳಿದರೂ ಬಿಡದೇ ಇರುವುದು ಯಾವ ನ್ಯಾಯ. ಕೇಂದ್ರ ಸರಕಾರ ಇಂತಹ ತಾರತಮ್ಯ ಧೋರಣೆ ಕೈಬಿಡಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಪ್ಪ, ರಾಜ್ಯ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮದುರ್ಗ, ತಾಲೂಕಾಧ್ಯಕ್ಷ ಜಗದೀಶ ದೇವರಡ್ಡಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next