Advertisement

ತೊಗರಿ ಖರೀದಿಗೆ ಪ್ರಸ್ತಾವನೆ ಸಲ್ಲಿಸಲು ನಿರ್ಧಾರ

03:13 PM Nov 30, 2018 | Team Udayavani |

ಯಾದಗಿರಿ: ಕೇಂದ್ರ ಸರ್ಕಾರವು 2018-19ನೇ ಸಾಲಿನ ಮುಂಗಾರು ಹಂಗಾಮಿನ ಎಫ್‌ಎಕ್ಯೂ ಗುಣಮಟ್ಟದ ಕ್ವಿಂಟಲ್‌ ತೊಗರಿಗೆ 5,675 ರೂ. ಬೆಂಬಲ ಬೆಲೆ ಘೋಷಿಸಿದೆ. ಅದರಂತೆ ಜಿಲ್ಲೆಯಲ್ಲಿ ಬಿತ್ತನೆಯಾದ 75 ಸಾವಿರ ಹೆಕ್ಟೇರ್‌ ಪ್ರದೇಶದಿಂದ ಬರುವ ಸುಮಾರು 7 ಲಕ್ಷ ಕ್ವಿಂಟಲ್‌ ತೊಗರಿಯನ್ನು ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಖರೀದಿಸುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ಅಧ್ಯಕ್ಷತೆಯ ಜಿಲ್ಲಾ ಟಾಸ್ಕ್ ಕೋರ್ಸ್‌ ಸಮಿತಿ ನಿರ್ಧರಿಸಿತು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಟಾಸ್ಕ್ ಕೋರ್ಸ್‌ ಸಮಿತಿ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ಕಳೆದ ವರ್ಷ ತೊಗರಿ ಖರೀದಿಯಲ್ಲಿ ಕಂಡು ಬಂದ ಲೋಪ ದೋಷಗಳು ಈ ವರ್ಷ ಮರುಕಳಿಸದಂತೆ ಸಂಬಂಧಪಟ್ಟ ಇಲಾಖೆಗಳು ಅಗತ್ಯ ಪೂರ್ವಸಿದ್ಧತೆ ಕೈಗೊಳ್ಳಬೇಕು. ಖರೀದಿ ಪ್ರಮಾಣಕ್ಕನುಗುಣವಾಗಿ ಖಾಲಿ ಚೀಲಗಳ ಕೊರತೆ ಆಗದಂತೆ ಎಚ್ಚರ ವಹಿಸಬೇಕು. ಗೋದಾಮುಗಳಲ್ಲಿ ತೊಗರಿ ದಾಸ್ತಾನು ಮಾಡಿಕೊಳ್ಳಲು ಸ್ಥಳಾವಕಾಶ ಇಟ್ಟುಕೊಳ್ಳಬೇಕು ಎಂದು ಸೂಚಿಸಿದರು.

ಕಳೆದ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಮತ್ತು ಹೆಸರು ಕಾಳು ಖರೀದಿಸಿದ ಕೆಲ ರೈತರಿಗೆ ಇನ್ನೂ ಹಣ ಸಂದಾಯವಾಗಿಲ್ಲ. ಒಂದು ವಾರದಲ್ಲಿ ಹಣ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳ ಶಹಾಪುರ ಶಾಖಾ ವ್ಯವಸ್ಥಾಪಕ ಮಾರಣ್ಣ ಮತ್ತು ಕೃಷಿ ಮಾರಾಟ ಇಲಾಖೆ ಸಹಾಯಕ ನಿರ್ದೇಶಕ ಭೀಮರಾಯ ಅವರಿಗೆ ಸೂಚನೆ ನೀಡಿದರು.

ಕೆಂಭಾವಿಯಲ್ಲಿ 3 ಸಾವಿರ ಟನ್‌, ಹುಣಸಗಿ 2 ಸಾವಿರ ಟನ್‌, ಸುರಪುರ 9 ಸಾವಿರ ಟನ್‌, ಶಹಾಪುರ 2 ಸಾವಿರ ಟನ್‌, ಹತ್ತಿಗುಡೂರ 10 ಸಾವಿರ ಟನ್‌, ಯಾದಗಿರಿ 1 ಸಾವಿರ ಟನ್‌ ಸೇರಿದಂತೆ ಜಿಲ್ಲೆಯ ಗೋದಾಮುಗಳಲ್ಲಿ ಒಟ್ಟು 27 ಸಾವಿರ ಟನ್‌ ತೊಗರಿ ಸಂಗ್ರಹಕ್ಕೆ ಸ್ಥಳಾವಕಾಶ ಇದೆ. ಹತ್ತಿಗುಡೂರ ಮತ್ತು ಇತರೆ ಗೋದಾಮುಗಳಲ್ಲಿ ಸಂಗ್ರಹಿಸಿರುವ ಹಳೆಯ ಧಾನ್ಯ ಖಾಲಿಯಾದಂತೆ ಇನ್ನೂ ಹೆಚ್ಚಿನ ಸ್ಥಳಾವಕಾಶ ಲಭ್ಯವಾಗುತ್ತದೆ ಎಂದು ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ವ್ಯವಸ್ಥಾಪಕ ರಾಘವೇಂದ್ರರಾವ ಸಭೆಗೆ ಮಾಹಿತಿ ನೀಡಿದರು. ಕಳೆದ ವರ್ಷ 32 ಖರೀದಿ ಕೇಂದ್ರಗಳ ಮೂಲಕ ತೊಗರಿ ಖರೀದಿಸಲಾಗಿದ್ದು, ಈ ವರ್ಷ 35 ಖರೀದಿ ಕೇಂದ್ರಗಳನ್ನು ಸ್ಥಾಪಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಭತ್ತ ಖರೀದಿ ಇಲ್ಲ: 2018-19ನೇ ಸಾಲಿಗೆ ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿದಂತೆ ರೈತರಿಂದ ಸಾಮಾನ್ಯ ಭತ್ತ ಪ್ರತಿ ಕ್ವಿಂಟಲ್‌ಗೆ 1,750 ರೂ. ಗಳಂತೆ ಖರೀದಿಸಲು ರಾಜ್ಯ ಸರ್ಕಾರ ಆದೇಶಿಸಿದೆ. ಆದರೆ, ಮಾರುಕಟ್ಟೆಯಲ್ಲಿ ಬೆಂಬಲ ಬೆಲೆಗಿಂತ ಹೆಚ್ಚಿನ ದರ ಇರುವುದರಿಂದ ಖರೀದಿ ಕೇಂದ್ರ ಸ್ಥಾಪನೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು ಬೇಡ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

Advertisement

ಜಿಲ್ಲೆಯ ಮಾರುಕಟ್ಟೆಯಲ್ಲಿ ಕ್ವಿಂಟಲ್‌ ಭತ್ತಕ್ಕೆ 1,900 ರೂ. ವರೆಗೆ ಬೆಲೆ ಇದೆ. ಹಾಗಾಗಿ, ಖರೀದಿ ಕೇಂದ್ರ ಸ್ಥಾಪನೆ ಅವಶ್ಯಕತೆ ಇರುವುದಿಲ್ಲ ಮತ್ತು ಭತ್ತ ಖರೀದಿ ಕೇಂದ್ರ ಸ್ಥಾಪನೆಗೆ ಸಂಬಂಧಿ ಸಿದಂತೆ ಯಾವುದೇ ಮನವಿ ಬಂದಿಲ್ಲ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ವಿಜಯಾನಂದ ಕೆ. ಡಿಗ್ಗಿಕರ್‌ ಅವರು ಜಿಲ್ಲಾಧಿಕಾರಿ ಗಮನಕ್ಕೆ ತಂದರು.

ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್‌., ಸಹಕಾರ ಸಂಘಗಳ ಉಪ ನಿಬಂಧಕ ವಿಶ್ವನಾಥ ಮಲಕೂಡ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸುನೀಲ್‌ ಬಿಸ್ವಾಸ್‌, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಬಾಬು ಸೇರಿದಂತೆ ಇನ್ನಿತರ ಇಲಾಖೆ ಅಧಿಕಾರಿಗಳು ಇದ್ದರು.

ಪ್ರಸಕ್ತ ವರ್ಷ ಸಕಾಲದಲ್ಲಿ ಮಳೆ ಬಾರದ ಕಾರಣ ತೊಗರಿ ಇಳುವರಿ ಪ್ರಮಾಣ ಪ್ರತಿ ಹೆಕ್ಟೇರ್‌ಗೆ 10ರಿಂದ 12 ಕ್ವಿಂಟಲ್‌ನಂತೆ ಜಿಲ್ಲೆಯಲ್ಲಿ ಸುಮಾರು 5ರಿಂದ 7 ಲಕ್ಷ ಕ್ವಿಂಟಲ್‌ ಇಳುವರಿ ಬರಬಹುದು ಎಂದು ಅಂದಾಜಿಸಲಾಗಿದೆ. ಒಟ್ಟಾರೆ ಬರುವ ತೊಗರಿ ಇಳುವರಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. 
 ಎಂ. ಕೂರ್ಮಾರಾವ್‌, ಜಿಲ್ಲಾಧಿಕಾರಿ 

Advertisement

Udayavani is now on Telegram. Click here to join our channel and stay updated with the latest news.

Next