ಬೆಂಗಳೂರು: ಕೆಪಿಸಿಸಿ ನೂತನ ಅಧ್ಯಕ್ಷರ ನೇಮಕ ಘೋಷಣೆ ಒಂದೆರಡು ದಿನದಲ್ಲಿ ಹೊರಬೀಳಲಿದ್ದು ಡಿ.ಕೆ.ಶಿವಕುಮಾರ್ ಅಥವಾ ಎಂ.ಬಿ. ಪಾಟೀಲ್ ನೇಮಕವಾಗಲಿದ್ದಾರೆ ಎಂದು ಹೇಳಲಾಗಿದೆ. ಹೈಕಮಾಂಡ್ ಈಗಾಗಲೇ ಕೆಪಿಸಿಸಿ ಅಧ್ಯಕ್ಷರ ನೇಮಕ ಕುರಿತು ರಾಜ್ಯ ನಾಯಕರ ಅಭಿಪ್ರಾಯ ಸಂಗ್ರಹಿಸಿರುವ ಆಧಾರದ ಮೇಲೆ ಅಂತಿಮವಾಗಿ ನೇಮಕ ಆದೇಶ ಹೊರಡಿಸಲು ತೀರ್ಮಾನಿಸಿದೆ.
ಶಾಸಕಾಂಗ ಪಕ್ಷದ ನಾಯಕ ಹಾಗೂ ಪ್ರತಿಪಕ್ಷ ನಾಯಕರಾಗಿ ಸಿದ್ದರಾಮಯ್ಯ ಮುಂದುವರಿ ಯಲಿದ್ದಾರೆ. ಈಶ್ವರ್ ಖಂಡ್ರೆ ಕಾರ್ಯಾಧ್ಯಕ್ಷರಾಗಿ ರಲಿದ್ದು, ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ, ಡಾ.ಜಿ.ಪರಮೇಶ್ವರ್ ಸಮನ್ವಯ ಸಮಿತಿ ಅಧ್ಯಕ್ಷರಾಗಲಿದ್ದಾರೆ ಎಂದು ತಿಳಿದು ಬಂದಿದೆ.
ಮತ್ತೂಂದು ಮೂಲಗಳ ಪ್ರಕಾರ ಡಿ.ಕೆ.ಶಿವಕುಮಾರ್‌ಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿ ಎಂ.ಬಿ.ಪಾಟೀಲ್ ಅವರಿಗೆ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ನೀಡಲಾಗುವುದು ಎಂದು ಹೇಳಲಾಗಿದೆ. ಫೆ.17 ರಿಂದ ರಾಜ್ಯ ವಿಧಾನಮಂಡಲ ಅಧಿವೇಶನ ಹಾಗೂ ಮಾರ್ಚ್ 5 ರಿಂದ ಬಜೆಟ್ ಅಧಿವೇಶನ ಇರುವುದರಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಾಗೂ ಪ್ರತಿಪಕ್ಷ ನಾಯಕ, ಶಾಸಕಾಂಗ ಪಕ್ಷದ ನಾಯಕ ಸ್ಥಾನ ಕುರಿತ ಗೊಂದಲ ನಿವಾರಿಸಲು ಹೈಕಮಾಂಡ್ ಮುಂದಾಗಿದೆ ಎನ್ನಲಾಗಿದೆ.
ಕೆಪಿಸಿಸಿ ಅಧ್ಯಕ್ಷರ ನೇಮಕ ಸಂಕ್ರಾಂತಿ ವೇಳೆಗೆ ಘೋಷಿಸಲು ಹೈಕಮಾಂಡ್ ಮುಂದಾಗಿತ್ತಾದರೂ ಕಾರ್ಯಾಧ್ಯಕ್ಷರ ನೇಮಕಕ್ಕೆ ಸಿದ್ದರಾಮಯ್ಯ ಪಟ್ಟು ಹಿಡಿದ ಕಾರಣ ತಡವಾಗಿತ್ತು. ಜತೆಗೆ, ಕೆ.ಎಚ್.ಮುನಿಯಪ್ಪ ಹಾಗೂ ಬಿ.ಕೆ.ಹರಿಪ್ರಸಾದ್ ಅವರೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೈಕಮಾಂಡ್ ಮಟ್ಟದಲ್ಲಿ ಒತ್ತಡ ಹಾಕಿದ್ದರು. ಸಿದ್ದರಾಮಯ್ಯ ಅವರಿಗೆ ಪ್ರತಿಪಕ್ಷ ನಾಯಕ ಸ್ಥಾನ ಹಾಗೂ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಎರಡೂ ಬೇಡ. ಎರಡೂ ಪ್ರತ್ಯೇಕಿಸಿ ಎಂದು ಹಿರಿಯ ನಾಯಕರ ಒಂದು ಬಣ ಹೈಕಮಾಂಡ್ ಮೇಲೆ ಒತ್ತಡ ಹಾಕಿತ್ತು. ಇದರಿಂದಾಗಿ ವಿಳಂಬವಾಗಿತ್ತು.