Advertisement

8,572 ರೈತರ 16.29 ಕೋ. ರೂ. ಮನ್ನಾ

12:18 AM Feb 19, 2020 | mahesh |

ಮಂಗಳೂರು: ರಾಜ್ಯದಲ್ಲಿ ಸಹಕಾರ ಸಂಸ್ಥೆಗಳ ಮೂಲಕ ಸಾಲ ಪಡೆದು 2020 ಜ. 31ಕ್ಕೆ ಸುಸ್ತಿಯಾಗಿರುವ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಹಾಗೂ ಕೃಷಿ ಸಂಬಂಧಿತ ಸಾಲಗಳ ಮೇಲಿನ ಬಡ್ಡಿ ಮನ್ನಾ ಮಾಡಲು ಸರಕಾರ ನಿರ್ಧರಿಸಿದ್ದು, ಇದರಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಒಟ್ಟು 8,572 ರೈತರಿಗೆ ಅನುಕೂಲವಾಗಲಿದ್ದು, ಒಟ್ಟು 16.29 ಕೋ.ರೂ. ಬಡ್ಡಿ ಮನ್ನಾ ಸೌಲಭ್ಯ ದೊರೆಯಲಿದೆ.

Advertisement

ಉಭಯ ಜಿಲ್ಲೆಯಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಮುಖೇನ ಒಟ್ಟು 63155 ರೈತರು ಸಾಲ ತೆಗೆದುಕೊಂಡಿದ್ದು, ಬಹುತೇಕರು ನಿಯಮಿತವಾಗಿ ಮರುಪಾವತಿ ಮಾಡುತ್ತಿದ್ದಾರೆ. ಈ ಪೈಕಿ 2020ರ ಜ.31ಕ್ಕೆ 4881 ರೈತರ ಸಾಲ ಸುಸ್ತಿಯಾಗಿದ್ದು, ಮುಂದಿನ ತಿಂಗಳು 31ರೊಳಗೆ ಅಸಲು ಮೊತ್ತವಾದ ಒಟ್ಟು 20.47 ಕೋ.ರೂ. ಪಾವತಿಸಿದರೆ ಅವರಿಗೆ ಬಡ್ಡಿ ಮನ್ನಾ ಸೌಲಭ್ಯ ದೊರೆಯಲಿದೆ. ಇದೇ ರೀತಿ ಸಹಕಾರಿ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ ಮೂಲಕ ಕೃಷಿ ಹಾಗೂ ಕೃಷಿ ಪೂರಕ ಉದ್ದೇಶಗಳಿಗೆ ಸಾಲ ಪಡೆದು ಜ. 31ಕ್ಕೆ ಸುಸ್ತಿಯಾದ ಎರಡೂ ಜಿಲ್ಲೆಯ ಒಟ್ಟು 5903 ರೈತರು ಮಾ. 31ರೊಳಗೆ 31 ಕೋ.ರೂ. ಅಸಲು ಪಾವತಿಸಿದರೆ ಅವರಿಗೆ 13.43 ಕೋ.ರೂ. ಬಡ್ಡಿ ಮನ್ನಾ ಸೌಲಭ್ಯ ಲಭಿಸಲಿದೆ.

ಅಸಲು ಕಟ್ಟಿದರೆ ಮಾತ್ರ ಬಡ್ಡಿ ಮನ್ನಾ
ರೈತರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು (ಫ್ಯಾಕ್ಸ್‌), ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳು (ಡಿಸಿಸಿ ಬ್ಯಾಂಕ್‌), ಲ್ಯಾಂಪ್ಸ್‌ ಸಹಕಾರ ಸಂಘಗಳು ಮತ್ತು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ (ಪಿಕಾರ್ಡ್‌) ಬ್ಯಾಂಕ್‌ಗಳಿಂದ ಸಾಲ ಪಡೆದು 2020ರ ಜ.31ಕ್ಕೆ ಸುಸ್ತಿಯಾ
ಗಿರುವ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಹಾಗೂ ಕೃಷಿ ಸಂಬಂಧಿತ ಸಾಲಗಳಿಗೆ ಮಾತ್ರ ಈ ಸೌಲಭ್ಯ ಅನ್ವಯ.

ಸುಸ್ತಿದಾರರು ಮಾ.31ರೊಳಗೆ ಸಂಬಂಧಪಟ್ಟ ಸಹಕಾರ ಸಂಘ/ಬ್ಯಾಂಕ್‌ಗಳಿಗೆ ಅಸಲು ಪೂರ್ಣವಾಗಿ ಮರುಪಾವತಿಸಿದರೆ ಮಾತ್ರ ಮರುಪಾವತಿ ದಿನಾಂಕದವರೆಗಿನ ಬಾಕಿ ಇರುವ ಬಡ್ಡಿಯನ್ನು ಮನ್ನಾ ಮಾಡಲಾಗುತ್ತದೆ.  ರಾಷ್ಟ್ರೀಕೃತ ಬ್ಯಾಂಕ್‌ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಿಂದ, ಇತರ ಯಾವುದೇ ವಿತ್ತೀಯ ಸಂಸ್ಥೆ, ಸಹಕಾರ ಸಂಸ್ಥೆಗಳಿಂದ ಪಡೆದ ಸಾಲಗಳಿಗೆ ಇದು ಅನ್ವಯವಾಗುವುದಿಲ್ಲ. ನಬಾರ್ಡ್‌ ಗುರುತಿಸಿದ ಕೃಷಿ/ ಕೃಷಿ ಸಂಬಂಧಿತ ಮಧ್ಯಮಾವಧಿ ಹಾಗೂ ದೀರ್ಘಾ ವಧಿ ಸಾಲಗಳಿಗೆ (ಲಘು ನೀರಾವರಿ, ಭೂ ಅಭಿವೃದ್ಧಿ, ಸಾವಯವ ಕೃಷಿ, ಪಶುಸಂಗೋಪನೆ ಹಾಗೂ ಹೈನುಗಾರಿಕೆ, ಮೀನು ಕೃಷಿ, ರೇಷ್ಮೆ, ಕೃಷಿ ಉದ್ದೇಶ) ಮಾತ್ರ ಇದು ಅನ್ವಯವಾಗುತ್ತದೆ. ಕೃಷಿಯೇತರ ಹಾಗೂ ಸ್ವಸಹಾಯ ಸಂಘಗಳು ಪಡೆದ ಸಾಲಗಳಿಗೆ ಅನ್ವಯವಾಗು ವುದಿಲ್ಲ ಎಂದು ರಾ.ಸ.ಕೃ ಮತ್ತು ಗ್ರಾ. ಅಭಿವೃದ್ಧಿ ಬ್ಯಾಂಕ್‌ನ ಜಿಲ್ಲಾ ವ್ಯವಸ್ಥಾಪಕ ಬಿ.ಜೆ. ಸುರೇಶ್‌ “ಉದಯವಾಣಿ’ಗೆ ತಿಳಿಸಿದ್ದಾರೆ. ಬಡ್ಡಿ ಮನ್ನಾ ಸೌಕರ್ಯ ಪಡೆಯಲಿರುವ ಎಲ್ಲ ಸಾಲಗಾರ ಸದಸ್ಯರಿಗೆ ತಿಳುವಳಿಕೆ ಪತ್ರವನ್ನು ಕಳುಹಿಸಲಾಗುತ್ತಿದೆ.

ಸಾಲ ಮನ್ನಾ 146 ಕೋ.ರೂ ಇನ್ನೂ ಬಂದಿಲ್ಲ !
2018ರಲ್ಲಿ ರಾಜ್ಯ ಸರಕಾರದ ಬೆಳೆಸಾಲ ಮನ್ನಾ ಯೋಜನೆಯಡಿ ದ.ಕ. ಜಿಲ್ಲೆಯಲ್ಲಿ 67,620 ಅರ್ಹ ರೈತರಿಗೆ 526.47 ಕೋ.ರೂ. ಮೊತ್ತ ಲಭಿಸಬೇಕಿತ್ತು. ಈ ಪೈಕಿ 56,770 ರೈತರಿಗೆ 419.39 ಕೋ.ರೂ. ಬಿಡುಗಡೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ 24,130 ಅರ್ಹ ರೈತರಿಗೆ 178.64 ಕೋ.ರೂ. ಲಭಿಸಬೇಕಿತ್ತು. ಈ ಪೈಕಿ 20,503 ರೈತರಿಗೆ 140.34 ಕೋ.ರೂ. ಬಿಡುಗಡೆಯಾಗಿದೆ. ಹೀಗಾಗಿ ಕರಾವಳಿ ಜಿಲ್ಲೆಯ 14,477 ರೈತರಿಗೆ 146 ಕೋ.ರೂ. ಬಿಡುಗಡೆಗೆ ಬಾಕಿ ಇದೆ !

Advertisement

ಸಹಕಾರ ಸಂಸ್ಥೆಗಳ ಮೂಲಕ ಸಾಲ ಪಡೆದು 2020 ಜ.31ಕ್ಕೆ ಸುಸ್ತಿಯಾಗಿರುವ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಹಾಗೂ ಕೃಷಿ ಸಂಬಂಧಿತ ಸಾಲಗಳ ಮೇಲಿನ ಬಡ್ಡಿ ಮನ್ನಾ ಮಾಡಲು ರಾಜ್ಯ ಸರಕಾರ ನಿರ್ಧರಿಸಿದೆ. ಹೀಗಾಗಿ ಮಾರ್ಚ್‌ 31ರೊಳಗೆ ಅವರು ಅಸಲು ಪಾವತಿಸಿದರೆ ಬಡ್ಡಿ ಮನ್ನಾ ಸೌಲಭ್ಯ ದೊರೆಯಲಿದೆ.
– ಪ್ರವೀಣ್‌ ನಾೖಕ್‌, ಉಪನಿಬಂಧಕರು, ಸಹಕಾರ ಸಂಘ-ದ.ಕ.

– ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next