Advertisement

ಧಿಕ್ಕಾರ ಘೋಷಣೆ; ಹಿಂದಿರುಗಿದ ಡಾ|ಜಾಧವ

09:48 AM Mar 12, 2022 | Team Udayavani |

ಚಿಂಚೋಳಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಹಶೀಲ್ದಾರ್‌ ಕಚೇರಿ ಎದುರು ತಾಲೂಕು ಗೊಂಡ ಸಂಘರ್ಷ ಸಮಿತಿ ಕಳೆದ ಮೂರು ದಿನಗಳಿಂದ ಕೈಗೊಂಡಿರುವ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ಆಗಮಿಸಿದ ಕಲಬುರಗಿ ಸಂಸದ ಡಾ| ಉಮೇಶ ಜಾಧವ ಅವರು ಬಿಜೆಪಿ ಸರ್ಕಾರದ ವಿರುದ್ಧದ ಘೋಷಣೆ ಕೇಳಿ, ವಿಚಲಿತರಾಗಿ ಭರವಸೆ ನೀಡದೇ ತೆರಳಿದರು.

Advertisement

ಈ ವೇಳೆ ತಾಲೂಕು ಗೊಂಡ ಸಂಘರ್ಷ ಸಮಿತಿ ಮುಖಂಡ ರೇವಣಸಿದ್ದಪ್ಪ ಅಣಕಲ್‌ ಮಾತನಾಡಿ, ಗೊಂಡ ಸಮಾಜಕ್ಕೆ ಆಗುತ್ತಿರುವ ಅನ್ಯಾಯ ಖಂಡಿಸಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರೂ ಕಂದಾಯ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿ ನ್ಯಾಯ ದೊರಕಿಸುತ್ತಿಲ್ಲ. ಆದ್ದರಿಂದ ಬೇಡಿಕೆ ಈಡೇರುವ ವರೆಗೂ ಧರಣಿ ಮುಂದುವರಿಸುತ್ತೇವೆ ಎಂದು ಎಚ್ಚರಿಸಿದರು.

ಮುಖಂಡ ಹಣಮಂತರಾವ್‌ ಪೂಜಾರಿ ಮಾತನಾಡಿ, ಬಹುಸಂಖ್ಯಾತ ಗೊಂಡ ಸಮಾಜಕ್ಕೆ ಎಸ್‌ಟಿ ಪ್ರಮಾಣ ಪತ್ರ ನೀಡಲಾಗಿದೆ. ಆದರೆ ಸಚಿವ ಶ್ರೀರಾಮುಲು ಕಳೆದ ವರ್ಷ ಆ. 31ರಂದು ಹೊರಡಿಸಿದ ಆದೇಶದಿಂದ ಸಮುದಾಯಕ್ಕೆ ತೀವ್ರ ಅನ್ಯಾಯವಾಗಿದೆ. ಶಾಲೆ-ಕಾಲೇಜುಗಳಲ್ಲಿ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳು ಸವಲತ್ತುಗಳಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಕೂಡಲೇ ಆದೇಶ ಹಿಂದಕ್ಕೆ ಪಡೆಯಲು ಸರ್ಕಾರಕ್ಕೆ ಒತ್ತಾಯ ಮಾಡಬೇಕು ಎಂದು ಸಂಸದ ಡಾ| ಉಮೇಶ ಜಾಧವ ಅವರಿಗೆ ಒತ್ತಾಯಿಸಿದರು.

ಆಗ ಸಂಸದರು ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ. ಸಮಯಾವಕಾಶ ಕೊಡಿ. ಧರಣಿ ಸತ್ಯಾಗ್ರಹ ಹಿಂದಕ್ಕೆ ಪಡೆದುಕೊಳ್ಳಿ ಎಂದರು. ಆಗ ಧರಣಿ ನಿರತರು ನಮ್ಮೆದುರಲ್ಲೇ ಸಚಿವರಿಗೆ ಮತ್ತು ಅಧಿಕಾರಿಗಳಿಗೆ ಮೊಬೈಲ್‌ದಲ್ಲಿ ಮಾತನಾಡಿ ಹೇಳಿ ಎಂದು ಪಟ್ಟು ಹಿಡಿದರು.

ಈ ವೇಳೆ ಕೆಲವರು ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಆಗ ಸಂಸದರು ಯಾವುದೇ ಭರವಸೆ ನೀಡದೇ ಮನವಿ ಸ್ವೀಕರಿಸಿ ಅಲ್ಲಿಂದ ತೆರಳಿದರು. ತಹಶೀಲ್ದಾರ್‌ ಅಂಜುಮ ತಬಸುಮ, ಇಒ ಅನಿಲಕುಮಾರ ರಾಠೊಡ, ಸಿಪಿಐ ಮಹಾಂತೇಶ ಪಾಟೀಲ, ವೆಂಕಟೇಶ ದುಗ್ಗನ ಈ ಸಂದರ್ಭದಲ್ಲಿದ್ದರು.

Advertisement

ಧರಣಿ ಸತ್ಯಾಗ್ರಹದಲ್ಲಿ ಕೃಷ್ಣಾ ಬೀರಾಪುರ, ರಾಜಕುಮಾರ ಪೂಜಾರಿ, ಕೃಷ್ಣಪ್ಪ ಪೂಜಾರಿ, ಗಂಗಾಧರ ಗಡ್ಡಿಮನಿ, ಗೋಪಾಲ ಗಾರಂಪಳ್ಳಿ, ಮಹದೇವ ದೇವಣೂರ, ಹಣಮಂತ ಐನೋಳಿ, ರಾಮಚಂದ್ರ ಪೂಜಾರಿ, ಸುಶೀಲ ಮೇತ್ರೆ, ಜಗನ್ನಾಥ ಅಣವಾರ, ಗೈಬಣ್ಣ ಅಣವಾರ, ರವೀಂದ್ರ, ರಾಜೇಂದ್ರ ದೇಗಲಮಡಿ, ನಾಗಪ್ಪ ಪೂಜಾರಿ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next