Advertisement

ನಾಲ್ಕು ಮತಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಗಳ ಘೋಷಣೆ

05:23 PM Feb 19, 2018 | |

ಯಾದಗಿರಿ: ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್‌ ಅಭ್ಯರ್ಥಿಗಳ ಪಟ್ಟಿ ಘೋಷಿಸಿದ್ದು, ಮೊದಲ ಪಟ್ಟಿಯಲ್ಲಿಯೇ ಜಿಲ್ಲೆಯ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟಗೊಂಡಿದ್ದು, ಜಿಲ್ಲಾ ರಾಜಕೀಯ
ವಲಯದಲ್ಲಿ ಸಂಚಲನ ಮೂಡಿದೆ.

Advertisement

ಜೆಡಿಎಸ್‌ ರಾಜ್ಯಾಧ್ಯಕ್ಷ ಹೆಚ್‌.ಡಿ. ಕುಮಾರಸ್ವಾಮಿ ರಾಜ್ಯದ 123 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳಿಸಿದ್ದು, ಜಿಲ್ಲೆಯ ಯಾದಗಿರಿ, ಗುರುಮಠಕಲ್‌, ಶಹಾಪುರ ಮತ್ತು ಸುರಪುರ ಮತಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿವೆ.
 
ಯಾದಗಿರಿ ವಿಧಾನಸಭಾ ಕ್ಷೇತ್ರದಿಂದ ಎ.ಸಿ. ಕಾಡ್ಲೋರ, ಗುರುಮಠಕಲ್‌ ಕ್ಷೇತ್ರದಿಂದ ನಾಗನಗೌಡ ಕಂದಕೂರ, ಶಹಾಪುರ ಕ್ಷೇತ್ರದಿಂದ ಅಮೀನರೆಡ್ಡಿ ಯಾಳಗಿ ಮತ್ತು ಸುರಪುರ ಕ್ಷೇತ್ರದಿಂದ ರಾಜಾ ಕೃಷ್ಣಪ್ಪ ನಾಯಕ ಅಭ್ಯರ್ಥಿಗಳಾಗಿ ಹೊರ ಹೊಮ್ಮಿದ್ದಾರೆ.
 
ಯಾದಗಿರಿ ಮತಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಎ.ಸಿ. ಕಾಡ್ಲೂರ ಮುಸ್ಲಿಂ ಸಮುದಾಯಕ್ಕೆ ಸೇರಿದ್ದು, ಅವರು ಒಮ್ಮೆ ಬಿಎಸ್‌ಪಿಯಿಂದ, ಎರಡು ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದು, ಇದೀಗ ನಾಲ್ಕನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. ಜೆಡಿಎಸ್‌ ರಾಜ್ಯ ಸಂಘಟನಾ ಕಾರ್ಯದರ್ಶಿ ಆಗಿರುವ ಹನುಮೇಗೌಡ ಬಿರನಕಲ್‌ ಸಹ ಆಕಾಂಕ್ಷಿಯಾಗಿದ್ದರು. ಆದರೆ ಎ.ಸಿ. ಕಾಡ್ಲೂರ ಅವರಿಗೆ ಟಿಕೆಟ್‌ ಲಭಿಸಿದೆ. ಪ್ರತಿ ಬಾರಿ ಚುನಾವಣೆಯಲ್ಲಿ ಎ.ಸಿ. ಕಾಡ್ಲೂರ ಮೂರನೇ ಸ್ಥಾನ ಪಡೆದುಕೊಂಡಿದ್ದು, ಈ ಬಾರಿ ಅವರ ಆಯ್ಕೆ ಕಾಯ್ದು ನೋಡಬೇಕಿದೆ.

ಗುರುಮಠಕಲ್‌ ಮತಕ್ಷೇತ್ರದ ನಾಗನಗೌಡಕಂದಕೂರ ಲಿಂಗಾಯತ ರೆಡ್ಡಿ ಸಮುದಾಯಕ್ಕೆಸೇರಿದ್ದು, ಕಳೆದ ಎರಡು ಬಾರಿ ಚುನಾವಣೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದಾರೆ. ಪುನಃ ಮೂರನೇ ಬಾರಿಗೆ ಸ್ಪರ್ಧಿಸುತ್ತಿದ್ದು, ಇವರು ಪಕ್ಷದ ಜಿಲ್ಲಾಧ್ಯಕ್ಷರಾಗಿದ್ದು, ಇವರಿಗೆ ಯಾರು ಪ್ರತಿಸ್ಪರ್ಧಿ ಇರಲಿಲ್ಲ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಮಾಜಿ ಸಚಿವ ಬಾಬುರಾವ್‌ ಚಿಂಚನಸೂರ ವಿರುದ್ಧ ಸ್ಪರ್ಧಿಸಿ ಕೆಲವೇ ಮತಗಳ ಅಂತರದಲ್ಲಿ ಸೋಲು ಅನುಭವಿಸಿದ್ದರು. ಈ ಬಾರಿ ಗೆಲುವಿಗಾಗಿ ಪಣತೊಟ್ಟಿದ್ದಾರೆ.

ಶಹಾಪುರ ಮತಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿರುವ ಅಮೀನರೆಡ್ಡಿ ಯಾಳಗಿ ಲಿಂಗಾಯತ ರೆಡ್ಡಿ ಸಮುದಾಯಕ್ಕೆ ಸೇರಿದ್ದು, ಇವರು ಈ ಮೊದಲು ಕಾಂಗ್ರೆಸ್‌ ಮಾಜಿ ಸಚಿವ ಶರಣ ಬಸಪ್ಪಗೌಡ ದರ್ಶನಾಪುರ ಅವರ ಒಡನಾಡಿಯಾಗಿ ಗುರುತಿಸಿಕೊಂಡಿದ್ದರು. ಈಚೆಗೆ ಜೆಡಿಎಸ್‌ ಸೇರ್ಪಡೆಯಾಗಿ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಇವರಿಗೆ ಪ್ರತಿಸ್ಪರ್ಧಿ ಇರಲಿಲ್ಲ. ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಶಹಾಪುರದಲ್ಲಿ ಬಿಜೆಪಿ, ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಪ್ರತಿ ಸ್ಪರ್ಧಿಯಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. 

ಸುರಪುರ ಮತಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿರುವ ರಾಜಾ ಕೃಷ್ಣಪ್ಪ ನಾಯಕ ಎಸ್ಟಿ ಸಮುದಾಯ ನಾಯಕ ಜನಾಂಗಕ್ಕೆ ಸೇರಿದ್ದಾರೆ. ಇವರು ಸುರಪುರ ಸಂಸ್ಥಾನದವರಾಗಿದ್ದು, ಯುವ ರಾಜರಾಗಿ ಗುರುತಿಸಿಕೊಂಡಿದ್ದಾರೆ. ಈ ಮೊದಲು ಬಿಎಸ್‌ಆರ್‌ ಕಾಂಗ್ರೆಸ್‌ ಪಕ್ಷದಲ್ಲಿದ್ದರು. ಈಚೆಗೆ ಜೆಡಿಎಸ್‌ಗೆ ಸೇರ್ಪಡೆಯಾಗಿದ್ದರು.
 
ಜೆಡಿಎಸ್‌ ಪಕ್ಷದ ಟಿಕೆಟ್‌ಗಾಗಿ ಮಾಜಿ ಸಚಿವ ಮದನಗೋಪಾಲ ನಾಯಕ ಮಗ ರಾಜಾ ಹರ್ಷ ವರ್ಧನ್‌, ರಾಜನಕೊಳ್ಳೂರಿನ ಯಮುನಪ್ಪ ದೊರೆ ಅವರು ಆಕಾಂಕ್ಷಿಗಳಾಗಿದ್ದರು. ಆದರೆ ಜೆಡಿಎಸ್‌ ಅಭ್ಯರ್ಥಿಯಾಗಿ ರಾಜಾ ಕೃಷ್ಣಪ್ಪ ನಾಯಕವರಿಗೆ ಟಿಕೆಟ್‌ ನೀಡಿದ್ದು, ಈ ಬಾರಿ ಚುನಾವಣೆಯಲ್ಲಿ ಸುರಪುರ ಮತಕ್ಷೇತ್ರದಲ್ಲಿ ಚುನಾವಣಾ ಕಣ
ರಂಗೇರಲಿದೆ. ಜಿಲ್ಲೆಯ ನಾಲ್ಕು ಕ್ಷೇತ್ರಗಳ ಜೆಡಿಎಸ್‌ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದ್ದರಿಂದ ಕಾಂಗ್ರೆಸ್‌, ಬಿಜೆಪಿ ಅಭ್ಯರ್ಥಿಗಳಲ್ಲಿ ಸಂಚಲನ ಮೂಡಿದೆ. 

Advertisement

ರಾಜೇಶ ಪಾಟೀಲ್‌ ಯಡ್ಡಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next