Advertisement

ಪ್ರತ್ಯೇಕ ಪಾಲಿಕೆಗಾಗಿ 22ರಿಂದ ಹೋರಾಟಕ್ಕೆ ನಿರ್ಧಾರ

05:53 PM Feb 16, 2022 | Team Udayavani |

ಧಾರವಾಡ: ನಗರಕ್ಕೆ ಪ್ರತ್ಯೇಕ ಪಾಲಿಕೆಯ ಹೋರಾಟದ ಮೊದಲ ಹಂತವಾಗಿ ಫೆ. 22ರಂದು ಬೆಳಗ್ಗೆ 10 ಗಂಟೆಗೆ ಡಿಸಿ ಕಚೇರಿ ಎದುರು ಮೌನ ಹಾಗೂ ಸಾಂಕೇತಿಕ ಪ್ರತಿಭಟನೆ ಮಾಡಲು ತೀರ್ಮಾನಿಸಲಾಗಿದೆ.

Advertisement

ಕವಿಸಂನಲ್ಲಿ ಮಂಗಳವಾರ ಸಂಜೆ ವಿವಿಧ ಸಂಘ-ಸಂಸ್ಥೆಗಳು, ಹಿರಿಯ ನಾಗರಿಕರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಹೋರಾಟದ ರೂಪುರೇಷೆ ಕುರಿತು ಸಮಗ್ರವಾಗಿ ಚರ್ಚಿಸಿ ಫೆ.22ರಿಂದ ಹೋರಾಟ ಆರಂಭಿಸಲು ನಿರ್ಧರಿಸಲಾಯಿತು.

ಸ್ಮಾರ್ಟ್‌ಸಿಟಿ ಬರೀ ಹುಬ್ಬಳ್ಳಿಗೆ ಮಾತ್ರ ಸೀಮಿತವಾಗಿದೆ. ಧಾರವಾಡ ದಿನದಿಂದ ದಿನಕ್ಕೆ ಹಿಂದುಳಿಯುತ್ತಿದೆ. ಜಿಲ್ಲಾ ಕೇಂದ್ರ ಧಾರವಾಡ ಇದ್ದರೂ ಸಹ ಪಾಲಿಕೆ ವಿಷಯದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ರಾಜಕಾರಣಿಗಳು ಸಹ ಧಾರವಾಡಕ್ಕೆ ಮಹತ್ವ ನೀಡದೇ ಹುಬ್ಬಳ್ಳಿಗೆ ಆದ್ಯತೆ ನೀಡುತ್ತಿರುವುದು ಬೇಸರದ ಸಂಗತಿ. ಈ ಕಾರಣದಿಂದಲೇ ಪ್ರತ್ಯೇಕ ಪಾಲಿಕೆ ಬೇಕು ಎಂದು ಸಭೆಯಲ್ಲಿದ್ದವರು ಒತ್ತಾಯಿಸಿದರು.

ಸಭೆಯ ಕುರಿತು ನಿರ್ಣಯಗಳನ್ನು ಮಂಡಿಸಿದ ನ್ಯಾಯವಾದಿ ಬಸವ ಪ್ರಭು ಹೊಸಕೇರಿ, ಪ್ರತ್ಯೇಕ ಪಾಲಿಕೆ ಚಿಂತನೆ-ಹೋರಾಟವು ಹುಬ್ಬಳ್ಳಿ ಅಥವಾ ಅದರ ಅಭಿವೃದ್ಧಿ ವಿರುದ್ಧವಲ್ಲ. ಪ್ರತ್ಯೇಕ ಪಾಲಿಕೆ ಕುರಿತಂತೆ ಕಾನೂನಾತ್ಮಕವಾಗಿ ಚಿಂತನೆ ಮಾಡುವುದು, ಮೊದಲ ಹೋರಾಟವಾಗಿ ಫೆ. 22ರಂದು ಮಂಗಳವಾರ ಡಿಸಿ ಕಚೇರಿ ಎದುರು ಎರಡು ಗಂಟೆ ಮೌನ ಪ್ರತಿಭಟನೆ ಜೊತೆಗೆ ಪ್ರತಿ ಶನಿವಾರ ನಿರ್ದಿಷ್ಟ ಸಮಯಕ್ಕೆ ಹೋರಾಟಗಾರರು ಸೇರಿ ಮುಂದಿನ
ರೂಪುರೇಷೆ ಹಾಕುವುದು. ಸಾರ್ವಜನಿಕರು, ಹೋರಾಟಗಾರರನ್ನು ಒಗ್ಗೂಡಿಸಲು ಆಯಾ ವಾರ್ಡ್‌ಗಳಲ್ಲಿ ಗುಂಪುಗಳ ರಚನೆ, ಹೋರಾಟಕ್ಕೆ ದಿಕ್ಕು ತೋರಿಸಲು ವಾಟ್ಸ್ ಆ್ಯಪ್‌ ಗ್ರುಪ್‌ ಸೇರಿದಂತೆ ಸಾಮಾಜಿಕ ಜಾಲತಾಣ ಬಳಸಿಕೊಳ್ಳುವುದು ಹಾಗೂ ಹಂತ ಹಂತವಾಗಿ ಮಾಡಬೇಕಾದ ಕಾರ್ಯಗಳ ಬಗ್ಗೆ ಸಭೆ ಮಾಡುವುದನ್ನು ಸ್ಪಷ್ಟಪಡಿಸಿದರು. ಎಸ್‌.ವಿ. ಕುಲಕರ್ಣಿ, ಎಸ್‌.ಬಿ. ದ್ವಾರಪಾಲಕ, ಶಂಕರ ಹಲಗತ್ತಿ, ಮನೋಜ ಪಾಟೀಲ, ಕೆ.ಎಚ್‌. ನಾಯಕ, ವೀರಣ್ಣ ಒಡ್ಡೀನ ಮಾತನಾಡಿದರು.

ಹೋರಾಟಕ್ಕೆ ಸಲಹೆಗಳು: ಕರಬಾಕಿ ಕಟ್ಟದೇ ಧರಣಿ ಮಾಡೋಣ ಎಂದು ಮಲ್ಲಿಕಾರ್ಜುನ ಚಿಕ್ಕಮಠ, ಹೈಕೋರ್ಟ್‌ ಮಾದರಿಯಲ್ಲಿ ಈ ಹೋರಾಟ ನಡೆಯಲಿ ಎಂದು ರಾಜ್ಯ ವಕೀಲರ ಪರಿಷತ್‌ ಸದಸ್ಯ ವಿ.ಡಿ. ಕಾಮರಡ್ಡಿ, ಧಾರವಾಡದ ಪಾಲಿಕೆ ಕಚೇರಿಗೆ ಬೀಗ ಹಾಕೋಣ ಎಂದು ಚನ್ನಬಸ್ಸು ಮಾಳಗಿ, ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕೋಣ ಎಂದು ಮಹಾದೇವ ದೊಡಮನಿ, ಆಡಳಿತದ ದೃಷ್ಟಿಯಿಂದ ಧಾರವಾಡ, ಹಾವೇರಿ, ಗದಗ ಜಿಲ್ಲೆ ಪ್ರತ್ಯೇಕ ಮಾಡಿದಂತೆ ಹುಬ್ಬಳ್ಳಿಯಿಂದ ಧಾರವಾಡ ಸಹ ಪ್ರತ್ಯೇಕ ಮಾಡಲು ಸರ್ಕಾರಕ್ಕೆ ಅವಕಾಶವಿದೆ ಎಂದು ಲಿಂಗರಾಜ ಸರದೇಸಾಯಿ ತಮ್ಮ ಅಭಿಪ್ರಾಯ ಪ್ರತಿಪಾದಿಸಿದರು.

Advertisement

ಕೆಎಂಸಿ ಕಾಯ್ದೆ ಪ್ರಕಾರ 4 ಲಕ್ಷ ಜನಸಂಖ್ಯೆ ಹೊಂದಿದ ನಗರಕ್ಕೆ ಮಹಾನಗರ ಪಾಲಿಕೆಯ ಅರ್ಹತೆ ಇದೆ. ಅದನ್ನು ಧಾರವಾಡ ಹೊಂದಿದೆ. ಸದ್ಯ 29 ಪಾಲಿಕೆ ಸದಸ್ಯರಿದ್ದಾರೆ. ಪ್ರತ್ಯೇಕ ಪಾಲಿಕೆಯಾದರೆ ಇನ್ನಷ್ಟು ಸದಸ್ಯರ ಸಂಖ್ಯೆ ಹೆಚ್ಚಾಗಲಿದೆ. ಪ್ರತ್ಯೇಕ ಬಜೆಟ್‌ ಮಂಡಿಸಲು ಅವಕಾಶ ದೊರೆಯಲಿದ್ದು, ಧಾರವಾಡದ ಅಭಿವೃದ್ಧಿ ಸಾಧ್ಯವಾಗಲಿದೆ.
ವೆಂಕಟೇಶ ಮಾಚಕನೂರ,
ಪ್ರತ್ಯೇಕ ಪಾಲಿಕೆ ಹೋರಾಟ ಸಮಿತಿ ಸದಸ್ಯ

ಹುಬ್ಬಳ್ಳಿಯಲ್ಲಿ ಅಧಿಕಾರ, ರಾಜಕೀಯ ಎಲ್ಲವೂ ಕೇಂದ್ರೀಕೃತವಾಗಿದ್ದು ಅವರಿಂದ ಧಾರವಾಡ ಬಿಡಿಸಿಕೊಳ್ಳುವುದು ತುಸು ಕಷ್ಟ. ಆದ್ದರಿಂದ ಪ್ರತ್ಯೇಕ ಪಾಲಿಕೆ ಹೋರಾಟ ಜನಪರ ಚಳವಳಿಯಾಗಬೇಕು. ಈ ಹೋರಾಟಕ್ಕೆ ಧಾರವಾಡದ ಎಲ್ಲ ವಾರ್ಡ್ ಗಳ ಸದಸ್ಯರು, ಜನರ ಬೆಂಬಲ ಸಿಗಬೇಕು.
ಎಂ.ಬಿ. ಕಟ್ಟಿ, ಹೋರಾಟಗಾರ

931 ಕೋಟಿ ವೆಚ್ಚದಲ್ಲಿ ಸ್ಮಾರ್ಟ್‌ ಸಿಟಿ ಕಾಮಗಾರಿಗಳೆಲ್ಲವೂ ಹುಬ್ಬಳ್ಳಿಯಲ್ಲಿಯೇ ನಡೆಯುತ್ತಿವೆ. ಶೇ.78 ಅನುದಾನ ಹುಬ್ಬಳ್ಳಿಗೆ ಸೀಮಿತವಾಗಿದ್ದು ಬೇಸರದ ಸಂಗತಿ. ಭೌತಿಕ ಚಳವಳಿ ಜೊತೆಗೆ ಸಾಮಾಜಿಕ ಮಾಧ್ಯಮಗಳ ಮೂಲಕವೂ ಹಕ್ಕು ಪ್ರತಿಪಾದಿಸಬೇಕಿದೆ.
ರವಿ ಮಾಳಿಗೇರ, ಕವಿವಿ ಸಿಂಡಿಕೇಟ್‌ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next