ಮಾನವನ ಬದುಕಿನಲ್ಲಿ ನಿರ್ಧಾರಗಳು ಬಹಳ ಮುಖ್ಯವಾದ ಪಾತ್ರ ವಹಿಸುತ್ತವೆ. ಮನುಷ್ಯ ಯಾವುದೇ ರೀತಿಯ ನಿರ್ಧಾರಗಳನ್ನು ಕೈಗೊಳ್ಳಬೇಕೆಂದರೆ ಅವರ ಆಲೋಚನೆಗಳು, ಭಾವನೆಗಳು, ಪರಿಸ್ಥಿತಿಗಳು ಬಹಳ ಮುಖ್ಯವಾಗುತ್ತವೆ.
ಮನುಷ್ಯನಿಗೆ ಸ್ವಲ್ಪ ಭಯ ಎನ್ನುವುದು ಇರಬೇಕು, ಹಾಗೆಯೇ ಸಮಯಕ್ಕೆ ಸರಿಯಾಗಿ ದೃಢ ನಿರ್ಧಾರ ಕೈಗೊಳ್ಳುವ ಧೈರ್ಯವೂ ಇದ್ದರೆ ಜೀವನದಲ್ಲಿ ಹಿಂದೆ ತಿರುಗಿ ನೋಡುವ ಮಾತೇ ಇರುವುದಿಲ್ಲ. ಮನುಷ್ಯ ಜೀವನದ ಸತ್ಯವನ್ನು ತಿಳಿದಾಗಲೇ ನಿರ್ಧಾರಗಳನ್ನು ಕೈಗೊಳ್ಳುವುದಕ್ಕೆ ಸಹಾಯವಾಗುತ್ತದೆ. ನಿರ್ಧಾರಗಳೇ ಬದುಕನ್ನು ನಿರ್ಣಯಿಸುತ್ತವೆ ಎನ್ನುವುದನ್ನು ನಾವು ಮರೆಯಲು ಸಾಧ್ಯವಿಲ್ಲ.
ನಾವು ತೆಗೆದುಕೊಳ್ಳುವ ನಿರ್ಧಾರಗಳು ಒಂದು ನಿರ್ದಿಷ್ಟ ಗುರಿಯನ್ನು ಹೊಂದಿರಬೇಕು. ಗಾಳಿ ಬೀಸಿದಂತೆ, ಅಲೆಗಳು ಸಮುದ್ರದ ದಡ ಮುಟ್ಟಿದಂತೆ ನಾವು ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಯಾಕೆಂದರೆ ಗಾಳಿಯು ಕಾಲಕ್ಕೆ ಅನುಗುಣವಾಗಿ ತನ್ನ ದಿಕ್ಕನ್ನು ಬದಲಾಯಿಸುತ್ತದೆ ಮತ್ತು ಸಮುದ್ರದ ಅಲೆಗಳು ಕೂಡ ಅಷ್ಟೇ. ನಮ್ಮ ನಿರ್ಧಾರಗಳು ದಿಕ್ಕನ್ನು ಬದಲಾಯಿಸದೆ ಮತ್ತು ಕಾಲಕ್ಕೆ ಅನುಗುಣವಾಗಿ ಬದಲಾಗದೇ ನಿರ್ದಿಷ್ಟ ಗುರಿಯನ್ನು ಹೊಂದಿರಬೇಕು.
ಆತುರದಲ್ಲಿ ತೆಗೆದುಕೊಂಡ ನಿರ್ಧಾರ ಬದುಕನ್ನು ಸುಡಲೂಬಹುದು ಹಾಗೆಯೇ ಜೀವನವನ್ನು ಬೆಳಗಲೂಬಹುದು. ಇದನ್ನು ಅರಿಯುವುದು ತುಂಬಾ ಮುಖ್ಯ. ನಮ್ಮ ನಿರ್ಧಾರಗಳು ನಮ್ಮನ್ನೇ ನಾಶ ಮಾಡುವಂತಿರಬಾರದು. ನಾವು ತುಂಬಾ ಭಾವುಕರಾದಾಗ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ವಿವೇಕಯುತವಾಗಿ ತೆಗೆದುಕೊಂಡ ನಿರ್ಧಾರಗಳು ನಮ್ಮ ಜೀವನದ ದಿಕ್ಕನ್ನೇ ಬದಲಾಯಿಸುತ್ತವೆ. ನಿರ್ಧಾರಗಳು ಜೀವನದಲ್ಲಿ ಜುಗುಪ್ಸೆಯನ್ನು ಉಂಟು ಮಾಡಲೂಬಹುದು ಎನ್ನುವುದನ್ನು ಮರೆಯಲು ಸಾಧ್ಯವಿಲ್ಲ.
-ಲೋಕೇಶ್ ಎಸ್. ಎನ್.
ಶಿರಾ