ಕೊಪ್ಪಳ: ನಗರಸಭೆಗೆ ನೂತನ ಸದಸ್ಯರು ಆಯ್ಕೆಯಾದ 30 ತಿಂಗಳ ಬಳಿಕ ಅಧ್ಯಕ್ಷರ ದರ್ಬಾರ್ ಶುರುವಾಗಿದೆ. ಹೈಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಹೆಸರು ಘೋಷಣೆ ಮಾಡಲಾಯಿತು. ಅಧ್ಯಕ್ಷರಾಗಿ ಲತಾ ಗವಿಸಿದ್ದಪ್ಪ ಚಿನ್ನೂರು, ಉಪಾಧ್ಯಕ್ಷರಾಗಿ ಜರೀನಾ ಬೇಗಂ ಅರಗಂಜಿ ಅವರು ಆಯ್ಕೆಯಾಗಿದ್ದಾರೆ.
ನಗರಸಭೆ 31 ಸದಸ್ಯರ ಸ್ಥಾನಕ್ಕೆ 2018ರಲ್ಲಿ ಚುನಾವಣೆ ನಡೆದಿತ್ತು. ಆದರೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಹಂಚಿಕೆಯ ವಿಚಾರದಲ್ಲಿ ಸರ್ಕಾರವೇ ಪದೇ ಪದೆ ಪರಿಷ್ಕರಣೆ ಮಾಡಿದ್ದಲ್ಲದೇ, ಸ್ಥಳೀಯ ಸದಸ್ಯರೂ ಮೀಸಲಾತಿ ಪ್ರಶ್ನೆ ಮಾಡಿ ಕೋರ್ಟ್ ಮೊರೆ ಹೋಗಿದ್ದರು. ಕೊಪ್ಪಳ ನಗರಸಭೆ ಮೀಸಲಾತಿ ಪ್ರಕರಣ ಸೇರಿದಂತೆ ರಾಜ್ಯಾದ್ಯಂತ ಇರುವ ಸ್ಥಳೀಯ ಸಂಸ್ಥೆಯ ಮೀಸಲಾತಿ ವಿವಾದವು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ಬಾಕಿಯಿತ್ತು.
ಕಳೆದ 6 ತಿಂಗಳ ಹಿಂದೆ ಹೈಕೋರ್ಟ್ ಕೊಪ್ಪಳ ಚುನಾವಣಾಧಿಕಾರಿಗೆ ನಿರ್ದೇಶನ ನೀಡಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣಾ ಪ್ರಕ್ರಿಯೆ ನಡೆಸಬೇಕು. ಆದರೆ ಫಲಿತಾಂಶ ಘೋಷಣೆ ಮಾಡದೇ ಮುಚ್ಚಿದ ಲಕೋಟೆಯಲ್ಲಿ ಕೋರ್ಟ್ ಗೆ ವರದಿ ಸಲ್ಲಿಸಬೇಕೆಂಬ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಆರು ತಿಂಗಳ ಹಿಂದೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಆಯ್ಕೆ ಮಾಡಿ ಫಲಿತಾಂಶದ ವರದಿ ಕೋರ್ಟ್‌ಗೆ ಸಲ್ಲಿಸಲಾಗಿತ್ತು. ಕೊನೆಗೆ ಎರಡು ದಿನದ ಹಿಂದಷ್ಟೇ ಫಲಿತಾಂಶ ಪ್ರಕಟಿಸುವಂತೆ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಮಂಗಳವಾರ ನಗರಸಭೆ ಸಭಾಂಗಣದಲ್ಲಿ ಎಸಿ ನಾರಾಯಣರಡ್ಡಿ ಕನಕರಡ್ಡಿ ನೇತೃತ್ವದಲ್ಲಿ ಫಲಿತಾಂಶ ಪ್ರಕಟಿಸಲಾಯಿತು.
ನಗರಸಭೆ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಸದಸ್ಯೆ ಲತಾ ಗವಿಸಿದ್ಧಪ್ಪ ಚಿನ್ನೂರು, ಉಪಾಧ್ಯಕ್ಷರಾಗಿ ಜರೀನಾ ಬೇಗಂ ಅರಗಂಜಿ ಅವರು ಆಯ್ಕೆಯಾದರು. ನೂತನ ಅಧ್ಯಕ್ಷ-ಉಪಾಧ್ಯಕ್ಷರ ಹೆಸರು ಘೋಷಣೆ ಮಾಡುತ್ತಿದ್ದಂತೆ ನಗರಸಭೆಯ ಪೌರಾಯುಕ್ತ ಮಂಜುನಾಥ ಹೂಗುತ್ಛ ನೀಡಿ ಸನ್ಮಾನಿಸಿದರು. ಅಲ್ಲದೇ, ಇತರೆ ಸದಸ್ಯರು ಶುಭಾಶಯ ಕೋರಿದರು. ಹೊರಗಡೆ ಕೆಲವರು ವಿಜಯೋತ್ಸವ ಆಚರಣೆ ಮಾಡಿದರು. ಸೋಂಕು ಮರೆತ ಜನ: ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರ ಕಾಣಿಸಲಿಲ್ಲ. ಕೆಲವರು ಮಾಸ್ಕ್ ಧರಿಸಿದ್ದು ಬಿಟ್ಟರೆ ಮತ್ತಾವ ನಿಯಮಗಳು ಪಾಲನೆಯಾಗಲಿಲ್ಲ. ಎಲ್ಲ ಸದಸ್ಯರು ಗುಂಪು ಗುಂಪಾಗಿಯೇ ಆಗಮಿಸಿ ನೂತನ ಅಧ್ಯಕ್ಷ-ಉಪಾಧ್ಯಕ್ಷರಿಗೆ ಶುಭ ಕೋರಿದರು.