Advertisement

ಬಿಸಿಯೂಟ ಸ್ಥಗಿತಗೊಳಿಸಲು ನಿರ್ಧಾರ

01:09 PM Feb 08, 2018 | |

ಬೆಂಗಳೂರು: ಕನಿಷ್ಠ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಒಕ್ಕೂಟ ನಡೆಸುತ್ತಿರುವ ಧರಣಿ ತೀವ್ರಸ್ವರೂಪ ಪಡೆದುಕೊಂಡಿದ್ದು, ಅನಿರ್ದಿಷ್ಟಾವಧಿ ಮುಷ್ಕರಕ್ಕೆ ನಿರ್ಧರಿಸಿದೆ. ಈ ಮೂಲಕ ಗುರುವಾರದಿಂದ ರಾಜ್ಯದ ಬಹುತೇಕ ಶಾಲೆಗಳಲ್ಲಿ ಬಿಸಿಯೂಟ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

Advertisement

ಕಳೆದೆರಡು ದಿನಗಳಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಧರಣಿ ನಡೆಸುತ್ತಿರುವ ಬಿಸಿಯೂಟ ತಯಾರಕರು, ಸರ್ಕಾರ ಇದುವರೆಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸಂಘ ಕರೆ ನೀಡಿದೆ. ಅದರಂತೆ ರಾಜ್ಯದ ನಾನಾ ಭಾಗಗಳಿಂದ ಸುಮಾರು ಹತ್ತು ಸಾವಿರ ಬಿಸಿಯೂಟ ತಯಾರಕರು ನಗರಕ್ಕೆ ಆಗಮಿಸಲಿದ್ದು, ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ. 

ಒಕ್ಕೂಟದ ಕಾರ್ಯಕರ್ತರೆಲ್ಲರೂ ಮುಷ್ಕರದಲ್ಲಿ ಭಾಗವಹಿಸುವುದರಿಂದ ಬಿಸಿಯೂಟ ತಯಾರಿಕೆ ಕಾರ್ಯ ಸ್ಥಗಿತಗೊಳ್ಳಲಿದೆ. ಮಕ್ಕಳಿಗೆ ತೊಂದರೆ ಕೊಡುವುದು ಇದರ ಉದ್ದೇಶ ಅಲ್ಲ. ಸರ್ಕಾರದ ಗಮನಸೆಳೆಯಲು ಇದು ಅನಿವಾರ್ಯ. ಆದರೆ, ಶಾಲಾ ಆಡಳಿತ ಮಂಡಳಿಯು ಪರ್ಯಾಯವಾಗಿ ಬಿಸಿಯೂಟ ತಯಾರಿಸಿ, ಮಕ್ಕಳಿಗೆ ಪೂರೈಸಲು ನಮ್ಮ ತಕರಾರು ಇಲ್ಲ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೆಸ್ತ “ಉದಯವಾಣಿ’ಗೆ ಸ್ಪಷ್ಟಪಡಿಸಿದ್ದಾರೆ. 

ರಾಜ್ಯದ ಬೀದರ್‌, ಕಲುಬುರಗಿ, ಬೆಳಗಾವಿ, ಬಾಗಲಕೋಟೆ, ಗದಗ, ಮೈಸೂರು, ಚಾಮರಾಜನಗರ, ಬಳ್ಳಾರಿ, ಕೋಲಾರ,
ತುಮಕೂರು, ಕೊಡಗು, ಉತ್ತರಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಹಾಗೂ ಹೊಳಲ್ಕೆರೆ, ಹಿರಿಯೂರು ತಾಲೂಕುಗಳ ಸರ್ಕಾರಿ ಪ್ರಾಥಮಿಕ, ಪ್ರೌಢ ಹಾಗೂ ಖಾಸಗಿ ಅನುದಾನಿತ ಶಾಲೆಗಳಲ್ಲಿ ಬಿಸಿಯೂಟ ಬಂದ್‌ ಆಗಲಿದೆ. ಸುಮಾರು 10 ಸಾವಿರ ಮಂದಿ ಬಿಸಿಯೂಟ ನೌಕರರು ಬೆಂಗಳೂರು ಚಲೋದಲ್ಲಿ ಭಾಗವಹಿಸಲಿದ್ದಾರೆ. ಅಂದು ಬೆಳಗ್ಗೆ 11.30ಕ್ಕೆ ಪ್ರತಿಭಟನಾ ಮೆರವಣಿಗೆ ಹೊರಡಲಿದೆ. ನಂತರ ಕಾಳಿದಾಸ ರಸ್ತೆಯಲ್ಲಿ ಮುಷ್ಕರ ಮುಂದುವರಿಯಲಿದೆ ಎಂದು ಹೇಳಿದರು. 

40 ಸಾವಿರ ಶಾಲೆಗಳಿಗೆ ತಟ್ಟಲಿದೆ ಬಿಸಿ?: ರಾಜ್ಯದಲ್ಲಿ  ಮಾರು 55 ಸಾವಿರ ಸರ್ಕಾರಿ ಶಾಲೆಗಳಿದ್ದು, ಈ ಪೈಕಿ ಅಂದಾಜು ಹತ್ತು ಸಾವಿರ ಶಾಲೆಗಳಲ್ಲಿ ಇಸ್ಕಾನ್‌, ಅದಮ್ಯ ಚೇತನದಂತಹ ಸರ್ಕಾರೇತರ ಸಂಘ- ಸಂಸ್ಥೆಗಳು ಬಿಸಿಯೂಟ ಪೂರೈಸುತ್ತಿವೆ. ಉಳಿದೆಡೆ ಬಿಸಿಯೂಟ ತಯಾರಕರಿದ್ದಾರೆ. ಅಲ್ಲೆಲ್ಲಾ ಮುಷ್ಕರದ ಬಿಸಿ ತಟ್ಟುವ ಸಾಧ್ಯತೆ ಇದೆ ಎಂದು ಮಾಲಿನಿ ಮೆಸ್ತ ತಿಳಿಸಿದರು. ಬೇಡಿಕೆ ಈಡೇರಿದರೆ ಮುಷ್ಕರ ಹಿಂಪಡೆಯಲಾಗುವುದು ಎಂದು ಹೇಳಿದರು.

Advertisement

ಆತಂಕದಲ್ಲೇ ರಾತ್ರಿ ಕಳೆದರು: ಈ ಮಧ್ಯೆ ಬುಧವಾರ ಕೂಡ ಧರಣಿನಿರತರು ಕೊರೆವ ಚಳಿಯಲ್ಲಿ ರಾತ್ರಿ ಕಳೆದರು. ಇನ್ನು
ಬುಧವಾರ ಸಂಜೆಯ ಅಕಾಲಿಕ ಮಳೆ ಮತ್ತಷ್ಟು ಕಿರಿಕಿರಿ ಉಂಟುಮಾಡಿತು. ಆದಾಗ್ಯೂ ಜಾಗಬಿಟ್ಟು ಕದಲದ ಮಹಿಳೆಯರು, ಉದ್ಯಾನದ ಅಕ್ಕಪಕ್ಕದ ರಸ್ತೆ, ಫ‌ುಟ್‌ಪಾತ್‌ಗಳಲ್ಲಿ, ರಸ್ತೆ ಯಲ್ಲಿ ಬಿದ್ದ ಕಸವನ್ನೇ ಪಕ್ಕಕ್ಕೆ ಸರಿಸಿ ಜಾಗ ಸಿಕ್ಕಲ್ಲಿ ಮಕ್ಕಳೊಂದಿಗೆ ಆತಂಕದಲ್ಲೇ ರಾತ್ರಿ ಕಳೆದರು.

Advertisement

Udayavani is now on Telegram. Click here to join our channel and stay updated with the latest news.

Next