Advertisement

ರಜಾರಹಿತ ಇಲಾಖೆಯಾಗಿ ಘೋಷಣೆ ಮಾಡಿ

06:00 AM Mar 08, 2019 | |

ಬೆಂಗಳೂರು: ಅವಧಿಗೂ ಮೊದಲೇ ಪಿಯುಸಿ ತರಗತಿಗಳನ್ನು ಆರಂಭಿಸುವ ಬದಲು ಪಿಯು ಇಲಾಖೆಯನ್ನು ರಜಾರಹಿತ ಇಲಾಖೆಯಾಗಿ ಘೋಷಣೆ ಮಾಡಿ ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸರ್ಕಾರಿ ಪ.ಪೂ.ಕಾಲೇಜುಗಳ ಉಪನ್ಯಾಸಕರ ಸಂಘ ನಿರ್ಧರಿಸಿದೆ. ಮೇ 2ನೇ ತಾರೀಕಿನಿಂದ ದ್ವಿತೀಯ ಪಿಯುಸಿ ತರಗತಿಗಳನ್ನು ಆರಂಭಿಸಲು ಮುಂದಾಗಿರುವ ಪಿಯು ಇಲಾಖೆಯ ಕ್ರಮಕ್ಕೆ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕರ ಸಹಿತವಾಗಿ ಸಂಘವೂ ತೀವ್ರ ವಿರೋಧ ವ್ಯಕ್ತಪಡಿಸಿದೆ.

Advertisement

ಅಲ್ಲದೇ, ಇಲಾಖೆಯು ತನ್ನ ನಿರ್ಧಾರದಿಂದ ಹಿಂದೆ ಸರಿಯದೇ ಇದ್ದರೆ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆ ಮೌಲ್ಯಮಾಪನ ಕಾರ್ಯವನ್ನು ಬಹಿಷ್ಕರಿಸುವ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿದ್ದಾರೆ. ಸರ್ಕಾರಿ ಪಿಯು ಕಾಲೇಜಿನ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆದಿದೆ. ಇದಾದ ನಂತರ ಸಂಘದ ರಾಜ್ಯ, ಜಿಲ್ಲಾಮಟ್ಟದ ಪದಾಧಿಕಾರಿಗಳು ಸಭೆ ಸೇರಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ.

ಇಲಾಖೆಯು ಮೇ 2ರಿಂದ ಕಾಲೇಜು ಆರಂಭಿಸಿದರೆ, ನಮ್ಮ ಇಲಾಖೆಯನ್ನು ರಜಾರಹಿತ ಇಲಾಖೆ ಎಂದು ಘೋಷಣೆ ಮಾಡಿ, ನಂತರ ನಿಮ್ಮಿಚ್ಛೆಯಂತೆ ಕಾಲೇಜು ಆರಂಭಿಸಿ ಎಂಬ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲು ತೀರ್ಮಾನಿಸಿದ್ದೇವೆ ಎಂದು ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ “ಉದಯವಾಣಿ’ಗೆ ಖಚಿತಪಡಿಸಿದ್ದಾರೆ.

ಸಂಘದ ನಿರ್ಧಾರಗಳನ್ನು ಸರ್ಕಾರಕ್ಕೆ ಸಲ್ಲಿಸಿದ ನಂತರ, ಅವರು ತೆಗೆದುಕೊಳ್ಳುವ ತೀರ್ಮಾನದ ಆಧಾರದಲ್ಲಿ ಮುಂದಿನ ನಡೆಯನ್ನು ನಿರ್ಧರಿಸಲಿದ್ದೇವೆ. ಈಗಾಗಲೇ ಪರೀಕ್ಷಾ ಕಾರ್ಯ ಆರಂಭವಾಗಿದೆ. ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಗೊಂದಲ ಆಗಬಾರದು ಎಂಬ ಉದ್ದೇಶದಿಂದ ಸುಮ್ಮನೆ ಇದ್ದೇವೆ. ವಾರ್ಷಿಕ ಪರೀಕ್ಷೆ ಮುಗಿದ ನಂತರ ಮೌಲ್ಯಮಾಪನ ಕಾರ್ಯ ಆರಂಭವಾಗುತ್ತದೆ. ಅಷ್ಟರೊಳಗೆ ಏಪ್ರಿಲ್‌  ಕಳೆದಿರುತ್ತದೆ.

ರಜೆ ಇಲ್ಲದೇ ಕೆಲಸ ಮಾಡಬೇಕಾಗುತ್ತದೆ. ಹೀಗಾಗಿ, ಸರ್ಕಾರವೇ ರಜಾರಹಿತ ದಿನ ಎಂದು ಘೋಷಣೆ ಮಾಡಿ, ವರ್ಷಕ್ಕೆ 30 ಇಎಲ್‌ ಹಾಗೂ 10 ರಜೆ ನೀಡಲಿ. ಇದಕ್ಕೆ ನಾವೂ ಸಿದ್ಧರಿದ್ದೇವೆ ಎಂದು ವಿವರಿಸಿದರು. ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಪೂರ್ವ ನಿಗದಿಯಂತೆ ರಜೆ ನೀಡಲಾಗುತ್ತದೆ. ಪಿಯುಸಿ ಉಪನ್ಯಾಸಕರಿಗೆ ಈ ಸೌಲಭ್ಯ ಯಾಕಿಲ್ಲ. ಅಕ್ಟೋಬರ್‌ ತಿಂಗಳಲ್ಲಿ ಮಧ್ಯಾವಧಿ ರಜೆ ನೀಡುತ್ತಾರೆ.

Advertisement

ಆದರೆ, ಆ ರಜೆಯಲ್ಲೂ “ವಿಶ್ವಾಸಕಿರಣ ಯೋಜನೆ’ (ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ) ಪ್ರಕಾರ ವಿಶೇಷ ತರಗತಿಗಳನ್ನು ನಡೆಸಬೇಕಾಗುತ್ತದೆ. ಮಧ್ಯಾವಧಿ ರಜೆಯೂ ಇಲ್ಲ, ಬೇಸಿಗೆ ರಜೆಯೂ ಇಲ್ಲ. ಹೀಗಾದರೆ, ಸೇವೆ ಸಲ್ಲಿಸುವುದು ಹೇಗೆ ಎಂದು ಇಲಾಖೆಯನ್ನು ಪ್ರಶ್ನಿಸಿದರು.

ಮೌಲ್ಯಮಾಪನ ಬಹಿಷ್ಕಾರ?: ಮಾ.18ಕ್ಕೆ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ಮುಗಿಯಲಿದೆ. ಅಷ್ಟರೊಳಗೆ ಇಲಾಖೆ ಈ ಸಂಬಂಧ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲವಾದರೆ, ಮಾ.19 ಅಥವಾ 20ರಂದು ಬೆಂಗಳೂರಿನಲ್ಲಿ ಪದಾಧಿಕಾರಿಗಳು ಸಭೆ ಸೇರಿ, ಮೌಲ್ಯಮಾಪನ ಪ್ರಕ್ರಿಯೆ ಬಹಿಷ್ಕರಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದೇವೆ. ವಿರೋಧದ ನಡುವೆಯೂ ತರಗತಿಗಳು ಅವಧಿಗೂ ಮೊದಲೇ ಆರಂಭವಾದರೆ ಮೇ 2ರಿಂದ ಉಪನ್ಯಾಸಕರು ಸಾಮೂಹಿಕವಾಗಿ ಗೈರಾಗಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.

ಬಹಿಷ್ಕಾರ ಸುಲಭವಿಲ್ಲ: ಅವಧಿಗೂ ಮೊದಲೇ ತರಗತಿ ನಡೆಸುವ ಇಲಾಖೆಯ ನಿರ್ಧಾರ ಇದೇ ಮೊದಲಲ್ಲ. ಕಳೆದ ವರ್ಷವೂ ಅವಧಿಗೆ ಮೊದಲೇ ತರಗತಿ ಆರಂಭಿಸಲಾಗಿತ್ತು. ಇದಕ್ಕೆ ಉಪನ್ಯಾಸಕರು ವಿರೋಧ ವ್ಯಕ್ತಪಡಿಸಿದ್ದರಾದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಇಲಾಖೆ ತನ್ನ ನಿರ್ಧಾರದಂತೆ ಕಳೆದ ವರ್ಷವೂ ಮೇ 2ರಂದೇ ದ್ವಿತೀಯ ಪಿಯುಸಿ ತರಗತಿ ಅರಂಭಿಸಿತ್ತು.

ಮೌಲ್ಯಮಾಪನ ಬಹಿಷ್ಕಾರದ ಬಗ್ಗೆ ಆಗಾಗ ಪ್ರಾಧ್ಯಾಪಕರು ಧ್ವನಿ ಎತ್ತುತ್ತಿರುತ್ತಾರೆ. ಆದರೆ, ಬಹಿಷ್ಕರಿಸುವುದು ಅಷ್ಟು ಸುಲಭವಲ್ಲ. ಒಂದೊಮ್ಮೆ ಬಹಿಷ್ಕರಿಸಿದರೂ ಉಪನ್ಯಾಸಕರ ವಿರುದ್ಧ ಕ್ರಮ ತೆಗೆದುಕೊಳ್ಳುವ ಅಧಿಕಾರ ಸರ್ಕಾರಕ್ಕೆ ಇದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ವಿವರಿಸಿದರು.

ರಜಾರಹಿತ ಇಲಾಖೆ ಎಂದು ಘೋಷಣೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದ್ದೇವೆ. ಸರ್ಕಾರ ನಮಗೆ ಸ್ಪಂದಿಸದೇ ಇದ್ದರೆ ಮೌಲ್ಯಮಾಪನ ಬಹಿಷ್ಕಾರದ ಬಗ್ಗೆಯೂ ಗಂಭೀರವಾಗಿ ಚಿಂತನೆ ನಡೆಸುತ್ತಿದ್ದೇವೆ.
-ತಿಮ್ಮಯ್ಯ ಪುರ್ಲೆ, ಅಧ್ಯಕ್ಷ, ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕರ ಸಂಘ.

* ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next