Advertisement

ನಾಲ್ಕು ದಶಕಗಳ ಹಿಂದಿನ ಕನಸು ನನಸಾಯಿತು

05:29 AM Feb 28, 2019 | |

ಮೂಲ್ಕಿ : ನಾಲ್ಕು ದಶಕಗಳ ಮೂಲ್ಕಿಯ ಜನತೆಯ ಕನಸು ನನಸಾಯಿತು. ಬಹು ನಿರೀಕ್ಷೆಯ ಮೂಲ್ಕಿ ತಾಲೂಕು ಪ್ರಸ್ತಾವನೆಯು ಸೋಮವಾರ ಮುಖ್ಯಮತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಅಧ್ಯಕ್ಷತೆಯ ಸಂಪುಟ ಸಭೆಯಲ್ಲಿ ಮಾನ್ಯತೆಗೊಂಡು, ತಾಲೂಕು ಆಗಿ ಘೋಷಣೆಯಾಗಿ ಜನರ ಬೇಡಿಕೆಯನ್ನು ಸರಕಾರ ಪುರಸ್ಕರಿಸಿರುವುದರಿಂದ ಮೂಲ್ಕಿ ಸರ್ವಪಕ್ಷಗಳ ನಾಯಕರು, ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.

Advertisement

ಸರಕಾರದ ಸಮಿತಿಗಳ ವರದಿ
ಉಡುಪಿ ಜಿಲ್ಲೆ ಆಗುವ ಮೊದಲೇ ಈಗಿನ ಉಡುಪಿ ಜಿಲ್ಲೆಯ ಕೆಲವು ವ್ಯಾಪ್ತಿಯ ಹಲವಾರು ಪ್ರದೇಶವನ್ನು ಸೇರಿಸಿಕೊಂಡು ಮೂಲ್ಕಿ ತಾಲೂಕು ರಚನೆ ನ್ಯಾಯ ಸಮ್ಮತವಾಗಿದೆ ಎಂಬ ಬಗ್ಗೆ ಹುಂಡೇಕಾರ್‌, ಗದ್ದಿ ಗೌಡರ್‌ ಮತ್ತು ವಾಸುದೇವ ರಾವ್‌ ಮೊದಲಾದವರ ಅಧ್ಯಕ್ಷತೆಯನ್ನೊಳಗೊಂಡ ಸಮಿತಿ ಮೂಲ್ಕಿಗೆ ಆಗಮಿಸಿ, ಇಲ್ಲಿನ ಜನರ ಜತೆಗೆ ಚರ್ಚೆ ನಡೆಸಿ ತಯಾರಿಸಿದ ಪೂರಕ ವರದಿಗಳು ಸರಕಾರಕ್ಕೆ ಸಲ್ಲಿಕೆಯಾಗಿತ್ತು.

ಜಮೀನು ಕಾದಿರಿಸಲಾಗಿದೆ
ಗೇರುಕಟ್ಟೆಯ ಬಳಿ ಮೂಲ್ಕಿ ತಾಲೂಕು ಕಚೇರಿಗಾಗಿಯೇ ಸುಮಾರು ಎರಡು ಎಕ್ರೆಯಷ್ಟು ಜಮೀನನ್ನು ಕೂಡ ಕಾದಿರಿಸಿರುವುದು ದಾಖಲೆಗಳಲ್ಲಿವೆ. ತಾಲೂಕಿಗಾಗಿ ಕಾದಿರಿಸಿದ ಆಂಶಿಕ ಜಮೀನನ್ನು ಒಂದು ಸಮುದಾಯದ ಉಪಯೋಗಕ್ಕಾಗಿ ಸಮುದಾಯ ಭವನ ನಿರ್ಮಿಸಲು ಸರಕಾರ ಕೊಟ್ಟಿದೆ ಎಂಬ ಸುದ್ದಿಯೂ ಕೇಳಿಬರುತ್ತಿದೆ.

ಹೋರಾಟದಲ್ಲಿ ಹಲವರ ಪ್ರಯತ್ನ
ಮೂಲ್ಕಿ ತಾಲೂಕು ಆಗುವ ಅರ್ಹತೆಯ ಬಗ್ಗೆ ದಿ| ಜಿ.ಎಂ. ಶೆಟ್ಟಿ ಅವರು ಹಲವಾರು ಲೇಖನಗಳನ್ನು ನಿರಂತರವಾಗಿ ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ. ಹರಿಕೃಷ್ಣ ಪುನರೂರು ಅವರ ನೇತೃತ್ವದಲ್ಲಿ ಮೂಲ್ಕಿಯ ಅನೇಕ ಹಿರಿಯರು ಹೋರಾಟ ನಡೆಸಿ ಧರಣಿ ಸತ್ಯಾಗ್ರಹವನ್ನು ಮಾಡಿ ಅಭಯಚಂದ್ರ ಅವರ ನಿಯೋಗದ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಮಾಜಿ ಸಚಿವರಾದ ಕೆ. ಅಮರನಾಥ ಶೆಟ್ಟಿ, ಕೆ. ಅಭಯಚಂದ್ರ, ಶಾಸಕ ಉಮಾನಾಥ ಕೋಟ್ಯಾನ್‌ ಮತ್ತು ಮೂಲ್ಕಿಯ ಹಲವಾರು ಮುಖಂಡರು ಮೂಲ್ಕಿ ತಾಲೂಕು ಆಗಬೇಕೆಂಬ ಹೋರಾಟಕ್ಕೆ ಸಾಥ್‌ ನೀಡಿದ್ದರಲ್ಲದೆ ಹಲವಾರು ಪ್ರಯತ್ನಗಳನ್ನು ನಡೆಸಿದ್ದರು.

ಸತತ ನಾಲ್ಕು ದಶಕಗಳ ಮೂಲ್ಕಿ ಜನತೆಯ ಹಾಗೂ ವಿವಿಧ ಪಕ್ಷಗಳ ನಾಯಕರು ಮಾಡಿರುವ ಪ್ರಯತ್ನಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ, ಕಂದಾಯ ಸಚಿವರಾದ ಆರ್‌.ವಿ. ದೇಶಪಾಂಡೆ ಅವರು ನ್ಯಾಯ ಒದಗಿಸಿ ಜನರ ಭಾವನೆಗಳನ್ನು ಗೌರವಿಸಿದ್ದಾರೆ. ಇದಕ್ಕಾಗಿ ಮೂಲ್ಕಿಯ ಸಾರ್ವಜನಿಕರು ಹಾಗೂ ಸರ್ವ ಪಕ್ಷಗಳ ನಾಯಕರು ಕೃತಜ್ಞತೆ ಸಲ್ಲಿಸಿದ್ದಾರೆ.

Advertisement

ಮೂಲ್ಕಿಗೆ ಬಂದಿದ್ದಾಗ ಭರವಸೆ
ಕಳೆದ ಬಾರಿ ಚುನಾವಣೆಯ ಮೊದಲು ಮೂಲ್ಕಿಗೆ ಆಗಮಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಜನರು ತಾಲೂಕು ಪ್ರತಿಕ್ರಿಯೆ ಬಗ್ಗೆ ತಿಳಿಸಿದಾಗ ತಾನು ಮುಖ್ಯಮಂತ್ರಿಯಾದರೆ ಮೂಲ್ಕಿ ತಾಲೂಕು ಮಾಡುವೆ ಎಂಬ ಭರವಸೆ ನೀಡಿದ್ದರು. ಈ ಭರವಸೆಯನ್ನು ಮುಖ್ಯಮಂತ್ರಿಯವರಿಗೆ ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಹಾಗೂ ಮೂಲ್ಕಿ ಜೆಡಿಎಸ್‌ ಬ್ಲಾಕ್‌ನ ಅಧ್ಯಕ್ಷ ಜೀವನ್‌ ಶೆಟ್ಟಿ ಮತ್ತು ಇತರ ಪದಾಧಿಕಾರಿಗಳು ಮತ್ತೆ ನೆನಪಿಸಿದಾಗ ಸಪ್ಲಿಮೆಂಟರಿ ಬಜೆಟ್‌ನಲ್ಲಿ ಮೂಲ್ಕಿ ತಾಲೂಕು ಘೋಷಣೆ ಮಾಡುವೆ ಎಂದು ತಿಳಿಸಿದ್ದರು. ಕೊಟ್ಟ ಮಾತಿನಂತೆ ಈಗ ಮೂಲ್ಕಿ ತಾಲೂಕು ಆಗಿ ಪಟ್ಟಿಯಲ್ಲಿ ಸೇರಿಸುವ ಮೂಲಕ ಕುಮಾರಸ್ವಾಮಿ ತಮ್ಮ ಮಾತು ಉಳಿಸಿ ಕೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next